ಹಾವೇರಿ: ಜಿಲ್ಲೆಯಲ್ಲಿ ಪುರುಷ ಮತ್ತು ಮಹಿಳೆಯರ ನಡುವೆ ಇರುವ ಸಾಕ್ಷರತಾ ಅಂತರವನ್ನು ತೊಡೆಯಲು ಮಹಿಳಾ ಸಾಕ್ಷರತಾ ಪ್ರಮಾಣವನ್ನು ಹೆಚ್ಚು ಮಾಡಲು ಅಗತ್ಯ ಕಾರ್ಯಕ್ರಮ ರೂಪಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಜಿಲ್ಲಾ ವಯಸ್ಕರ ಶಿಕ್ಷಣಾಧಿ ಕಾರಿಯವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ನಗರ ಸಾಕ್ಷರ ಸಮಿತಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶೇ. 95ರಷ್ಟು ಸಾಕ್ಷರತಾ ಪ್ರಮಾಣ ಸಾಧಿಸುವ ನಿಟ್ಟಿನಲ್ಲಿ ವಿವಿಧ ಸ್ವಯಂ ಸೇವಾ ಸಂಘಗಳು, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಿಗಳ ನೆರವು ಪಡೆದು ಅವರನ್ನು ಈ ಕಾರ್ಯಕ್ರಮದಲ್ಲಿ ಸಹಭಾಗಿಗಳನ್ನಾಗಿ ಮಾಡಿಕೊಂಡು ನಿಗದಿತ ಗುರಿ ಸಾಧಿಸುವಂತೆ ಕಾರ್ಯಕ್ರಮ ಆಯೋಜಿಸಲು ಅವರು ಸೂಚಿಸಿದರು.
ಜಿಲ್ಲೆಯ ಪುರಷ ಸಾಕ್ಷರತೆ ಶೇ. 84.22ರಷ್ಟಿದೆ ಹಾಗೂ ಮಹಿಳಾ ಸಾಕ್ಷರತೆ 70.65ರಷ್ಟಿದೆ. ಒಟ್ಟು ಸಾಕ್ಷರತೆ 77.60 ರಷ್ಟಿದೆ. ಪುರುಷ ಮತ್ತು ಮಹಿಳೆಯರ ಸಾಕ್ಷರತಾ ಪ್ರಮಾಣದ ವ್ಯತ್ಯಾಸ 13.57 ರಷ್ಟಿದ್ದು, ಮಹಿಳಾ ಸಾಕ್ಷರತೆಗೆ ಹೆಚ್ಚು ಒತ್ತು ನೀಡಬೇಕು. ಈ ಅಂತರ ಕಡಿಮೆಯಾಗಬೇಕು. 2021ರ ವೇಳೆಗೆ ಜಿಲ್ಲೆಯಲ್ಲಿ ಶೇ.95ರಷ್ಟು ಸಾಕ್ಷರತೆ ಸಾಧಿಸಬೇಕು ಎಂದು ಸೂಚಿಸಿದರು.
ಸಾಕ್ಷರತಾ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಇಲಾಖಾ ಅಧಿಕಾರಿಗಳು ಸಹಕಾರ ನೀಡಬೇಕು. ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕು ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಸಾಕ್ಷರತಾ ಕಾರ್ಯಕ್ರಮಗಳ ಪ್ರಗತಿ ಮಂಡಿಸಿದರು. 18-19 ನೇ ಸಾಲಿನಲ್ಲಿ 25,404 ಕಲಿಕಾರ್ಥಿಗಳು ಮೌಲ್ಯಮಾಪನ ಹಂತದಲ್ಲಿದ್ದಾರೆ ಹಾಗೂ 2019-20ನೇ ಸಾಲಿನಲ್ಲಿ ಸುಮಾರು 15,000 ಅನಕ್ಷರಸ್ಥರ ಸಮಿಕ್ಷೆ ಕಾರ್ಯ ನಡೆದಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಕಾರ್ಯಕ್ರಮ ಸಹಾಯಕರು ಸಿ.ಎಚ್. ಕೂಸನೂರ ಇತರರು ಇದ್ದರು.