ದಾವಣಗೆರೆ: ಅನಧಿಕೃತವಾಗಿ ಪ್ರಯಾಣಿಕರನ್ನು ಕೊಂಡೊಯ್ಯುವ ವಾಹನಗಳ ಮಾಲೀಕರು, ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಟ್ಯಾಕ್ಸಿ ಮಾಲೀಕರ ಹಾಗು ಚಾಲಕರ ಸಂಘ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮಂಗಳವಾರ ಉಪವಿಭಾಗಾಧಿಕಾರಿ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಅನಧಿಕೃತ ಟ್ಯಾಕ್ಸಿಗಳಿಂದ ಆಗುತ್ತಿರುವ ಸಮಸ್ಯೆ ಶೀಘ್ರ ಪರಿಹಾರಕ್ಕೆ ಒತ್ತಾಯಿಸಿದರು.
ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ಸಂಘದ ಅಧ್ಯಕ್ಷ ಎಚ್. ರಾಜಪ್ಪ, ನಗರದ ಪಿಬಿ ರಸ್ತೆಯಲ್ಲಿನ ರೈಲು ನಿಲ್ದಾಣದ ಎದುರುಗಡೆ ಕ್ರೂಸರ್ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ. ಪೇಪರ್ ವಾಹನದ ಹೆಸರಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದರಿಂದ ನಮಗೆ ನಷ್ಟ ಉಂಟಾಗುತ್ತಿದೆ ಎಂದರು.
ಈ ಅನಧಿಕೃತ ವಾಹನಗಳ ಮಾಲೀಕರು, ಚಾಲಕರು ಕ್ರೂಸರ್ ವಾಹನದಲ್ಲಿ 12 ಸೀಟುಗಳಿಗೆ ಅನುಮತಿ ಪಡೆದು 15 ಸೀಟು ತುಂಬುತ್ತಾರೆ. ಆರ್‌ಟಿಒದಲ್ಲಿ ಪ್ರವಾಸಿ ವಾಹನ ಎಂಬುದಾಗಿ ಪರವಾನಗಿ ಪಡೆದು ಕಾನೂನು ಉಲ್ಲಂಘಿಸುತ್ತಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಪರವಾನಗಿ ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದರು. ಸಂಘದ ಉಪಾಧ್ಯಕ್ಷ ಎಸ್.ಪಿ. ರವೀಂದ್ರನಾಥ, ಕಾರ್ಯದರ್ಶಿ ಕೆ.ಡಿ.ದೀಕ್ಷಿತ್, ಸಹ ಕಾರ್ಯದರ್ಶಿ ಜಿ. ಮುರುಗೇಶ್, ಖಜಾಂಚಿ ಬಿ.ಡಿ. ಸುಧೀರ್, ಆರ್. ಮಂಜುನಾಥ, ಜಿ. ಶ್ರೀನಿವಾಸ್, ಎಂ.ಬಿ.ಜಯಪ್ರಕಾಶ್ ಮನವಿ ಸಲ್ಲಿಸುವ ವೇಳೆ ಇದ್ದರು.