Advertisement

ಅಡುಗೆ ಎಣ್ಣೆ ದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ

10:57 PM May 05, 2022 | Team Udayavani |

ಉಕ್ರೇನ್‌ ಮೇಲಿನ ರಷ್ಯಾ ದಾಳಿ ಮತ್ತು ಇಂಡೋನೇಶಿಯಾದಲ್ಲಿ ತಾಳೆ ಎಣ್ಣೆಯ ರಫ್ತಿನ ಮೇಲೆ ಸಂಪೂರ್ಣ ನಿರ್ಬಂಧದಿಂದಾಗಿ ಭಾರತದಲ್ಲಿ ಅಡುಗೆ ಎಣ್ಣೆಯ ದರ ಮತ್ತೆ ಗಗನಮುಖೀಯಾಗುತ್ತಿದೆ. ಭಾರತ ಮೊದಲಿನಿಂದಲೂ ಉಕ್ರೇನ್‌ ಮತ್ತು ಇಂಡೋನೇಶಿಯಾ ಮೇಲೆಯೇ ಅಡುಗೆ ಎಣ್ಣೆಗಾಗಿ ಅವಲಂಬಿತವಾಗಿದೆ. ಯುದ್ಧದ ಕಾರಣದಿಂದಾಗಿ ಉಕ್ರೇನ್‌ ರಫ್ತು ನಿಲ್ಲಿಸಿದ್ದರೆ, ಸ್ಥಳೀಯವಾಗಿ ಬೆಲೆ ಹೆಚ್ಚಿದ್ದರಿಂದ ಇಂಡೋನೇಶಿಯಾ ರಫ್ತು ಬ್ಯಾನ್‌ ಮಾಡಿದೆ. ಹೀಗಾಗಿ ಭಾರತದಲ್ಲಿ ಮತ್ತೆ ದರ ಏರಿಕೆಯ ಬಿಸಿ ತಟ್ಟಿದೆ.

Advertisement

ಬುಧವಾರವಷ್ಟೇ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಆರ್‌ಬಿಐ ರೆಪೋದರವನ್ನು ಹೆಚ್ಚಳ ಮಾಡಿತ್ತು. ಈ ಮೂಲಕ ಜನರ ಕೈನಲ್ಲಿ ಹೆಚ್ಚು ಹಣ ಹರಿದಾಡದಿದ್ದರೆ, ಖರೀದಿ ಸಾಮರ್ಥ್ಯ ಇಳಿದು, ಬೇಡಿಕೆ ತಗ್ಗುತ್ತದೆ ಎಂಬ ಕಾರಣದಿಂದಾಗಿ ಈ ನಿರ್ಧಾರ ಕೈಗೊಂಡಿತ್ತು. ಆದರೆ ಈಗ ಅಡುಗೆ ಎಣ್ಣೆಯ ದರವೂ ಹೆಚ್ಚಗತೊಡಗಿರುವುದು ಆರ್‌ಬಿಐನ ತಲೆನೋವಿಗೆ ಕಾರಣವಾಗಿದೆ ಎಂಬುದು ನಿಸ್ಸಂಶಯ.

ಈ ನಿಟ್ಟಿನಲ್ಲಿ ಕೇಂದ್ರ ಸರಕಾರ, ಅಡುಗೆ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇ.5ರಷ್ಟು ಇಳಿಕೆ ಮಾಡಲು ಚಿಂತನೆ ನಡೆಸಿದೆ. ಒಂದು ವೇಳೆ, ಕೇಂದ್ರ ಸರಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೇ ಆದರೆ ಜನರ ಬವಣೆಗೆ ಒಂದಷ್ಟಾದರೂ ಪರಿಹಾರ ನೀಡಿದಂತಾಗುತ್ತದೆ.

ಭಾರತವು ವಾರ್ಷಿಕವಾಗಿ 24 ಮಿಲಿಯನ್‌ ಟನ್‌ ಅಡುಗೆ ಎಣ್ಣೆಯನ್ನು ಬಳಕೆ ಮಾಡಲಾಗುತ್ತದೆ. ಇಂಡೋನೇಶಿಯಾದಿಂದಲೇ 4.5 ಮಿಲಿಯನ್‌ ಟನ್‌ನಷ್ಟು ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಜತೆಗೆ ಭಾರತದಲ್ಲಿ ಒಟ್ಟಾಗಿ ಬಳಕೆ ಮಾಡುವ ಶೇ.55ರಷ್ಟನ್ನು ಹೊರದೇಶದಿಂದಲೇ ತರಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ವಾರ್ಷಿಕವಾಗಿ 1.17 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದೆಲ್ಲದರ ನಡುವೆ ಇಡೀ ಜಗತ್ತಿನ ಶೇ.84ರಷ್ಟು ಪಾಮ್‌ ಆಯಿಲ್‌ ಅನ್ನು ಇಂಡೋನೇಶಿಯಾ ಮತ್ತು ಮಲೇಶಿಯಾ ದೇಶಗಳೇ ಉತ್ಪಾದನೆ ಮಾಡುತ್ತವೆ. ಹೀಗಾಗಿ ಈ ದೇಶದ ರಫ್ತಿನ ಮೇಲೆ ಭಾರತವಷ್ಟೇ ಅಲ್ಲ, ಇಡೀ ಜಗತ್ತೇ ಅವಲಂಬಿತವಾಗಿದೆ ಎಂದರೆ ತಪ್ಪಾಗಲಾರದು.

ಇನ್ನು ಉಕ್ರೇನ್‌ ದೇಶದಿಂದ ಭಾರತ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಕೂಡ ನಿಂತುಹೋಗಿರುವುದರಿಂದ ಭಾರತ ತೀರಾ ಅಸಹಾಯಕ ಸ್ಥಿತಿಯಲ್ಲಿದೆ ಎಂದು ಹೇಳಬಹುದು.

Advertisement

ಇಂಥ ಕಷ್ಟದ ಸನ್ನಿವೇಶದಲ್ಲೂ ಭಾರತ ಅಡುಗೆ ಎಣ್ಣೆಯನ್ನು ಬೇರೆ ಬೇರೆ ಕಡೆಗಳಿಂದ ತರಿಸಿಕೊಳ್ಳುತ್ತಿದೆ. ಇತ್ತ ದೇಶದ ಒಳಗೂ ಅಡುಗೆ ಎಣ್ಣೆಗೆ ಭಾರೀ ಬೇಡಿಕೆ ಇದೆ. ಹೀಗಾಗಿಯೇ ಅಡುಗೆ ಎಣ್ಣೆಯ ದರ ಗಗನಮುಖೀಯಾಗಿದೆ. ಈ ದರ ನಿಯಂತ್ರಣಕ್ಕಾಗಿ ಶೇ.5ರಷ್ಟು ಆಮದು ಸುಂಕ ಕಡಿಮೆ ಮಾಡಲು ಮುಂದಾಗಿರುವುದು ಸೂಕ್ತ ಕ್ರಮವೇ ಆಗಿದೆ.

ಇದರ ಜತೆಗೆ ಆಂತರಿಕವಾಗಿಯೂ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕಾಗಿದೆ. ಹೆಚ್ಚಾಗಿ ಬಳಕೆ ಮಾಡುವ ವಸ್ತುಗಳಿಗಾಗಿ ಬೇರೆ ದೇಶಗಳ ಮೇಲೆ ಅವಲಂಬನೆ ಒಳ್ಳೆಯದಲ್ಲ. ಸೂರ್ಯಕಾಂತಿ ಸೇರಿದಂತೆ ಅಡುಗೆ ಎಣ್ಣೆಗೆ ಬೇಕಾಗಿರುವ ಉತ್ಪನ್ನಗಳನ್ನು ಹೆಚ್ಚಾಗಿ ಬೆಳೆಯಲು ಆಸ್ಪದ ನೀಡಬೇಕಾಗಿದೆ. ಅಲ್ಲದೆ ಸದ್ಯ ಮಾರುಕಟ್ಟೆ ಮೇಲೂ ಕಣ್ಣಿರಿಸಿ, ಅಕ್ರಮವಾಗಿ ಅಡುಗೆ ಎಣ್ಣೆ ಸಂಗ್ರಹಿಸುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಆಗ ಮಾತ್ರ ಅಡುಗೆ ಎಣ್ಣೆಯ ದರ ಇಳಿಕೆಯಾಗಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next