ಸಿದ್ದಾಪುರ: ಕಳೆದ ಕೆಲ ದಿನಗಳಿಂದ ಲೋಕಸಭಾ ಚುನಾವಣೆ ಕಾರಣ ಹಲವು ಕಾರ್ಯಕ್ರಮಗಳಿಗೆ ಹಿನ್ನಡೆಯಾಗಿದ್ದು ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಗಮನಹರಿಸಬೇಕು. ತಾಲೂಕಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಕುಡಿಯುವ ನೀರು ಪೂರೈಕೆ, ಮಂಗನಕಾಯಿಲೆ ನಿಯಂತ್ರಣ, ಮಳೆಗಾಲದ ಮುಂಜಾಗ್ರತೆ ಕ್ರಮಗಳ ಬಗ್ಗೆ ಲಕ್ಷ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ಹರೀಶ ಕುಮಾರ್ ಸೂಚನೆ ನೀಡಿದರು.
ಅವರು ಪಟ್ಟಣದ ತಾಪಂ ಸಭಾಭವನದಲ್ಲಿ ಎಲ್ಲ ಇಲಾಖೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ವಿವರ ಕೇಳಿದಾಗ ತಾಪಂ ಇಓ ನೀಡಿದ ಉತ್ತರಕ್ಕೆ ಯಾವುದೇ ಇಲಾಖೆಗಳ ಅಧಿಕಾರಿಗಳು ಪುಸ್ತಕ ನೋಡಿ ಇಲಾಖೆಗಳ ಕಾರ್ಯಕ್ರಮಗಳ ವಿವರ ನೀಡುವುದು ಸಮರ್ಪಕವಲ್ಲ. ಅದರ ಅರ್ಥ ಆ ಅಧಿಕಾರಿ ಬಳಿ ಆ ಬಗ್ಗೆ ಸ್ಪಷ್ಟಮಾಹಿತಿ ಇಲ್ಲ ಎಂದಾಗುತ್ತದೆ ಎಂದರು.
ಈಗ ಟ್ಯಾಂಕರ್ ನಲ್ಲಿ ನೀರು ಪೂರೈಸುವ ಪ್ರದೇಶಕ್ಕೆ ಶಾಶ್ವತವಾಗಿ ನೀರಿನ ವ್ಯವಸ್ಥೆ ಯಾಕೆ ಈವರೆಗೆ ಮಾಡಿಲ್ಲ? ನೀರಿನ ಸಮಸ್ಯೆ ಇರುವಲ್ಲಿ ಅಲ್ಲಿನ ಜನರು ದೂರು ನೀಡಲು ಸಂಪರ್ಕಕ್ಕೆ ದೂರವಾಣಿ ಸಂಖ್ಯೆ ಕೊಡ್ತೀವಿ. ಆದರೆ ಎಷ್ಟು ದೂರುಗಳು ಬಂದಿವೆ. ಎಷ್ಟರಮಟ್ಟಿಗೆ ಅದಕ್ಕೆ ಸ್ಪಂದಿಸ್ತೀದಿವಿ ಎನ್ನುವ ಮಾಹಿತಿಗಳು ಇರೋದಿಲ್ಲ. ಜನ ಎಲ್ಲಿಗೆ ದೂರು ಕೊಡಬೇಕು. ಅದನ್ನ ಎಷ್ಟು ವೇಳೆಯಲ್ಲಿ ಕಾರ್ಯಗತಗೊಳಿಸ್ತೀವಿ ಎನ್ನುವ ಬಗ್ಗೆ ಸ್ಪಷ್ಟತೆ ಇರಬೇಕು. ಸರಕಾರದ ಬಳಿ ಈ ಬಗ್ಗೆ ಹಣ ಇದೆ. ಟ್ಯಾಂಕರ್‌ಗಳೂ ಸಿದ್ಧವಿದೆ. ಆದರೆ ದೂರು ಬರುವ ದಾರಿಯನ್ನೇ ಮುಚ್ಚಿದರೆ ಹೇಗೆ ವ್ಯವಸ್ಥೆ ಮಾಡೋದು? ಕೋಣೆಯೊಳಗೆ ಕುಳಿತು ತೀರ್ಮಾನ ತೆಗೆದುಕೊಂಡರೆ ಜನರಿಗೆ ಹೇಗೆ ಗೊತ್ತಾಗಬೇಕು. ಜನ ಎಲ್ಲಿಗೆ ದೂರು ಕೊಡಬೇಕು. ಅವರಿಗೆ ಹೇಗೆ ಸ್ಪಂದಿಸುತ್ತೀರಿ ಎನ್ನುವ ಬಗ್ಗೆ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಳಿಸಿ ಎಂದು ತಹಶೀಲದಾರರಿಗೆ ಸೂಚಿಸಿದರು.
ಮಂಗನಕಾಯಿಲೆ ನಿಯಂತ್ರಣದ ಕುರಿತಂತೆ ಪರಿಶೀಲನೆ ವೇಳೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳು ರೋಗಿಗಳನ್ನು ಹೊರ ಊರ ಆಸ್ಪತ್ರೆಗೆ ಕಳುಹಿಸಲು ಈಗ ಒಂದು ಅಂಬುಲೆನ್ಸ ಇದೆ. ಅದು ಸಾಲದು ಎಂದಾಗ ಅಂಬ್ಯುಲೆನ್ಸಗಳು ಇರುವುದು ಭೂಷಣಕ್ಕಲ್ಲ. ಬಳಕೆಗೆ. ಅಗತ್ಯ ಬಿದ್ದಲ್ಲಿ ಶಿರಸಿಯಿಂದ ಅಂಬ್ಯುಲೆನ್ಸ ಒದಗಿಸುವ ವ್ಯವಸ್ಥೆ ಮಾಡುತ್ತೇವೆ. ಅಲ್ಲದೇ ಹೊನ್ನಾವರದ ಟಾಸ್ಕಫೋರ್ಸ್‌ನಲ್ಲಿರುವ ಅಂಬುಲೆನ್ಸ ಬಳಸಿಕೊಳ್ಳುವ ಬಗ್ಗೆ ಸೂಚನೆ ನೀಡುತ್ತೇನೆ. ಖಾಲಿ ಇರುವ ಸಿಬ್ಬಂದಿಗಳನ್ನ ತಾತ್ಕಾಲಿಕವಾಗಿ ತುಂಬುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದರು. ಹಿಂದಿನಿಂದಲೂ ಈ ತಾಲೂಕು ಶಿಕ್ಷಣದಲ್ಲಿ ಪ್ರಗತಿಯಲ್ಲಿದೆ ಎಂದು ತಿಳಿದಿದ್ದೇನೆ. ಅಲ್ಲದೇ ರಾಜ್ಯಮಟ್ಟದಲ್ಲಿ ಸ್ಥಾನ ಪಡೆದಿರುವದಕ್ಕೂ ಶಾಘ್ಲಿಸುತ್ತೇನೆ. ಆದರೆ ಇಲ್ಲಿನ ಮಕ್ಕಳು ಉನ್ನತ ಶಿಕ್ಷಣ ಪಡೆದು ಇಲ್ಲಿ ಸೇವೆ ನೀಡುವಂತಾದರೆ ಒಳ್ಳೆಯದಿತ್ತು. ಇಲ್ಲಿ ವೈದ್ಯರುಗಳ ಕೊರತೆ ಇರುವುದನ್ನು ಕಂಡಾಗ ಹೀಗನ್ನಿಸುತ್ತದೆ ಎಂದರು. ಅಂಗನವಾಡಿಗಳಿಗೆ, ಶಲೆಗಳಿಗೆ ಆಹಾರಧಾನ್ಯ ಪೂರೈಕೆ ಮಾಡುವಾಗ ಶಾಲೆಗಳಲ್ಲೂ ತೂಕ, ಅಳತೆ ಮಾಡಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗೆ ಸೂಚಿಸಿದರು.
ಸರಕಾರಿ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವುದು ಮುಖ್ಯ. ನೈಸರ್ಗಿಕ ವಿಕೋಪ, ಕಾಯಿಲೆಗಳ ಬಗ್ಗೆ ಗಮನ ನೀಡಲೇಬೇಕು. ಜಿಲ್ಲಾಧಿಕಾರಿಯಾಗಿ ಜನರಿಗೆ ಆದಷ್ಟು ಉತ್ತಮವಾಗಿ ಸ್ಪಂದಿಸುವ ಭರವಸೆ ನೀಡುತ್ತೇನೆ ಎಂದರು.