Advertisement
ಅಧಿಕಾರಿಗಳು ವೃದ್ಧಾಪ್ಯ ವೇತನ ವಿಳಂಬಕ್ಕೆ ಚುನಾವಣೆ ನೀತಿ ಸಂಹಿತೆ ನೆಪ ಹೇಳಿ ಜನರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಚುನಾವಣೆ ಮುಗಿದು 25ದಿನಗಳು ಕಳೆದಿವೆ. ಸರ್ಕಾರದಿಂದ ವೇತನ ಬಿಡುಗಡೆ ಆಗುತ್ತಿದೆ. ಇಷ್ಟಾದರೂ ಯಾವೊಬ್ಬ ಪಿಡಿಒ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ. ಜನರ ಸಮಸ್ಯೆ ಆಲಿಸುತ್ತಿಲ್ಲ ಎಂದು ಸದಸ್ಯ ಹನುಮಂತಪ್ಪ ದೂರಿದರು.
Related Articles
Advertisement
ಕಾಡಜ್ಜಿ-ಆಲೂರು ಗ್ರಾಮದ ರೂಟ್‌ಗೆ ಬಸ್ ವ್ಯವಸ್ಥೆ ಸರಿಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ನಿತ್ಯ ಓಡಾಡಲು ಸಾಕಷ್ಟು ತೊಂದರೆ ಆಗುತ್ತಿದೆ ಎಂದು ತಾಪಂ ಸದಸ್ಯೆ ಆಶಾ ದೂರಿದ್ದಕ್ಕೆ , ಕೆಎಸ್‌ಆರ್‌ಟಿಸಿ ಅಧಿಕಾರಿ ಉತ್ತರಿಸಿ, ಆಲೂರು-ಕಾಡಜ್ಜಿ ಮಧ್ಯೆ ರಸ್ತೆ ಸರಿಯಿಲ್ಲ. ಜೊತೆಗೆ ಎಲ್ಲಾ ಕಡೆ ಖಾಸಗಿ ಆಟೋಗಳು ಹೆಚ್ಚಾಗಿವೆ. ಬಸ್‌ನಲ್ಲಿ ಯಾರೂ ಪ್ರಯಾಣ ಮಾಡಲು ಮುಂದೆ ಬರುತ್ತಿಲ್ಲ. ಹಾಗಾದರೆ ನಾವು ಹೇಗೆ ತಾನೆ ಬಸ್ ಬಿಡಬೇಕು ಎಂದು ಪ್ರಶ್ನಿಸಿದರು. ಅದಕ್ಕೆ ಸದಸ್ಯೆ ಆಶಾ ಪ್ರತಿಕ್ರಿಯಿಸಿ, ಈಗ ಎಲ್ಲೆಡೆ ಸಿಸಿ ರಸ್ತೆಯಾಗಿದೆ. ರಸ್ತೆ ಸರಿಯಿಲ್ಲ, ಜನ ಬಸ್‌ಗೆ ಹತ್ತುತ್ತಿಲ್ಲ ಎಂದು ನೆಪ ಹೇಳದೇ ರೂಲ್ಸ್ ಪ್ರಕಾರ ರೂಟ್‌ಗೆ ಬಸ್ ಕಳಿಸಿ ಎಂದು ಒತ್ತಾಯಿಸಿದರು.
ಇನ್ನೂ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಎಸ್‌ಸಿ-ಎಸ್‌ಟಿ, ಬಿಸಿಎಂ ಸೇರಿದಂತೆ ಮೂರು ಮಹಿಳಾ ಹಾಸ್ಟೆಲ್ಗಳಿದ್ದು. ಇಲ್ಲಿಗೆ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿಲ್ಲ ಎಂದು ಹಾಸ್ಟೆಲ್ ವಾರ್ಡನ್ ಒಬ್ಬರು ಹೇಳಿದ್ದಕ್ಕೆ, ಕಾಲೇಜುಗಳು ರಜೆ ಇದ್ದಿದ್ದಕ್ಕೆ ಈ ಭಾಗಕ್ಕೆ ಬಸ್ ಸೇವೆ ನಿಲ್ಲಿಸಲಾಗಿತ್ತು ಎಂದು ಕೆಎಸ್‌ಆರ್‌ಟಿಸಿ ಇಲಾಖೆ ಅಧಿಕಾರಿ ಉತ್ತರಿಸಿದರು. ಕೂಡಲೇ ಇಒ ಮಧ್ಯ ಪ್ರವೇಶಿಸಿ ನಿಮಗೆ ಕಾಲೇಜು ಆರಂಭವಾಗುವ ದಿನಾಂಕ ಗೊತ್ತಾಗುವುದಿಲ್ಲವೇ? ಮೊದಲು ಅಲ್ಲಿಗೆ ಬಸ್ ಬಿಡಿ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗೆ ಕೆಎಸ್‌ಆರ್‌ಟಿಸಿ ಬಸ್ ಹೋಗುತ್ತಿಲ್ಲ. ಜೊತೆಗೆ ಈ ರಸ್ತೆಯಲ್ಲಿ ಬಹುತೇಕ ಗ್ರಾಮಗಳಿಗೆ ಬಸ್ ಸರಿಯಾಗಿ ಹೋಗುತ್ತಿಲ್ಲ ಎಂದು ಕೆಲ ಸದಸ್ಯರು ದೂರಿದ್ದಕ್ಕೆ, ದಾವಣಗೆರೆ ವಿಶ್ವವಿದ್ಯಾನಿಲಯ ರಸ್ತೆಯಲ್ಲಿ ಫ್ಲೈ ಓವರ್ ಆಗುತ್ತಿದೆ. ರಸ್ತೆ ಕಿರಿದಾಗಿದೆ. ಹಾಗಾಗಿ ದೊಡ್ಡ ಬಸ್‌ಗೆ ಕ್ಯಾಂಪಸ್‌ಗೆ ಹೋಗಲು ತೊಂದರೆ ಆಗುತ್ತಿದೆ ಎಂದು ಅಧಿಕಾರಿ ಉತ್ತರಿಸಿದರು.
ಅದಕ್ಕೆ ಉಪಾಧ್ಯಕ್ಷ ಎಚ್.ಆರ್. ಮರುಳಸಿದ್ದಪ್ಪ ಮಾತನಾಡಿ, ಆ ರಸ್ತೆಯಲ್ಲಿ ಹತ್ತು ಚಕ್ರದ ದೊಡ್ಡ ವಾಹನಗಳು ಸಂಚರಿಸುತ್ತಿವೆ. ನಿಮ್ಮ ವಾಹನಗಳು ಮಾತ್ರ ಹೋಗುತ್ತಿಲ್ಲವೆ? ದೊಡ್ಡ ಬಸ್ ಹೋಗಲು ಸಾಧ್ಯವಾಗದ ಬಳಿಕ ಮಿನಿ ಬಸ್ ಬಿಟ್ಟು ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಿ ಎಂದಾಗ, ಬಸ್ ದಾವಣಗೆರೆ ವಿಶ್ವವಿದ್ಯಾನಿಲಯ ಕ್ಯಾಂಪಸ್ ತಲುಪುವುದು ಸೇರಿದಂತೆ ಯಾವ ಯಾವ ಗ್ರಾಮಗಳಿಗೆ ಬಸ್ ಸಂಪರ್ಕ ತೊಂದರೆ ಇದೆಯೋ ಅದರ ಬಗ್ಗೆ ಪರಿಶೀಲನೆ ಮಾಡುವುದಾಗಿ ತಿಳಿಸಿದರು.
ಸಭೆಯ ಆರಂಭಕ್ಕೂ ಮುನ್ನ ನಾಟಕಕಾರ ಗಿರೀಶ್ ಕಾರ್ನಾಡ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ನಂತರ ತೋಟಗಾರಿಕೆ ಇಲಾಖೆ, ಆಹಾರ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು ಮಾಹಿತಿ ನೀಡಿದರು.
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ತಾಲೂಕು ಪಂಚಾಯತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾಗರಾಜ್ ಸೇರಿದಂತೆ ತಾಲೂಕು ಪಂಚಾಯತಿಯ ಎಲ್ಲಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.