Advertisement

ಸ್ವಂತ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ

08:43 PM Dec 11, 2019 | Team Udayavani |

ಚಾಮರಾಜನಗರ: ನಿವೇಶನ ಗುರುತಿಸಲಾಗಿರುವ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಪಂ ಅಧ್ಯಕ್ಷೆ ಶಿವಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಡಳಿತ ಭವನದ ಆವರಣದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಪಾಲನಾ ವರದಿ ಮಂಡನೆ ವೇಳೆ ಮಾತನಾಡಿದ ಜಿಪಂ ಅಧ್ಯಕ್ಷರು, ವಿದ್ಯಾರ್ಥಿ ನಿಲಯ ನಿವೇಶನ ಮಂಜೂರಾದ ಬಳಿಕ ಕಟ್ಟಡ ನಿರ್ಮಾಣದ ಅಂದಾಜು ಪಟ್ಟಿ ಸಲ್ಲಿಕೆಗೆ ವಿಳಂಬ ಮಾಡಬಾರದು. ಅಧಿಕಾರಿಗಳು ಸಮನ್ವಯದಿಂದ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕೆಂದರು.

ರಸ್ತೆ ಕಾಮಗಾರಿ ಪೂರ್ಣಗೊಳಿಸಲು ವಿಳಂಬ ಮಾಡಬಾರದು. ಕೊಳ್ಳೇಗಾಲ ಭಾಗದ ನರೀಪುರ ರಸ್ತೆ ಸೇರಿ ಇನ್ನು ಹಲವು ರಸ್ತೆ ದುರಸ್ತಿಗೆ ಸೂಚಿಸಲಾಗಿದೆ. ಆದರೂ, ಕ್ರಮ ತೆಗೆದುಕೊಂಡಿಲ್ಲ ಎಂದರು. ಜಿಪಂ ಸಿಇಒ ಬಿ.ಎಚ್‌.ನಾರಾಯಣರಾವ್‌ ಮಾತನಾಡಿ, ಯಾವುದೇ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಒಟ್ಟಿಗೆ ಚರ್ಚಿಸಿ ಕ್ರಿಯಾ ಕಾರ್ಯಕ್ರಮ ರೂಪಿಸಬೇಕು. ಆಗಲೇ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯವೆಂದರು.

ಶಿಕ್ಷಣ ಇಲಾಖೆಯ ಪ್ರಗತಿ ಬಗ್ಗೆ ಪರಿಶೀಲಿಸಿದ ಅವರು, ಶಾಲಾ- ಕಾಲೇಜು ಕೊಠಡಿಗಳ ದುರಸ್ತಿ ಅಥವಾ ಮರುನಿರ್ಮಾಣ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವೆಚ್ಚ ಹಾಗೂ ಕಟ್ಟಡ ವಿನ್ಯಾಸದ ಕುರಿತು ಶಿಕ್ಷಣ ಸಂಸ್ಥೆ ಅಧಿಕಾರಿಗಳು, ಪ್ರಾಂಶುಪಾಲರೊಂದಿಗೆ ತಪ್ಪದೇ ಚರ್ಚಿಸಬೇಕು. ಜೊತೆಗೆ ಯೋಜನೆ ಜಾರಿಯಲ್ಲಿ ಸಂಬಂಧಪಡುವ ಎಲ್ಲಾ ಇಲಾಖೆಗಳು ಸಮರ್ಪಕ ರೀತಿಯಲ್ಲಿ ವಿಷಯ ವಿನಿಮಯ ಮಾಡಿಕೊಳ್ಳುವ ಮೂಲಕ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಿಸುವಾಗ ಸ್ಥಳ ಪರಿಶೀಲನೆ ಬಗ್ಗೆ ಗಮನ ಹರಿಸಬೇಕು. ನಿಲಯಕ್ಕಾಗಿ ನಿಗದಿಪಡಿಸಿರುವ ಜಾಗ, ಯಾವುದೇ ಒತ್ತುವರಿ ಇಲ್ಲವೇ ಅಕ್ರಮ ನಡೆದಿಲ್ಲ ಎಂಬುದರ ಕುರಿತು ಖಚಿತಪಡಿಸಿ ನಂತರ ಕಾರ್ಯದಲ್ಲಿ ಮುಂದುವರೆಯಬೇಕು. ಅಲ್ಲದೇ ಗ್ರಾಮಗಳಲ್ಲಿ ಕಟ್ಟಲಾಗುವ ಸಮುದಾಯ ಭವನಗಳಲ್ಲಿ ನೀರು, ಶೌಚಾಲಯ ಮುಂತಾದ ಮೂಲ ಸೌಕರ್ಯ ದೊರೆಯುವ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದ ಮಾದರಿ ಆಟದ ಮೈದಾನ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ ಅವರು, ನರೇಗಾ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಗ್ರಾಮ ವಿಕಾಸದಡಿ ಲಭ್ಯವಿರುವ ಅನುದಾನ ಬಳಸಿ, ಸೂಕ್ತ ಸ್ಥಳಗಳಲ್ಲಿ ಮಾದರಿ ಆಟದ ಮೈದಾನ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಗೋಪಿನಾಥಂನಲ್ಲಿ ಶಾಲಾ ವಾಸ್ತವ್ಯ ಸಂದರ್ಭದಲ್ಲಿ ನಿರ್ದೇಶನ ನೀಡಿದ್ದ ಎಲ್ಲಾ ಕಾರ್ಯಗಳು ಹಾಗೂ ಇತರೆ ಇಲಾಖೆಗಳ ಪ್ರಗತಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರ ಗೈರು: ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೆ ಉಪಾಧ್ಯಕ್ಷರು, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಗೈರು ಹಾಜರಾಗಿದ್ದರು. ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಚೆನ್ನಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಗತಮಣಿ ಸಭೆಯಿಂದ ದೂರ ಉಳಿದಿದ್ದರು. ಆದ್ದರಿಂದ ಸಭೆ ಮಧ್ಯಾಹ್ನವೇ ಮುಕ್ತಾಯಗೊಂಡಿತು. ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಕಾಮಗಾರಿ ನನೆಗುದಿಗೆ: ಕಿಡಿಕಾರಿದ ಸಿಇಒ
ಚಾಮರಾಜನಗರ: ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಇತರೆ ಇಲಾಖೆಗಳೊಡನೆ ಸಮನ್ವಯತೆ ಸಾಧಿಸಿ ಕೆಲಸ ನಿರ್ವಹಿಸುತ್ತಿಲ್ಲ. ಆದ್ದರಿಂದ ಹಲವು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಎಂದು ಜಿಪಂ ಸಿಇಒ ಬಿ.ಎಚ್‌.ನಾರಾಯಣರಾವ್‌ ಕಿಡಿಕಾರಿದರು. ಲೋಕೋಪಯೋಗಿ ಇಲಾಖೆ ಅನುಪಾಲನಾ ವರದಿ ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ಮತ್ತು ಕೊಠಡಿಗಳ ನಿರ್ಮಾಣ ವಹಿಸಿಕೊಂಡಿರುವ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಎರಡೂವರೆ ವರ್ಷಗಳಾದರೂ ಕಾಮಗಾರಿ ಆರಂಭಿಸಿಲ್ಲ ಇದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರು.

ಸಕಾಲಕ್ಕೆ ಅನುದಾನ ದೊರೆಯಲಿಲ್ಲ ನಿವೇಶನದ ತೊಂದರೆಯಿದೆ ಟೆಂಡರ್‌ ಪ್ರಕ್ರಿಯೆ ವಿಳಂಬವಾಯಿತು ಎಂದು ಅನುಪಾಲನಾ ವರದಿಯಲ್ಲಿ ತಿಳಿಸಿದ್ದೀರಿ. ಈ ಕಾರಣ ನಮಗೆ ಬೇಕಾಗಿಲ್ಲ. ಇದನ್ನು ಗಮನಿಸಿದರೆ ಸಂಬಂಧಪಟ್ಟ ಇಲಾಖೆ ಜತೆ ಸಮನ್ವಯತೆ ಸಾಧಿಸಿ ಕೆಲಸ ಮಾಡುತ್ತಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

ವಹಿಸಿರುವ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಹೇಳಿ ಬಿಡಿ ಬೇರೊಂದು ಏಜೆನ್ಸಿ ನೇಮಿಸಲಾಗುತ್ತದೆ. ಈ ಬೇಜವಾಬ್ದಾರಿತನ ಮುಂದುವರಿದರೆ ಶಿಸ್ತುಕ್ರಮಕ್ಕೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಎಚ್ಚರಿಕೆ ನೀಡಿದರು. ಯಾವುದೇ ಪ್ರಗತಿ ಸಾಧಿಸದೆ ಸುಮ್ಮನೆ ಸಭೆಗೆ ಹಾಜರಾಗುವುದು ಬೇಡ. ಪ್ರತಿ ವಾರಕ್ಕೊಮ್ಮೆ ಇಲಾಖೆ ಎಇಇ ಗಳ ಸಭೆ ನಡೆಸಬೇಕು. ಯಾವ ಕಾಮಗಾರಿ ಮುಗಿದಿದೆ. ಏಕೆ ವಿಳಂಬವಾಗುತ್ತಿದೆ ಎಂಬುದರ ಕುರಿತು ಡಿ.15 ರೊಳಗೆ ವರದಿ ನೀಡಬೇಕು ಸೂಚಿಸಿದರು.

ಇಲಾಖೆ ಎಇಇ ಮಾದೇಶ್‌ ಮಾತನಾಡಿ, ಪ್ರೌಢಶಾಲೆಯ ಒಟ್ಟು 22 ಕೊಠಡಿಗಳ ಪೈಕಿ 10 ಪೂರ್ಣಗೊಂಡಿವೆ 2 ಬಾಕಿಯಿವೆ. ತಾನು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಸಭೆಗೆ ತಿಳಿಸುತ್ತಿದ್ದಂತೆ ಇದೆಲ್ಲವನ್ನು ಹೇಳಬೇಡಿ ಎಂದು ಸಿಇಒ ಸಿಡಿಮಿಡಿಗೊಂಡರು. ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆಗಳ ವ್ಯಾಪ್ತಿಯಲ್ಲಿ ಎಷ್ಟು ಸಮುದಾಯ ಭವನ ನಿರ್ಮಾಣವಾಗಿವೆ. ಅಪೂರ್ಣವಾಗಿವೆ ಕಾರಣಗಳೇನು ಎಂಬುದರ ಮಾಹಿತಿ ನೀಡಬೇಕೆಂದು ಸಿಇಒ ಸೂಚಿಸಿದರು.

ಎಸ್‌ಇಪಿ ಅನುದಾನ 11 ಇಲಾಖೆಗಳಿಗೆ ಲಭ್ಯವಾಗಿದ್ದು, ಯಾವುದಕ್ಕೆ ಬಳಸಬೇಕು ಎಂಬುದರ ಕ್ರಿಯಾಯೋಜನೆಯನ್ನೇ ತಯಾರಿಸಿಲ್ಲ. ಕಾರ್ಮಿಕ ಇಲಾಖೆಗೆ 3 ಕೋಟಿ ರೂ., ಸೆಸ್ಕ್ಗೆ 6.34 ಕೋಟಿ ರೂ., ಸಹಕಾರ ಇಲಾಖೆಗೆ 16 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 1 ಕೋಟಿ ರೂ. ಬಂದಿದೆ. ಯಾವುದೇ ಕ್ರಮ ವಹಿಸಿಲ್ಲ ಎಂದು ಪ್ರಭುಸ್ವಾಮಿ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next