Advertisement

ಕುಡಿವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಿ

12:04 PM Mar 07, 2019 | Team Udayavani |

ಚನ್ನಪಟ್ಟಣ: ಬೇಸಿಗೆ ಸಮೀಪಿಸುತ್ತಿರುವುದರಿಂದ ಪಟ್ಟಣ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು. ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಲಮಂಡಳಿ ಎಇಇ ಪುಟ್ಟಯ್ಯ ನಗರಸಭೆ ಸದಸ್ಯರು ತಾಕೀತು ಮಾಡಿದರು.

Advertisement

ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು, ಬೇಸಿಗೆಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ, ಕಳೆದ ಐದು ದಿನಗಳಿಂದ ಕಾವೇರಿ ನೀರು ಸರಬರಾಜು ಆಗಿಲ್ಲ. ಈ ಸಮಯದಲ್ಲಿ ಬೋರ್‌ವೆಲ್‌ಗ‌ಳಲ್ಲಿ ನೀರು ಸರಬರಾಜುಮಾಡಬೇಕಿತ್ತು ಅಥವಾ ಟ್ಯಾಂಕರ್‌ ಮೂಲಕ ಕಳುಸುವ ಕೆಲಸ ಮಾಡಬೇಕಿತ್ತು. ಆದರೆ, ಅಧಿಕಾರಿಗಳು ಗಮನಹರಿಸದ ಪರಿಣಾಮ ಜನತೆ ತಮ್ಮನ್ನು ಶಪಿಸುವಂತಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. 

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ: ಕೆಲವೆಡೆ ಬೋರ್‌ ವೆಲ್‌ಗ‌ಳು ಹಾಳಾಗಿವೆ. ಅವುಗಳನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿಲ್ಲ. 22ರಿಂದ 26ನೇ ವಾರ್ಡನವರೆಗೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಪ್ರತಿನಿತ್ಯ ಸಮಸ್ಯೆ ಇದೆ. ನೀರುಗಂಟಿಗಳು ಸಹ ಸಮರ್ಪಕವಾಗಿ ಕೆಲಸ
ಮಾಡುತ್ತಿಲ್ಲ. ನಗರಸಭೆಯಲ್ಲಿ ಕೇವಲ ಎರಡು ಟ್ಯಾಂಕರ್‌ಗಳಿದ್ದು ಅವು ಸಾಲುತ್ತಿಲ್ಲ, ಅನಗತ್ಯವಾಗಿ ಖರ್ಚು ಮಾಡುವ ಬದಲು ಟ್ಯಾಂಕರ್‌ಗಳನ್ನು ಖರೀದಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸದಸ್ಯ ಜಬೀವುಲ್ಲಾಖಾನ್‌ ಘೋರಿ ಆಗ್ರಹಿಸಿದರು.

ಮನವಿ ಸಲ್ಲಿಸಿದ್ದರೂ ಪ್ರಯೋಜನವಿಲ್ಲ: ಸದಸ್ಯಲಿಯಾಖತ್‌ ಆಲಿಖಾನ್‌ ಮಾತನಾಡಿ, ತಮ್ಮ ವಾರ್ಡ್‌ ವ್ಯಾಪ್ತಿಯ ಕುಂಬಾರಗುಂಡಿ ಪ್ರದೇಶದಲ್ಲಿ ವರ್ಷಗಳಿಂದಲೂ ನೀರಿನ ಸಮಸ್ಯೆ ಇದೆ. ಬೋರ್‌ ವೆಲ್‌ ಹಾಳಾಗಿ ಆರು ತಿಂಗಳಾಗಿವೆ. ಇನ್ನೂ ಸರಿಪಡಿಸಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದರೂ
ಪ್ರಯೋಜನವಾಗಿಲ್ಲ. ಸರಿಪಡಿಸುವುದಾದರೆ ಸರಿಪಡಿಸಿ, ಇಲ್ಲವಾದರೆ ಅಲ್ಲಿ ವಾಸವಿರುವ ಜನರೇ ನಗರಸಭೆ ಮುಂದೆ ಬಂದು ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು. 

ನೀರಿನ ಸಮಸ್ಯೆ ಬಗೆಹರಿಸಿ: ಇನ್ನು ಹನುಮಂತನಗರ ಬಳಿ ಓವರ್‌ಹೆಡ್‌ ಟ್ಯಾಂಕ್‌ಗೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂದು ಸದಸ್ಯ ಹಮೀದ್‌ ಮುನಾವರ್‌ ತರಾಟೆಗೆ ತೆಗೆದುಕೊಂಡರೆ, ಸದಸ್ಯೆಯರಾದ ಫಜಾìನಾ ಬಾನು ಹಾಗೂ ಉಜ್ಮಾ ಇಶ್ರತ್‌, ಸದಸ್ಯ ಜಕಿ ಅಹಮ್ಮದ್‌ ಅವರು ತಮ್ಮ ವಾರ್ಡನಲ್ಲಿಯೂ ಸಮಸ್ಯೆ ಇದೆ. ಹೆಚ್ಚುವರಿ ಟ್ಯಾಂಕರ್‌ ಕೊಂಡು, ಅಗತ್ಯವಿದ್ದಾಗ ಕೂಡಲೇ ನೀರು ಸರಬರಾಜು ಮಾಡಬೇಕು. ನೀರು ಪೋಲಾಗುತ್ತಿರುವ ಕಡೆ ವಾಲ್ವಗಳನ್ನು ಬದಲಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರನ್ನು ಆಗ್ರಹಪಡಿಸಿದರು. ಸದಸ್ಯ ವಿಷಕಂಠಮೂರ್ತಿ ಸಹ ತಮ್ಮ ವಾರ್ಡ್‌ನ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದುಕೋರಿದರು.

Advertisement

ಹೊಸ ಕ್ರಿಯಾ ಯೋಜನೆ ರೂಪಿಸಿ: ಈ ವೇಳೆ ಜಲಮಂಡಳಿ ಎಇಇ ಪುಟ್ಟಪ್ಪ ಪ್ರತಿಕ್ರಿಯಿಸಿ, ಕಾವೇರಿ ನೀರಿನ ಸಮಸ್ಯೆ ಇದ್ದಾಗ ಬೋರ್‌ವೆಲ್‌ ಮೂಲಕ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆ ಸಮೀಪಿಸುತ್ತಿರುವುದರಿಂದ ಹಾಳಾಗಿರುವ ಬೋರ್‌ವೆಲ್‌, ಪೈಪ್‌ಲೈನ್‌ ಸರಿಪಡಿಸಲು ಕ್ರಮ ವಹಿಸಲಾಗುವುದು. ತುರ್ತು ಅವಶ್ಯಕತೆ ಇದ್ದಾಗ ಖಾಸಗಿ ಟ್ಯಾಂಕರ್‌ ಬಳಸಿಕೊಳ್ಳಲಾಗುವುದು. ಹಿಂದೆ ಬೋರ್‌ವೆಲ್‌ ಹಾಗೂ ಪೈಪ್‌ಲೈನ್‌ಗಾಗಿ 30 ಲಕ್ಷ ರೂ. ಕ್ರಿಯಾ ಯೋಜನೆ ಮಾಡಲಾಗಿದ್ದು, ಅದನ್ನು ಹೊಸದಾಗಿ ಕ್ರಿಯಾ ಯೋಜನೆ ರೂಪಿಸಿ ಸಮಸ್ಯೆ ಇರುವ ವಾರ್ಡಗಳಿಗೆ ವಿನಿಯೋಗಿಸಲಾಗುವುದು ಎಂದರು.

ಚನ್ನಪಟ್ಟಣ ಹಾಗೂ ರಾಮನಗರ ಪಟ್ಟಣಗಳಿಗೆ ನೀರು ಪಂಪ್‌ಮಾಡಲು 150 ಎಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಗ್ಳಿದೆ. ರೊಟೇಟಿಂಗ್‌ ಮೂಲಕ ಸರಬರಾಜು ಮಾಡಲಾಗುತ್ತದೆ. ಸದ್ಯ ಒಂದು ಪಂಪ್‌ ಕೆಟ್ಟಿದ್ದು, ಸರಿಪಡಿಸಲು ಕಳುಹಿಸಲಾಗಿದೆ. ಹೆಚ್ಚುವರಿಯಾಗಿ 100 ಎಚ್‌ಪಿ ಸಾಮರ್ಥ್ಯದ ಪಂಪ್‌ ಅಳವಡಿಸಲು ಎಸ್ಟಿಮೇಟ್‌ ಕೊಟ್ಟಿದ್ದೇವೆ ಎಂದರು. 

ನೀರಿನ ಹಣ ಪಾವತಿ ಮಾಡಿ: ನೀರಿನ ಬಿಲ್‌ ಸಮರ್ಪಕವಾಗಿ ಪಾವತಿ ಮಾಡದ ಪರಿಣಾಮ 8.25 ಕೋಟಿ ರೂ. ಬಾಕಿ ಉಳಿದುಕೊಂಡಿದೆ. ಹಣಕಾಸಿನ ಮುಗ್ಗಟ್ಟಿನಿಂದ ತೊಂದರೆಯಾಗುತ್ತಿದೆ. ಪ್ರತಿ ತಿಂಗಳ ಖರ್ಚು 40 ಲಕ್ಷ ರೂ. ಆಗಲಿದ್ದು, 20 ಲಕ್ಷ ರೂ. ಮಾತ್ರ ವಸೂಲಿಯಾಗುತ್ತಿದೆ. ನೀರಿನ ಬಿಲ್‌ ಪಾವತಿ ಮಾಡಿದರೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಇದಕ್ಕೆ ಎಲ್ಲ ಸದಸ್ಯರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಹೊಸ ಟ್ಯಾಂಕರ್‌ ಖರೀದಿ: ಪೌರಾಯುಕ್ತ ಪುಟ್ಟಸ್ವಾಮಿ ಮಾತನಾಡಿ, ಎರಡು ಟ್ಯಾಂಕರ್‌ಗಳ ಪೈಕಿ ಒಂದು ಕೆಟ್ಟಿದ್ದು, ಹೊಸ ಟ್ಯಾಂಕರ್‌ ಖರೀದಿ ಮಾಡಲಾಗುತ್ತಿದೆ. ಅಗತ್ಯವಿದ್ದ ಕಡೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಲಮಂಡಳಿಯವರು ನೀರಿನ ಬಿಲ್‌ ಸಮರ್ಪಕವಾಗಿ ವಸೂಲಿ ಮಾಡಬೇಕು, ಇದಕ್ಕೆ ನಗರಸಭೆ ಸಹಕಾರ ನೀಡಲಿದೆ ಎಂದರು.

ಈ ಅವಧಿಯ ಕೊನೆಯ ಸಭೆಯಾಗಿದ್ದರಿಂದ ನಗರಸಭೆಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಲ್ಲಾ ಸದಸ್ಯರು ಮುಂದೆಯೂ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ನಗರಸಭೆ ಅಧ್ಯಕ್ಷೆ ನಜ್ಮುನ್ನೀಸಾ, ಉಪಾಧ್ಯಕ್ಷೆ ಸರಳ, ಸದಸ್ಯರಾದ ಮುದ್ದುಕೃಷ್ಣೇಗೌಡ, ರಾಮು, ನಂದೀಶ್‌, ಉಮಾ ಶಂಕರ್‌,ಬಾವಾಸಾ, ಲೋಕೇಶ, ಪಿ.ಡಿ.ರಾಜು, ಸನಾವುಲ್ಲಾ, ಮಂಜುನಾಥ್‌, ಶ್ವೇತಾ, ಆಖೀಲಾಬಾನು, ಶಶಿಕುಮಾರ್‌ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next