ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನೆಪದಲ್ಲಿ ಸಾಮಾಜಿಕ ಸಾಮರಸ್ಯ ಕದಡುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು. ಹಾಗೆಯೇ ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ಪ್ರತಿಭಟನೆಗೆ ಕುಮ್ಮಕ್ಕು ನೀಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಕ್ರಮ ಜರುಗಿಸಬೇಕು ಎಂದು ಕೋರಿ ಸಂಸದ ತೇಜಸ್ವಿ ಸೂರ್ಯ ಸಿಎಂಗೆ ಪತ್ರ ಬರೆದಿದ್ದಾರೆ.
ಅನುಮಾನಗಳಿವೆ: ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ, ಕಾಯ್ದೆ ವಿರುದ್ಧ ಅಸಮಾಧಾನ ಹೊರ ಹಾಕುವ ನೆಪದಲ್ಲಿ ಕೆಲ ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿ ಲಾಭ ಪಡೆದು ಅಮಾಯಕರಿಗೆ ತೊಂದರೆ ನೀಡುತ್ತಿವೆ.ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು. ಆದರೆ, ಪ್ರತಿಭಟನೆಯನ್ನು ದೇಶದ್ರೋಹಿ, ಸಮಾಜಘಾತುಕ ಸಂಘಟನೆಗಳು ಹೈಜಾಕ್ ಮಾಡಿರುವ ಅನುಮಾನಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಲ್ಲೆ ನಡೆಸಿದ್ದಾರೆ: ಐಪಿಸಿ ಸೆಕ್ಷನ್ 144 ಜಾರಿಯಲ್ಲಿದ್ದಾಗಲೂ ಮಂಗಳೂರು ಉತ್ತರ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದು ದುರಂತ. ಬೆಂಗಳೂರಿನಲ್ಲೂ ಪರಿಸ್ಥಿತಿ ಸೂಕ್ಷ್ಮವಾಗಿದೆ. ಡಿ.22ರಂದು ಟೌನ್‌ಹಾಲ್ ಬಳಿ ಕಾಯ್ದೆ ಪರವಾಗಿ ನಡೆದ ರ್ಯಾಲಿನಲ್ಲಿ ತಾನು ಪಾಲ್ಗೊಂಡಿದ್ದೆ. ಶಾಂತವಾಗಿ ನಡೆದಿದ್ದ ಸಭೆಯಲ್ಲಿ ಕಿಡಿಗೇಡಿಗಳು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾರ್ಯಕ್ರಮದ ಬಳಿಕ ಹಿಂತಿರುಗುತ್ತಿದ್ದ ಪಕ್ಷದ ಕಾರ್ಯಕರ್ತ ವರುಣ್ ಮೇಲೆ ಬಂಬೂ ಬಜಾರ್‌ನಲ್ಲಿ ಕಿಡಿಗೇಡಿಗಳು ಚಾಕು, ಚೂರಿಯಿಂದ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಉಲ್ಲೇಖೀಸಿದ್ದಾರೆ.
ಶಾಂತಿ ನೆಲೆಸಲು ಕ್ರಮ ಕೈಗೊಳ್ಳಿ: ಸುಪ್ರೀಂ ಕೋರ್ಟ್ 2018ರ ಅ.1ರಂದು ನೀಡಿರುವ ಆದೇಶದಲ್ಲಿ ಬಂದ್, ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಹಾನಿ ವೆಚ್ಚವನ್ನು ಹಾನಿಗೊಳಿಸಿದವರಿಂದಲೇ ಭರಿಸಬೇಕು ಎಂದು ಸೂಚಿಸಿದೆ. ಅದರಂತೆ ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಂಡಿದೆ. ಅದೇ ರೀತಿ ರಾಜ್ಯದಲ್ಲೂ ಪ್ರತಿಭಟನೆಗೆ ಕುಮ್ಮಕ್ಕು ನೀಡಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡುತ್ತಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಬೇಕು.ಹಿಂಸೆಗೆ ಪ್ರಚೋದಿಸಿದವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ.