Advertisement

ಆಂಬ್ಯುಲೆನ್ಸ್ ಸೇವೆಗೆ ಸಿಕ್ತು ಕಾಯಕಲ್ಪ 

03:52 PM Dec 16, 2018 | Team Udayavani |

ಹಾವೇರಿ: ನೂರೆಂಟು ಸಮಸ್ಯೆಗಳ ನಡುವೆ ತೊಳಲಾಡುತ್ತಿದ್ದ ಜಿಲ್ಲೆಯ ‘108’ ಆಂಬ್ಯುಲೆನ್ಸ್‌ ವಾಹನಗಳಿಗೆ ಬಹುದಿನಗಳ ಬಳಿಕ ಕಾಯಕಲ್ಪ ದೊರಕಿದ್ದು, ಈಗ ಆಂಬ್ಯುಲೆನ್ಸ್‌ ವಾಹನಗಳು ಆರೋಗ್ಯಸೇವೆ ಮುಂದುವರಿಸಿವೆ. ಕಳೆದ ಆರೇಳು ತಿಂಗಳುಗಳಿಂದ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್‌ಗಳು ಸೇವೆಗೆ ಸಿಗುತ್ತಿಲ್ಲ. ವಾಹನಗಳು ಸೇವೆ ನೀಡುವುದಕ್ಕಿಂತ ಹೆಚ್ಚು ದಿನ ದುರಸ್ತಿಗಾಗಿ ಗ್ಯಾರೇಜ್‌ಗಳಲ್ಲಿಯೇ ನಿಲ್ಲುತ್ತಿವೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿತ್ತು. ಅನೇಕ ಕಡೆಗಳಲ್ಲಿ ಸಕಾಲಕ್ಕೆ ಆಂಬ್ಯುಲೆನ್ಸ್‌ ಬಾರದೆ ಇರುವುದನ್ನು ಖಂಡಿಸಿ ಪ್ರತಿಭಟನೆಯೂ ನಡೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಆ್ಯಂಬುಲೆನ್ಸ್‌ ನಿರ್ವಹಣಾ ಕಂಪನಿ, ಕಳೆದ ತಿಂಗಳಷ್ಟೇ ಜಿಲ್ಲೆಗೆ ಆರು ಹೊಸ ಆಂಬ್ಯುಲೆನ್ಸ್‌ಗಳನ್ನು ನೀಡಿದೆ.

Advertisement

ಆಂಬ್ಯುಲೆನ್ಸ್‌ ನಿರ್ವಹಣಾ ವಿಭಾಗದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 20 ಆಂಬ್ಯುಲೆನ್ಸ್‌ ವಾಹನಗಳ ಜತೆಗೆ ಎರಡು ಹೆಚ್ಚುವರಿ ಆಂಬ್ಯುಲೆನ್ಸ್‌ ವಾಹನ ವ್ಯವಸ್ಥೆ ಹೊಂದಲಾಗಿದೆ. ಹಾವೇರಿಯಲ್ಲಿ ನಾಲ್ಕು, ರಾಣಿಬೆನ್ನೂರಿನಲ್ಲಿ ಮೂರು, ಬ್ಯಾಡಗಿಯಲ್ಲಿ ಒಂದು, ಸವಣೂರಿನಲ್ಲಿ ಎರಡು, ಶಿಗ್ಗಾವಿಯಲ್ಲಿ ಮೂರು, ಹಿರೇಕೆರೂರಿನಲ್ಲಿ ನಾಲ್ಕು, ಹಾನಗಲ್ಲನಲ್ಲಿ ಮೂರು ವಾಹನಗಳು ಕಾರ್ಯನಿರ್ವಹಿಸುತ್ತಿವೆ.

ಹೊಸ ವಾಹನಗಳು: ಒಟ್ಟು 22 ವಾಹನಗಳಲ್ಲಿ ಈಗ ಆರು ವಾಹನಗಳು ಹೊಸ ವಾಹನಗಳಾಗಿದ್ದು ಈ ಹೊಸ ವಾಹನಗಳು ಗುತ್ತಲ, ಬಂಕಾಪುರ, ಹಾವೇರಿ, ಕುಪ್ಪೇಲೂರು, ಹಾನಗಲ್ಲ, ಬ್ಯಾಡಗಿ ತಾಲೂಕುಗಳಲ್ಲಿ ಸೇವೆ ನೀಡುತ್ತಿವೆ. ಉಳಿದ ಕಡೆಗಳಲ್ಲಿ 2014ನೇ ಮಾಡೆಲ್‌ನ ವಾಹನಗಳು ಆರೋಗ್ಯ ಸೇವೆ ನೀಡುತ್ತಿವೆ. ಆಂಬ್ಯುಲೆನ್ಸ್‌ ವಾಹನಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ, ಆಕ್ಸಿಜನ್‌, ಹೆರಿಗೆ ಕಿಟ್‌, ಪ್ರಥಮ ಚಿಕಿತ್ಸೆಯ ಎಲ್ಲ ಸಲಕರಣೆ ಹಾಗೂ ಔಷಧಿಗಳನ್ನು ಹೊಂದಿದ್ದು ಕೆಲವು ವಾಹನಗಳಲ್ಲಿ ಹಾಳಾಗಿದ್ದ ಸಲಕರಣೆಗಳನ್ನೆಲ್ಲ ಸರಿಪಡಿಸಿ ಈಗ ಎಲ್ಲ ವಾಹನಗಳನ್ನು ಸಮರ್ಪಕ ಆರೋಗ್ಯ ಸೇವೆಗೆ ಸಜ್ಜುಗೊಳಿಸಲಾಗಿದೆ. ಆದರೆ, ವಾಹನದ ದುರಸ್ತಿ, ಉಪಕರಣಗಳ ದುರಸ್ತಿ ವಿಚಾರ ಬಂದಾಗ ಏಜೆನ್ಸಿಯವರು ತಕ್ಷಣ ಸರಿಪಡಿಸಿ ವಾಹನವನ್ನು ಸೇವೆ ಬಿಡುವ ವ್ಯವಸ್ಥೆ ಮಾಡಬೇಕು ಎಂಬುದು ನಾಗರಿಕರ ಅಪೇಕ್ಷೆಯಾಗಿದೆ. ಒಟ್ಟಾರೆ ಕೆಲ ತಿಂಗಳು ಸರಿಯಾದ ನಿರ್ವಹಣೆ ಇಲ್ಲದೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಆಂಬ್ಯುಲೆನ್ಸ್‌ ವಾಹನಗಳು ಈಗಲಾದರೂ ಜನರಿಗೆ ಸಕಾಲಕ್ಕೆ ಆರೋಗ್ಯ ಸೇವೆ ನೀಡಲು ಮುಂದಾಗಿರುವುದು ಸಮಾಧಾನಕರ ಸಂಗತಿ.

ಜಿಲ್ಲೆಯಲ್ಲಿ 20 ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ ಎರಡು ಆಂಬ್ಯುಲೆನ್ಸ್‌ಗಳು ಇವೆ. ಇವುಗಳಲ್ಲಿ ಆರು ವಾಹನಗಳು ಹೊಸದಾಗಿದ್ದು ಒಂದು ತಿಂಗಳ ಹಿಂದಷ್ಟೇ ಬಂದಿವೆ. ಇನ್ನೂ ಎರಡು ವಾಹನಗಳು ಬರಲಿವೆ. ಹಳೆಯ ವಾಹನಗಳಿಗೆ ಕಾಲಕಾಲಕ್ಕೆ ಬೇಕಾದ ಅಗತ್ಯ ದುರಸ್ತಿ ಮಾಡಿ ಸೇವೆ ನೀಡಲಾಗುತ್ತಿದೆ.
 ಗಿರೀಶ ಆರ್‌.ಬಿ. ,
ಜಿಲ್ಲಾ ವ್ಯವಸ್ಥಾಪಕರು, ಜಿವಿಕೆ ಕಂಪನಿ

ಎಚ್‌.ಕೆ. ನಟರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next