Advertisement

ಅತಿಸಾರ ಭೇದಿ ನಿಯಂತ್ರಣಕ್ಕೆ ಕ್ರಮ ವಹಿಸಿ

12:15 PM Jul 17, 2021 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿರುವ 5 ವರ್ಷದೊಳಗಿನ ಮಕ್ಕಳ ಮನೆಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಭೇಟಿ ನೀಡಿ ಓಆರ್‌ಎಸ್‌ ದ್ರಾವಣ ಹಾಗೂ ಝಿಂಕ್‌ ಮಾತ್ರೆ ನೀಡಿ ಅತಿಸಾರ ಭೇದಿ ನಿಯಂತ್ರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮ ಆಚರಣೆಯ ಜಿಲ್ಲಾ ಮಟ್ಟದಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಜುಲೈ 19 ರಿಂದ ಆಗಸ್ಟ್‌ 2ರವರೆಗೆ ನಡೆಯುವ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಒಗ್ಗೂಡಿ ಯಶಸ್ವಿಗೊಳಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಐದು ವರ್ಷದೊಳಗಿನ 1,29,695 ಮಕ್ಕಳನ್ನು ಗುರುತಿಸಲಾಗಿದ್ದು, ಪ್ರತಿಯೊಂದು ಹಳ್ಳಿಗೂ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಲ್ಲಿ ತೀವ್ರವಾದ ಅತಿಸಾರ ಭೇದಿ ಕಂಡುಬಂದಲ್ಲಿ ತಾಯಂದಿರು ಓಆರ್‌ ಎಸ್‌ ದ್ರಾವಣವನ್ನು ಹೇಗೆ ಮಕ್ಕಳಿಗೆ ತಯಾರಿಸಿ ಕೊಡಬೇಕು ಎಂಬುದರ ಬಗ್ಗೆ ಅರಿವುವನ್ನು ತಾಯಂದಿರಿಗೆ ಮೂಡಿಸಬೇಕು ಎಂದರು.

ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಬಳಕೆ ಮತ್ತು ಕೈ ತೊಳೆಯುವ ಮಹತ್ವ ಹಾಗೂ ಎದೆ ಹಾಲುಣಿಸುವ ತಾಯಂದಿರು ಕನಿಷ್ಟ ಆರು ತಿಂಗಳು ಮಕ್ಕಳಿಗೆಹಾಲುಣಿಸುವ ಮಹತ್ವವನ್ನು ವಿವರವಾಗಿ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

Advertisement

ಗ್ರಾಮ ಮಟ್ಟದಲ್ಲಿ ಅಂಗನವಾಡಿ, ಶಾಲಾ-ಕಾಲೇಜುಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಯಾವ ರೀತಿ ಸ್ವತ್ಛತೆ ಕಾಪಾಡಿಕೊಳ್ಳಬೇಕು. ನೀರಿನ ಟ್ಯಾಂಕ್‌ ಅಥವಾ ತೊಟ್ಟಿಗಳನ್ನು ಸ್ವಚ್ಚಗೊಳಿಸಿ ಶುಚಿತ್ವ ಕಾಪಾಡಿಕೊಳ್ಳುವುದರ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಆರ್‌ಸಿಎಚ್‌ ಅಧಿಕಾರಿ ಡಾ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌ ಲಸಿಕಾ ಅಭಿಯಾನ ನಡೆಯುತ್ತಿರುವುದರಿಂದ ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್‌ ಲಸಿಕೆ ಪಡೆಯುವಂತೆ ಮತ್ತು ಈಗಾಗಲೇ ಮೊದಲ ಹಂತದ ಲಸಿಕೆ ಪಡೆದಿರುವವರಿಗೆ ಎರಡನೇ ಹಂತದ ಲಸಿಕೆ ಪಡೆಯುಂತೆ ತಿಳಿ ಹೇಳಬೇಕು ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿ ದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್‌, ಜಿಲ್ಲಾ ಆರ್‌.ಸಿ. ಎಚ್‌ ಅಧಿಕಾರಿ ಡಾ.ಕುಮಾರಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್‌, ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next