Advertisement

Stray Dogs: ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಿ

11:32 PM Oct 06, 2023 | Team Udayavani |

ಜಗತ್ತಿನಾದ್ಯಂತ ಬೀದಿ ನಾಯಿಗಳ ಕಡಿತ ಮತ್ತು ರೇಬಿಸ್‌ನಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದ್ದು, ಭಾರತದಲ್ಲೇ ಶೇ.36ರಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಸೇರಿದಂತೆ ಅವುಗಳ ನಿಯಂತ್ರಣಕ್ಕಾಗಿ ಸರಕಾರಗಳು ಯೋಜನೆ ಹಾಕಿಕೊಳ್ಳುತ್ತಿದ್ದರೂ ಅವು ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ರಾಜ್ಯದಲ್ಲಿ ಕಳೆದ ವರ್ಷ 41 ಮಂದಿ ರೇಬಿಸ್‌ನಿಂದಾಗಿ ಮೃತಪಟ್ಟಿದ್ದರೆ, ಈ ವರ್ಷದ ಜುಲೈ ಅಂತ್ಯದೊಳಗೆ 25 ಮಂದಿ ಸಾವನ್ನಪ್ಪಿದ್ದಾರೆ ಎಂಬುದು ಆಘಾತಕಾರಿ ವಿಚಾರ.

Advertisement

ಜತೆಗೆ ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 1.62 ಲಕ್ಷ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದು, ಇವರಲ್ಲಿ 1.46 ಲಕ್ಷ ಮಂದಿ ಸರಕಾರಿ ಆಸ್ಪತ್ರೆ, 13,700 ಮಂದಿ ಖಾಸಗಿ ಹಾಗೂ 2,900 ಮಂದಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಾಯಿ ಕಡಿತಕ್ಕೆ ಮಕ್ಕಳೇ ಹೆಚ್ಚು ಬಲಿಯಾಗುತ್ತಿದ್ದು, 15 ವರ್ಷದೊಳಗಿನ ಶೇ.40 ಮಕ್ಕಳು ನಾಯಿ ಕಡಿತಕ್ಕೆ ತುತ್ತಾಗುತ್ತಿದ್ದಾರೆ.

ಇನ್ನು ಬೆಂಗಳೂರಿನಲ್ಲಿಯೂ ಬೀದಿ ನಾಯಿಗಳ ಹಾವಳಿ ಜೋರಾಗಿಯೇ ಇದೆ. ಇತ್ತೀಚೆಗೆ ಪ್ರಕಟಗೊಂಡ ಸಮೀಕ್ಷೆಯೊಂದರ ಪ್ರಕಾರ, 2.79 ಲಕ್ಷ ಬೀದಿ ನಾಯಿಗಳಿವೆ. ಬಿಬಿಎಂಪಿ ಪ್ರಕಾರವೇ ಈ ನಾಯಿಗಳಲ್ಲಿ ಶೇ.71ರಷ್ಟಕ್ಕೆ ಸಂತಾನ ಹರಣ ಚಿಕಿತ್ಸೆಯಾಗಿದೆ. ಆದರೂ ಬೀದಿ ನಾಯಿಗಳ ಉಪಟಳ ಹೆಚ್ಚುತ್ತಲೇ ಇದ್ದು, ಅವುಗಳ ನಿಯಂತ್ರಣಕ್ಕೆ ಸರಕಾರ ಸಮರೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಗುರುವಾರವಷ್ಟೇ ಕರ್ನಾಟಕ ಹೈಕೋರ್ಟ್‌ ಕೂಡ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಬೀದಿ ನಾಯಿಗಳ ಸಂತಾನಹರಣ ವಿಚಾರಕ್ಕೆ ಸಂಬಂಧಿಸಿದಂತೆ “ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮಗಳ ಜಾರಿಗೆ ಮೀನಮೇಷ ಎಣಿಸುತ್ತಿರುವ ಸರಕಾರದ ನಡೆಗೆ ಕಿಡಿಕಾರಿದ್ದ ಕೋರ್ಟ್‌, ಮೂರು ವಾರಗಳಲ್ಲಿ ಸಮರ್ಪಕ ಉತ್ತರ ಕೊಡುವಂತೆ ಹೇಳಿತ್ತು. ಇಲ್ಲದಿದ್ದರೆ ನಾವೇ ಆದೇಶ ಹೊರಡಿಸುತ್ತೇವೆ ಎಂದೂ ಹೇಳಿತ್ತು. ಈ ಸಂದರ್ಭದಲ್ಲಿ ಕೋರ್ಟ್‌ ಕೆಲವೊಂದು ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿತ್ತು. ಅಂದರೆ ಬೀದಿ ನಾಯಿಗಳಿಗೆ ಆಹಾರ ಕೊಡುವುದು ಉತ್ತಮ ಕೆಲಸ. ಆದರೆ ಅದರ ರೀತಿ ಕೂಡ ಸರಿ ಇರಬೇಕು, ನಿಗದಿತ ಸ್ಥಳದಲ್ಲಿ ಆಹಾರ ಹಾಕಬೇಕು. ಇಲ್ಲದಿದ್ದರೆ ದಾರಿಹೋಕರು ಮತ್ತು ಆಯಾ ಪ್ರದೇಶದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತದೆ ಎಂದೂ ಹೇಳಿತ್ತು.

ಏನೇ ಆಗಲಿ ಬೀದಿ ನಾಯಿಗಳ ಸಮಸ್ಯೆ, ಸಂತಾನ ಹರಣ ಚಿಕಿತ್ಸೆಗಾಗಿ ರಾಜ್ಯ ಸರಕಾರವೂ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೂ ಈ ಸಮಸ್ಯೆ ಬಗೆಹರಿದಿಲ್ಲ. ಇದಕ್ಕೆ ಹೈಕೋರ್ಟ್‌ನ ಅಸಮಾಧಾನವೇ ಸಾಕ್ಷಿ. ಇನ್ನಾದರೂ ಸರಕಾರ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ನಾಗರಿಕರೂ, ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಕೊಡುವುದನ್ನು ನಿಲ್ಲಿಸಬೇಕು. ಎಷ್ಟೋ ಬಾರಿ ಆಹಾರಕ್ಕಾಗಿ ಬೀದಿಯಲ್ಲಿ ಓಡಾಡುವ ನಾಯಿಗಳು ವೃದ್ಧರಿಗೆ, ಮಕ್ಕಳಿಗೆ ಕಚ್ಚುವ ಅಪಾಯಗಳೂ ಹೆಚ್ಚಿರುತ್ತವೆ. ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಅಮಾನವೀಯವಾಗಿ ಎಲ್ಲೆಂದರಲ್ಲಿ ಬಿಡುವ ಕೆಲಸವನ್ನೂ ಮಾಡಬಾರದು. ಸಂತಾನ ಹರಣ ಚಿಕಿತ್ಸೆಯನ್ನೇ ಪರಿಣಾಮಕಾರಿಯಾಗಿ ಮಾಡಿ, ಅವುಗಳ ಸಂಖ್ಯೆ ಕಡಿಮೆ ಮಾಡುವತ್ತ ಹೆಚ್ಚು ಗಮನ ನೀಡಿದರೆ ಒಳ್ಳೆಯದು.

Advertisement
Advertisement

Udayavani is now on Telegram. Click here to join our channel and stay updated with the latest news.

Next