Advertisement

ಶೀಘ್ರ ವರದಿ ಬರುವಂತೆ ಕ್ರಮ ಕೈಗೊಳ್ಳಿ

04:25 PM Apr 18, 2020 | Team Udayavani |

ಗದಗ: ಶಂಕಿತ ವ್ಯಕ್ತಿಯಿಂದ ಮಾದರಿ ಸಂಗ್ರಹಿಸಿದ 12 ಗಂಟೆಯೊಳಗೆ ವರದಿ ಬರುವಂತೆ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಬೇಕು. ಸದ್ಯ ವಿದೇಶದಿಂದ ಆಮದು ಆಗುತ್ತಿರುವ ಕೋವಿಡ್ 19 ಟೆಸ್ಟಿಂಗ್‌ ಕಿಟ್‌ಗಳನ್ನು ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಬೇಕು ಎಂದು ಶಾಸಕ ಎಚ್‌.ಕೆ.ಪಾಟೀಲ ಆಗ್ರಹಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಗದಗ ಜಿಲ್ಲೆಯೊಂದರಲ್ಲೇ 100ಕ್ಕೂ ಹೆಚ್ಚು ಪ್ರಕರಣಗಳ ವರದಿ ಬಂದಿಲ್ಲ. ಅದರಂತೆ ಕೊರೊನಾ ಹಾಟ್‌ ಸ್ಪಾಟ್‌ ಆಗಿರುವ ಮೈಸೂರಿನಲ್ಲಿ 400 ಶಂಕಿತರ ವರದಿಗಳು ಬರಬೇಕಿವೆ. ಬೆಳಗಾವಿಯಲ್ಲೂ ಈ ಸಂಖ್ಯೆ ಕಡಿಮೆ ಇಲ್ಲ. ಅದರಂತೆ ರಾಜ್ಯಾದ್ಯಂತ 3,416 ವರದಿಗಳು ಬರಬೇಕಿವೆ. ಐಸಿಎಂಆರ್‌ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸ್ಥಳೀಯವಾಗಿ ಸಿದ್ಧಗೊಳಿಸಿರುವ ಪಿಪಿಇ ಕಿಟ್‌ಗಳ ಬಳಕೆ, ಜಿಲ್ಲೆಗೊಂದು ಲ್ಯಾಬ್‌ ಆರಂಭಿಸುವ ಕುರಿತು ತಕ್ಷಣವೇ ಮುಖ್ಯಮಂತ್ರಿಗಳು ಐಸಿಎಂಆರ್‌ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಇಲ್ಲವೇ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯನ್ನು ಬದಿಗೊತ್ತಿದ ಮಾದರಿಯಲ್ಲಿ ರಾಜ್ಯ ಸರ್ಕಾರ ಐಎಂಸಿಆರ್‌ನ್ನು ಕೈಬಿಟ್ಟು ಪ್ರತ್ಯೇಕ ವೈಜ್ಞಾನಿಕ ಸಂಸ್ಥೆಗಳನ್ನು ಆರಂಭಿಸಬೇಕು ಎಂದರು.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ 19 ಪ್ರಯೋಗಾಲಯಗಳಿಲ್ಲದೇ ದಿನ ಕಳೆದಂತೆ ಪ್ರಕರಣಗಳು ಬಾಕಿ ಉಳಿಯುವ ಸಂಖ್ಯೆ ಹೆಚ್ಚುತ್ತಿದೆ. ಗದಗ ಜಿಲ್ಲೆಯೊಂದರಲ್ಲೇ ಮೂವರು ಶಂಕಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಅವರ ಲ್ಯಾಬ್‌ ಟೆಸ್ಟ್‌ ವರದಿ ಬಾರದೇ, ಮೃತ ದೇಹಗಳು ವಿಲೇವಾರಿಯಾಗದೇ ಮೂರು ದಿನಗಳಿಂದ ಶವಾಗಾರದಲ್ಲಿ ಕೊಳೆಯುತ್ತಿವೆ. ಇದರಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗುತ್ತಿವೆ. ಗದಗ ಮೆಡಿಕಲ್‌ ಕಾಲೇಜಿನಲ್ಲಿ ಮೂರು ಕಿಟ್‌ಗಳು, ತಜ್ಞ ವೈದ್ಯಕೀಯ ಸಿಬ್ಬಂದಿ ಹಾಗೂ ಮೂಲ ಸೌಲಭ್ಯಗಳಿದ್ದರೂ, ಐಎಂಆರ್‌ಸಿ ಪರವಾನಗಿ ನೀಡುತ್ತಿಲ್ಲ. ಈ ಕುರಿತು ಪ್ರಯತ್ನಿಸಬೇಕಿದ್ದ ರಾಜ್ಯ ಸರ್ಕಾರದ ಕೋವಿಡ್‌-19 ನೋಡಲ್‌ ಅಧಿಕಾರಿ ಡಾ|ರವಿ ನಿರುತ್ಸಾಹ ತೋರುತ್ತಿದ್ದು, ಅವರನ್ನು ತಕ್ಷಣವೇ ಆ ಸ್ಥಾನದಿಂದ ವಜಾಗೊಳಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next