Advertisement

ಪಿಒಪಿ ಮೂರ್ತಿ ಮಾರಾಟಕ್ಕೆ ಅನುಮತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಿ

04:50 PM Sep 16, 2018 | Team Udayavani |

ಬಳ್ಳಾರಿ: ಪಿಒಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿರುವ ಮಹಾನಗರ ಪಾಲಿಕೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ನೆಚ್ಚಿಕೊಂಡು ನಷ್ಟ ಅನುಭವಿಸುತ್ತಿರುವ ಸಾಂಪ್ರದಾಯಿಕ ಕುಂಬಾರರಿಗೆ ಸೂಕ್ತ ಪರಿಹಾರ ನೀಡಬೇಕು
ಎಂದು ಆಗ್ರಹಿಸಿ, ಶಾಲಿವಾಹನ ಕುಂಬಾರರ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಶನಿವಾರ ಮನವಿ ಸಲ್ಲಿಸಿದರು.

Advertisement

ಪ್ರಸಕ್ತ ವರ್ಷ ಗಣೇಶನ ಹಬ್ಬದಲ್ಲಿ ಪಿಒಪಿ ಗಣೇಶ ವಿಗ್ರಹಗಳಿಗೆ ಕಡಿವಾಣ ಹಾಕುವ ಸಲುವಾಗಿ ಜಿಲ್ಲಾಡಳಿತ, ಮಹಾನಗರಪಾಲಿಕೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಆದೇಶದ ಮೇರೆಗೆ ನಗರದ ಕುಂಬಾರರು ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದೆ ಕೇವಲ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನೇ ನೆಚ್ಚಿಕೊಂಡು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಹಲವಾರು ವಿಗ್ರಹಗಳನ್ನು ಮಣ್ಣಿನಿಂದಲೇ ಸಿದ್ಧಪಡಿಸಿದ್ದರು. ಆದರೆ, ಮಹಾನಗರಪಾಲಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಗರದಲ್ಲಿ ಮಾರಾಟವಾದ ಪಿಒಪಿ ಗಣೇಶ ವಿಗ್ರಹಗಳಿಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರದಲ್ಲಿ ಪಿಒಪಿ ಗಣೇಶ ವಿಗ್ರಹಗಳು ರಾಜಾರೋಷವಾಗಿ ಮಾರಾಟವಾಗಿವೆ. ಇದರಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಕೇಳುವವರೇ ಇಲ್ಲವಾಗಿದ್ದು, ಗಣೇಶ ನಿರ್ಮಾಣಕ್ಕೆ ಹಾಕಿದ್ದ
ಬಂಡವಾಳವೂ ವಾಪಸ್‌ ಬಂದಿಲ್ಲ. ಇದರಿಂದ ಕುಂಬಾರರ ಬದುಕು ಅತಂತ್ರವಾಗಿದೆ ಎಂದು ಆರೋಪಿಸಿದರು.

ಗಣೇಶ ಹಬ್ಬದ ಅಂಗವಾಗಿ ಈಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳು ನೀಡಿದ ಭರವಸೆಯಂತೆ ನಡೆದುಕೊಂಡಿದ್ದರೆ
ಕುಂಬಾರರು ಪರಿಹಾರಕ್ಕಾಗಿ ಕೈಚಾಚುತ್ತಿರಲಿಲ್ಲ. ನಗರದ ವಿವಿಧೆಡೆ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮತ್ತು ಮಾರಾಟ ಮಾಡುತ್ತಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ, ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದೇ ಕುಂಬಾರರ ಬದುಕು ಅತಂತ್ರಕ್ಕೆ ಕಾರಣವಾಗಿದೆ. ಇದರಿಂದ ಕುಂಬಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಸಮಸ್ಯೆ ಅರಿತು ಸೂಕ್ತ ಪರಿಹಾರ ನೀಡಬೇಕು. ಪಿಒಪಿ ವಿಗ್ರಹಗಳ ಮಾರಾಟಕ್ಕೆ ಅನುಮತಿ ನೀಡಿದ ಅಧಿಕಾರಿಗಳು, ಮಾರಾಟ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕೆ.ಯರ್ರಿಸ್ವಾಮಿ, ಕೆ.ನಾರಾಯಣಪ್ಪ, ಪಿ.ವಿ.ನರಸಿಂಹ, ಕೆ.ರಾಜೇಶ್ವರಿ, ಕೆ.ಲಲಿತಾ, ಕೆ.ಜ್ಯೋತಿ, ಕೆ.ವೆಂಕಟಲಕ್ಷ್ಮೀ, ಕೆ.ಶೃತಿ, ಕೆ.ಶಾಂತಿ, ಕೆ.ರಘು ಸೇರಿದಂತೆ ಸಮುದಾಯದ ಹಲವರು ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next