Advertisement

ಸರ್ಕಾರಿ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಿ

01:20 PM Jun 27, 2023 | Team Udayavani |

ಮದ್ದೂರು: ನರೇಗಾ ಯೋಜನೆಯಡಿ ಹಲವು ಕಾಮಾಗಾರಿಗಳನ್ನು ಕೈಗೊಂಡು ಸಕಾಲದಲ್ಲಿ ಪೂರ್ಣಗೊಳಿಸಿ, ಗ್ರಾಮಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡ ಬೇಕು. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಗಳನ್ನು ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿ ಗಳು ಅಗತ್ಯ ಕ್ರಮವಹಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಧನರಾಜ್‌ ಬೋಳಾರೆ ತಿಳಿಸಿದರು.

Advertisement

ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕೆಲ ಗ್ರಾಮಗಳಲ್ಲಿ ನರೇಗಾ ಯೋಜನೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೆ ಅಭಿವೃದ್ಧಿಯಿಂದ ಕುಂಠಿತವಾಗಿದೆ. ಕೂಡಲೇ ನರೇಗಾ ಕೆಲಸ ಕಾರ್ಯಗಳನ್ನು ತ್ವರಿತಗತಿ ಯಲ್ಲಿ ಕೈಗೊಂಡು ಗ್ರಾಮದ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಅರಣ್ಯ ಸಂರಕ್ಷಣೆಗೆ ಮುಂದಾಗಿ: ಅರಣ್ಯ ಇಲಾಖೆ ವತಿಯಿಂದ ಕೋಟಿ ವೃಕ್ಷ ಅಭಿಯಾನ ಹಾಗೂ ಹಸಿರು ಸರೋವರ ಯೋಜನೆಯಡಿ ಗಿಡ ನೆಡುವ ಕಾರ್ಯಕ್ರಮಕ್ಕೆ ಮುಂದಾಗಿದೆ. ರೇಷ್ಮೆ, ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೈಜೋಡಿಸುವ ಮೂಲಕ ಸರ್ಕಾರಿ ಬರಡು ಭೂಮಿ, ಸಾರ್ವಜನಿಕ ಭೂಮಿ ಯಲ್ಲಿ ಗಿಡ ನೆಟ್ಟು ಅರಣ್ಯ ಸಂರಕ್ಷಣೆಗೆ ಮುಂದಾಗಿ, ಇತರರಿಗೂ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಮಾರ್ಗದರ್ಶನದಲ್ಲಿ 12 ಅಂಶದ ಕಾರ್ಯಕ್ರಮ ನಡೆಯಲಿದೆ. ನರೇಗಾ ಯೋಜನೆ ಯಡಿ ಪುರಾತತ್ವ ಇಲಾಖೆಗೆ ಒಳಪಡುವ ತಾಲೂಕಿನ ಆತಗೂರು, ಕೂಳಗೆರೆ, ಕೆ.ಬೆಳ್ಳೂರು ಮತ್ತು ವೀರಗಲ್ಲುಗಳನ್ನು ಒಳಗೊಂಡಂತೆ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಜೀರ್ಣೋದ್ಧಾರಗೊಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮ ನಡೆಯಲಿದೆ. ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು ಎಂದರು.

ಸರ್ಕಾರಿ ಮಾರ್ಗಸೂಚಿ ಪಾಲಿಸಿ: ಪಂಚ ಅಭಿಯಾನದ ಅನುಷ್ಠಾನಕ್ಕಾಗಿ ನಿಗದಿತ ಕಾಲಾವಧಿಯೊಳಗೆ ಜಲ ಸಂಜೀವಿನಿ ಕಾಮಗಾರಿಗಳು ಮತ್ತು ವಿಪತ್ತು ನಿರ್ವಹಣೆ, ಗೋಮಾಳ ಅಭಿವೃದ್ಧಿ, ಕೊಳವೆಬಾವಿ ಪುನಶ್ಚೇತನ, ಜೈವಿಕ ಅನಿಲ ಮತ್ತು ಹಸಿರು ಸರೋವರ ಪಂಚ ಅಭಿಯಾನಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸಿ, ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಹೇಳಿದರು.

Advertisement

ಕೊಳವೆ ಬಾವಿ ಪುನಶ್ಚೇತನಕ್ಕೆ ಆದ್ಯತೆ ನೀಡಿ: ತಾಲೂಕಿನಲ್ಲಿ ನಿಷ್ಕ್ರಿಯಗೊಂಡಿರುವ ಕೊಳವೆ ಬಾವಿಗಳ ಅಂದಾಜು ಪಟ್ಟಿ ತಯಾರಿಸಿ, ಅವುಗಳ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು. ವಿನ್ಯಾಸದಂತೆ ಅನುಷ್ಠಾನಗೊಳಿಸಿ, ಅಂತರ್ಜಲ ಮಟ್ಟ ಕುಸಿತಗೊಂಡಿರುವ ಕೊಳವೆ ಬಾವಿಗಳ ಪುನಶ್ಚೇತನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತಾಲೂಕಿನಲ್ಲಿ ಇಲಾಖಾವಾರು ಅಧಿಕಾರಿಗಳು ಸರ್ಕಾರದ ಹಲವು ಯೋಜನೆಗಳನ್ನು ಹಂತ ಹಂತವಾಗಿ ಅರ್ಹ ಫ‌ಲಾನುಭವಿಗಳಿಗೆ ತಲುಪಲು ಕ್ರಮವಹಿಸಬೇಕು. ಕೆಲ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಪಂ ಇಒ ಸಂದೀಪ್‌, ವಿವಿಧ ಇಲಾಖೆ ಅಧಿಕಾರಿಗಳಾದ ಎಸ್‌.ಕೆ. ತಮ್ಮೇಗೌಡ, ಸಿ. ನಾಗಲಕ್ಷ್ಮೀ, ಲೋಕೇಶ್‌, ಅಭಿಷೇಕ್‌, ವೆಂಕಟೇಶ್‌ ಹಾಜರಿದ್ದರು.

ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೊಳಗಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯಿದೆ. ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮತ್ತು ಹಸಿರು ಎಲೆ ಗೊಬ್ಬರದ ಬೀಜಗಳನ್ನು ಸಕಾಲದಲ್ಲಿ ರೈತರಿಗೆ ವಿತರಿಸಬೇಕು. ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ●ಧನರಾಜ್‌ ಬೋಳಾರೆ, ತಾಪಂ ಆಡಳಿತಾಧಿಕಾರಿ, ಮದ್ದೂರು

Advertisement

Udayavani is now on Telegram. Click here to join our channel and stay updated with the latest news.

Next