Advertisement

ಮರ ಕಡಿದವರ ವಿರುದ್ದ ಕ್ರಮಕ್ಕೆ ಆಗ್ರಹ

03:47 PM Apr 05, 2022 | Team Udayavani |

ಚಿಕ್ಕಮಗಳೂರು: ರಾಮನಹಳ್ಳಿ ಬಡಾವಣೆಯಲ್ಲಿರುವ ನೀರು ಶುದ್ಧೀಕರಣದ ಘಟಕದ ಆವರಣದಲ್ಲಿದ್ದ ನೂರಾರು ವರ್ಷಗಳ ಹಳೆಯ ಬೆಲೆ ಬಾಳುವ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಹಾಡಹಗಲೇ ಕಡಿದಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಸೋಮವಾರ ನಗರದ ರಾಮನಹಳ್ಳಿ ಬಡಾವಣೆಯಲ್ಲಿರುವ ನೀರು ಶುದ್ಧೀಕರಣದ ಘಟಕದ ಆವರಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಅರಣ್ಯ ಕಾನೂನುಗಳಿಗೆ ಗೌರವ ನೀಡದೆ ಸರ್ವಾಧಿ ಕಾರಿಗಳಂತೆ ಅಧಿಕಾರ ಚಲಾಯಿಸುತ್ತಿದ್ದಾರೆ. ಅರಣ್ಯ ಇಲಾಖೆ ಅನುಮತಿ ಪಡೆಯದೆ ನೂರಾರು ವರ್ಷಗಳ ಹಳೆಯ ಮರಗಳನ್ನು ಹಾಡಹಗಲೇ ಕಡಿಸುವ ಮೂಲಕ ನಗರಸಭೆ ಅಧಿಕಾರಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಅಕ್ರಮವಾಗಿ ಮರಗಳನ್ನು ಕಡಿದಿರುವವರು ಹಾಗೂ ಕಡಿಯಲು ಕಾರಣರಾದವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ವಹಿಸದೇ ಮೌನಕ್ಕೆ ಶರಣಾಗಿದ್ದಾರೆಂದು ಆರೋಪಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ| ಕೆ.ಪಿ.ಅಂಶುಮಂತ್‌ ಮಾತನಾಡಿ, ಹಾಡಹಗಲೇ ಮರಗಳ್ಳತನ ಆಗಿದ್ದರೂ ನಗರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಈ ಮೂಲಕ ನಗರಸಭೆ ಆಯುಕ್ತರು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಲ್ಲಿನ ಶಾಸಕರು ರಕ್ಷಕರಾಗದೇ ಶೋಷಕರಾಗಿದ್ದಾರೆ. ಹೀಗಾಗಿ ಸರ್ಕಾರಿ ಆಸ್ತಿ ಲೂಟಿಯಾಗುತ್ತಿದೆ. ಈ ಪ್ರಕರಣದ ತಪ್ಪಿತಸ್ಥರಿಗೆ ಕಾನೂನು ಕ್ರಮವಾಗದಿದ್ದರೆ ನಿರಂತರ ಹೋರಾಟ ನಡೆಸುವುದಾಗಿ ತಿಳಿಸಿದರು.

ನಗರದ ಹೃದಯ ಭಾಗದಲ್ಲಿರುವ ಫಿಲ್ಟರ್‌ಬೆಡ್‌ ಆವರಣದಲ್ಲಿ ನೂರಾರು ಮರಗಳಿದ್ದು, ಈ ಮರಗಳು ನಗರದ ಜನರಿಗೆ ಶುದ್ಧ ಗಾಳಿ ನೀಡುವುದರೊಂದಿಗೆ ಹಸಿರಿನ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದ್ದವು. ಮರಗಳನ್ನು ಕಡಿಯುವಾಗ ಅರಣ್ಯ ಇಲಾಖೆ ಅನುಮತಿ ಕಡ್ಡಾಯ. ಆದರೆ ಅನುಮತಿ ಇಲ್ಲದೆ ಮರಗಳನ್ನು ಕಡಿದಿದ್ದು, ಇದು ಅರಣ್ಯ ಇಲಾಖೆ ಗಮನಕ್ಕೆ ಬಂದಿದ್ದರೂ ಯಾವುದೇ ದೂರು ದಾಖಲಾಗಿಲ್ಲ. ಈ ಸಂಬಂಧ ಡಿಎಫ್‌ಒ ಸ್ಥಳಕ್ಕಾಗಮಿಸಬೇಕು ಎಂದು ಪಟ್ಟುಹಿಡಿದರು.

Advertisement

ಕೆಪಿಸಿಸಿ ವಕ್ತಾರ ಎಚ್‌.ಎಚ್‌. ದೇವರಾಜ್‌ ಮಾತನಾಡಿ, ಒಬ್ಬ ರೈತ ಮರದ ಕೊಂಬೆಯೊಂದನ್ನು ಕಡಿದರೆ ಅವರನ್ನು ಜೈಲಿಗೆ ಹಾಕಿಸುವ ಪರಿಸರವಾದಿಗಳು ಸದ್ಯ ನಾಪತ್ತೆಯಾಗಿದ್ದಾರೆ. 60-70 ಮರಗಳನ್ನು ಅಕ್ರಮವಾಗಿ ಕಡಿದಿದ್ದು, ನಕಲಿ ಪರಿಸರವಾದಿಗಳು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಲ್ಲಿನ ನಗರಸಭೆ ಆಯುಕ್ತರು ಕಾನೂನು ಕೈಗೆತ್ತಿಕೊಂಡು ಯಾವ ಇಲಾಖೆಯ ಅನುಮತಿಯನ್ನೂ ಪಡೆ ಯದೆ ಮರಗಳನ್ನು ಕಡಿಸಿದ್ದಾರೆ. ಕೂಡಲೇ ನಗರಸಭೆ ಪೌರಾಯುಕ್ತ, ಅಧ್ಯಕ್ಷರು ಹಾಗೂ ಮರ ಕಡಿದವರ ವಿರುದ್ಧ ಅರಣ್ಯ ಇಲಾಖೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಮಹಿಳಾ ಕಾಂಗ್ರೆಸ್‌ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ನಗರವನ್ನು ಹಸಿರು, ಸುಂದರ ಮಾಡುತ್ತೇವೆ ಎಂದು ಹೇಳುವ ನಗರಸಭೆಯೇ ಮರಗಳನ್ನು ಕಡಿದಿದೆ. ನೀವು ಮಾಡಿದ್ದೇ ಕಾನೂನು ಆಡಿದ್ದೇ ಆಟವಾ ಎಂದು ಟೀಕಿಸಿ, ಸಿ.ಟಿ.ರವಿ ಹಾಗೂ ರಾಜ್ಯ ಸರ್ಕಾರ ಸರ್ವಾಧಿಕಾರಿ ಆಡಳಿತ ನೀಡುತ್ತಿದ್ದು, ಇವರ ಆಳ್ವಿಕೆಯಲ್ಲಿ ಪ್ರಭಾವಿಗಳಿಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನು ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎ.ಎನ್‌. ಮಹೇಶ್‌, ಎಂ.ಸಿ. ಶಿವಾನಂದಸ್ವಾಮಿ, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಂ.ಎಲ್‌. ಮೂರ್ತಿ, ಮಂಜೇಗೌಡ, ರಸೂಲ್‌ ಖಾನ್‌, ನಗರಸಭೆ ಕಾಂಗ್ರೆಸ್‌ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next