ಕೊಪ್ಪಳ: ಭೂಸ್ವಾಧಿಧೀನ ಪಡಿಸಿಕೊಳ್ಳುತ್ತಿರುವ ಜಮೀನುಗಳಲ್ಲಿ ಕೆಲವು ಭೂ ಮಾಲೀಕರು ಪರಿಹಾರ ಧನ ಪಾವತಿಸದೇ ಇರುವ ಕಾರಣ ರೈಲ್ವೆ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಇರುವ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸಿ ಕಾಮಗಾರಿಗಳಿಗೆ ಅಡ್ಡಿಪಡಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈಲ್ವೆ ಇಲಾಖೆ ಕಾಮಗಾರಿಗಳಿಗೆ ಅಗತ್ಯವಿರುವ ಜಮೀನು ಗುರುತಿಸಿರುವ ಬಗ್ಗೆ ಹಾಗೂ ಭೂ ಮಾಲೀಕರಿಗೆ ಪರಿಹಾರಧನ ಪಾವತಿಸುವ ಬಗ್ಗೆ ಹಮ್ಮಿಕೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗದಗ-ವಾಡಿ ರೈಲ್ವೆ ಯೋಜನೆಗಾಗಿ ಜಿಲ್ಲೆಯ ಯಲಬುರ್ಗಾ, ಕುಕನೂರು ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ ಒಟ್ಟು 1213.05 ಎಕರೆ ಜಮೀನನ್ನು ಸ್ವಾಧಿಧೀನಪಡಿಸಿಕೊಳ್ಳುತ್ತಿದ್ದು, ಈ ಪೈಕಿ 811.26 ಎಕರೆ ಜಮೀನನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ ಭೂ ಮಾಲೀಕರು ಅದಲು-ಬದಲು ಪ್ರಕರಣಗಳು, ಮರ, ಮಾಲ್ಕಿ ಹಾಗೂ ಜಮೀನಿನ ಪರಿಹಾರ ಧನ ಪಾವತಿಸದೇ ಇರುವ ಕಾರಣ ರೈಲ್ವೆ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ತಹಶೀಲ್ದಾರ್, ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಧಾರವಾಡದ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಗಳು ಸಮಸ್ಯೆಗಳ ಇರುವ ಜಾಗೆಗಳಿಗೆ ಭೇಟಿ ನೀಡಿ ರೈತರ ಮನವೊಲಿಸಿ ಕಾಮಗಾರಿ ಅಡ್ಡಿಪಡಿಸದಂತೆ ನೋಡಿಕೊಳ್ಳಬೇಕು ಎಂದರು.
ಮುನಿರಾಬಾದ್-ಮೆಹಬೂಬನಗರ ರೈಲ್ವೆ ಯೋಜನೆಯಡಿ ಒಟ್ಟು 1085.37 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದು, ಅದರ ಪೈಕಿ ಸುಮಾರು 100 ಎಕರೆ ಜಮೀನಿನ ಪಹಣಿ ಪತ್ರಿಕೆಗಳಲ್ಲಿ ರೈಲ್ವೆ ಇಲಾಖೆಯ ಹೆಸರು ಕಾಲೋಚಿತಗೊಂಡಿರುವುದಿಲ್ಲ. ಇನ್ನು ಆರ್‌ಒಬಿ ಮತ್ತು ಆರ್‌ಯುಬಿಗಳ ನಿರ್ಮಾಣದಡಿ ಎಲ್‌ಸಿ ಸಂಖ್ಯೆ-63 (ಸ್ವಾಮಿ ವಿವೇಕಾನಂದ ಶಾಲೆ)ರಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಎಲ್‌ಸಿ-65 (ಕೆಇಬಿ ಕಚೇರಿ) ರಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ನಿರ್ವಹಿಸಲು ರೈಲ್ವೆ ಇಲಾಖೆಯಿಂದ ಟೆಂಡರ್ ಕರೆಯಬೇಕಾಗಿದೆ. ಕುಷ್ಟಗಿ ರಸ್ತೆಯ ಎಲ್‌ಸಿ-66ರಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ನಿರ್ವಹಿಸಲು ರೈಲ್ವೆ ಇಲಾಖೆಯಿಂದ ಟೆಂಡರ್ ಕರೆಯಲಾಗಿದೆ ಎಂದರು.
ಕೊಪ್ಪಳ ನಗರ ಎಲ್‌ಸಿ-68 ಗಂಗಾವತಿ ರಸ್ತೆ ಹತ್ತಿರ ರಸ್ತೆ ಮೇಲು ಸೇತುವೆ ನಿರ್ಮಾಣ ಹಾಗೂ ಬನ್ನಿಕೊಪ್ಪ ಹಾಗೂ ಭಾನಾಪೂರ ನಡುವೆ ಬರುವ ಎಲ್‌ಸಿ-51ರಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ವೆಚ್ಚ ಹಂಚಿಕೆ ಯೋಜನೆಯಡಿ ಅನುಮೋದನೆಗಾಗಿ ಬಾಕಿಯಿದೆ. ಎಲ್‌ಸಿ 72 ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮದಲ್ಲಿ ರಸ್ತೆ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ನಿರ್ವಹಿಸಲು ರೈಲ್ವೆ ಇಲಾಖೆಯಿಂದ ಟೆಂಡರ್ ಕರೆಯಲಾಗಿದೆ. ಮುನಿರಾಬಾದ್ ಗ್ರಾಮದ ಎಲ್‌ಸಿ-79ರಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಭೂಸ್ವಾಧಿಧೀನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಭೂ ಮಾಲೀಕರ ಸಭೆ ನಡೆಸಲಾಗಿದೆ ಎಂದರು.
ಗ್ರಾಮಾಂತರ ವಸತಿ ಯೋಜನೆಗಳಡಿ ಸಂಬಂಧಿಸಿದ ತಹಶೀಲ್ದಾರ್ ರು ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಆಶ್ರಯ ಯೋಜನೆಗಳಿಗೆ ಸರ್ಕಾರಿ ಜಮೀನುಗಳನ್ನು ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ರಘುನಂದನ್ ಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ ಸೇರಿದಂತೆ ರೈಲ್ವೆ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ರು ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿದ್ದರು.