ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ನಾಲೆ ಆಧುನೀಕರಣ ಕಾಮಗಾರಿ ನಡೆದು ವರ್ಷತುಂಬುವ ಮೊದಲೇ ಕುಸಿತಕ್ಕೊಳಗಾಗಲು ಕಳಪೆ ಕಾಮಗಾರಿಯೇ ಕಾರಣವಾಗಿದ್ದು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕಿನ ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆ ನಡೆಸಿತು. ನಗರದ ಕಬಿನಿ ನೀರಾವರಿ ಇಲಾಖೆಯ ಕಾರ್ಯಾಲಯದ ಮುಂದೆ ಜಮಾಯಿಸಿದ ರೈತರು ಕಚೇರಿ ಮುಖ್ಯದ್ವಾರ ಬಂದ್ ಮಾಡಿ ಇಲಾಖೆ ವೈಫಲ್ಯವನ್ನು ಖಂಡಿಸಿ ಧಿಕ್ಕಾರ ಕೂಗಿದರು.
ಕಾಮಗಾರಿ ಪೂರ್ಣಗೊಳುವ ಮುನ್ನವೇ ಶಂಕರಪುರ ಬಡಾವಣೆ ಸಮೀಪದಲ್ಲಿ ಕಾಂಕ್ರೀಟ್ ಲೈನಿಂಗ್ ಗೋಡೆ ಕುಸಿತ ಸೇರಿದಂತೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಕುನಾಲ್ ಕನ್ಸ್‌ಸ್ಟ್ರಕ್ಷನ್ ಕಂಪನಿ ವಿರುದ್ಧ ಕ್ರಮಕ್ಕೆ ಇಲಾಖೆ ಅಧಿಕಾರಿಗಳು ಶಿಫಾರಸ್ಸು ಮಾಡದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಪಾದಿಸಿದರು.
ಗುತ್ತಿಗೆ ಪಡೆದಿದ್ದ ಕಂಪನಿ ಕುಸಿದ ನಾಲೆಯತ್ತ ತಿರುಗಿಯೂ ನೋಡಿಲ್ಲ. ಬದಲಾಗಿ ಬೇರೊಂದು ಹೆಸರಿನಲ್ಲಿ 1.5 ಕೋಟಿ ಅಂದಾಜು ವೆಚ್ಚದಲ್ಲಿ ದುರಸ್ತಿ ಕಾರ್ಯ ಪ್ರಾರಂಭಿಸಿದೆ. ಹೀಗಾಗಿ ಸರ್ಕಾರದ ಕೋಟ್ಯಂತರ ರೂ., ಹಣ ಪೋಲಾಗುವಂತಾಗಿದೆ ಎಂದರು. ಗುತ್ತಿಗೆ ಕಂಪನಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು.
ದುರಸ್ತಿಗೆ ತಗಲುವ ವೆಚ್ಚವನ್ನು ಆ ಗುತ್ತಿಗೆ ಕಂಪನಿಯಿಂದಲೇ ಭರಿಸಬೇಕು. ಕಳಪೆ ಗುಣಮಟ್ಟದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಆ ಸಂಸ್ಥೆಯನ್ನು ಕಪ್ಪು$ಪಟ್ಟಿಗೆ ಸೇರಿಸಬೇಕು ಎಂದು ತಿಳಿಸಿದರು. ನಾಲೆ ಕುಸಿತದಿಂದ ಮುಂದಿನ ಭಾಗದ 6 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರೈತರು ಫಸಲು ಬೆಳೆದಿದ್ದು ಈಗ ನೀರಿಲ್ಲದೇ ಒಣಗುತ್ತಿದ್ದು ಸರ್ಕಾರ ಕೂಡಲೇ ಬೆಳೆ ಪರಿಹಾರ ನೀಡಬೇಕೆಂದರು.
ಮನವಿ ಸ್ವೀಕರಿಸಿದ ಮಾತನಾಡಿದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕೆ.ಎಂ.ಮರಿಸ್ವಾಮಿ, ಮಳೆ ನೀರಿನ ಪ್ರವಾಹದಿಂದ ಅವಘಡ ಸಂಭವಿಸಿರುವುದು ಸಾಬೀತಾಗಿದೆ. ತುರ್ತಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಪಿಡಿಆರ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ವಾರದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ತಾಲೂಕು ಅಧ್ಯಕ್ಷ ಹಾಡ್ಯ ರವಿ, ಉಪಾಧ್ಯಕ್ಷ ಹದಿನಾರು ಭುಜಂಗಪ್ಪ, ರೈತಸಂಘದ ತಾಲೂಕು ಅಧ್ಯಕ್ಷ ಟಿ.ಆರ್.ವಿದ್ಯಾಸಾಗರ್, ಕಪಿಲೇಶ್, ಸಿಂಧುವಳ್ಳಿ ಬಸವಣ್ಣ, ಚಿಕ್ಕಸ್ವಾಮಿ, ಮಹದೇವಸ್ವಾಮಿ, ಎ.ಮಂಜುನಾಥ್, ರಮೇಶ್, ಕುಮಾರ್, ಗಿರೀಶ್, ಶಿವಣ್ಣ ಇದ್ದರು.