ಕೈರಂಗಳ : ಕರಾವಳಿ ಭಾಗದಲ್ಲಿ ನಿರಂತರವಾಗಿ ಗೋಕಳವು ಕೃತ್ಯಗಳು ನಡೆಯುತ್ತಿದ್ದರೂ ರಾಜ್ಯ ಸರಕಾರ ಕಣ್ಣು ಮುಚ್ಚಿ ಕುಳಿತಿದ್ದು, ಜನತೆಗೆ ಗೋಕಳವು ಭಾಗ್ಯ ಕರುಣಿಸಿದೆ. ಗೋಕಳ್ಳರ ವಿರುದ್ಧ ಸರಕಾರ ಹಾಗೂ ಪೊಲೀಸ್ ಇಲಾಖೆ ನಿಷ್ಠುರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಆಗ್ರಹಿಸಿದ್ದಾರೆ.
ಮುಡಿಪು ಸಮೀಪದ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಇತ್ತೀಚೆಗೆ ಮುಂಜಾನೆ ವೇಳೆ ಸಿಬಂದಿಗೆ ತಲವಾರು ತೋರಿಸಿ ಬೆದರಿಸಿ ಗೋ ದರೋಡೆ ಮಾಡಿದ ಕೃತ್ಯವನ್ನು ಖಂಡಿಸಿ, ಗೋಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರವಿವಾರ ಆರಂಭವಾದ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.
ಉಪವಾಸ ಸತ್ಯಾಗ್ರಹ ಆರಂಭಿಸಿ, ಧರಣಿಯ ನೇತೃತ್ವ ವಹಿಸಿರುವ ಅಮೃತಧಾರಾ ಗೋಶಾಲೆ ಸಮಿತಿ ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್ ಮಾತನಾಡಿ, ಪೊಲೀಸರು ಗೋಕಳ್ಳರನ್ನು ಬಂಧಿಸಿ, ಅವರು ತಪ್ಪೊಪ್ಪಿಕೊಳ್ಳುವ ತನಕ ಸತ್ಯಾಗ್ರಹದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಧರಣಿಯ ಮೂಲಕ ಗೋಕಳ್ಳರಿಗೆ ಎಚ್ಚರಿಕೆ ಸಂದೇಶ ತಲುಪಿಸಲಾಗುವುದು. ಸತ್ಯಾಗ್ರಹಕ್ಕೆ ಸೂಕ್ತ ಸ್ಪಂದನೆ ವ್ಯಕ್ತವಾಗದಿದ್ದಲ್ಲಿ ನಾಳೆಯಿಂದ ಸರಣಿ ಧರಣಿ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು. ಈ ಹಿಂದೆ ದುಷ್ಕರ್ಮಿಗಳಿಂದ ದನಗಳನ್ನು ಕಳೆದುಕೊಂಡು ಸಂತ್ರಸ್ತರಾದವರನ್ನೂ ಸೇರಿಸಿಕೊಂಡು ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪರಿಸರದ ಗೋಪ್ರೇಮಿಗಳು ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಧರಣಿ ಕುಳಿತಿದ್ದಾರೆ. ಸತ್ಯಾಗ್ರಹ ಆರಂಭಕ್ಕೂ ಮುನ್ನ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಧರಣಿ ಕೈಬಿಡುವಂತೆ ಮನವಿ ಮಾಡಿದರೂ ಪ್ರತಿಭಟನಾಕಾರರು ನಿರ್ಧಾರ ಬದಲಿಸಲಿಲ್ಲ.
ಅಮೃತಧಾರಾ ಗೋಶಾಲೆಯಿಂದ ಈ ತನಕ ಮೂರು ಬಾರಿ ದುಷ್ಕರ್ಮಿಗಳು ಆಗಮಿಸಿ ಬಲಾತ್ಕಾರವಾಗಿ ಮೂರು ದನಗಳನ್ನು ದರೋಡೆ ಮಾಡಿದ್ದರೂ ದುಷ್ಕರ್ಮಿಗಳ ಪತ್ತೆಯಾಗಿಲ್ಲ. ಪೊಲೀಸರಿಗೆ ಸತತವಾಗಿ ಮನವಿ ಸಲ್ಲಿಸಿದರೂ ಕಳ್ಳರ ಸೆರೆಯಾಗಿಲ್ಲ ಎಂದು ಧರಣಿನಿರತರು ಆರೋಪಿಸಿದ್ದಾರೆ.
ಬಂಟ್ವಾಳ ತಾ.ಪಂ. ಸದಸ್ಯ ನವೀನ್ ಪಾದಲ್ಪಾಡಿ, ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಜಯರಾಮ ಶೆಟ್ಟಿ ಕಂಬಳಪದವು, ಕುರ್ನಾಡು ಗ್ರಾ.ಪಂ. ಉಪಾಧ್ಯಕ್ಷ ನಿತಿನ್ ಗಟ್ಟಿ, ಬಿಜೆಪಿ ಮುಖಂಡ ಹೇಮಚಂದ್ರ, ಪ್ರಮುಖರಾದ ಜಗದೀಶ ಆಳ್ವ ಕುವೆತ್ತಬೈಲು, ಪ್ರಮುಖರಾದ ಕೊಣಾಜೆ ಶಂಕರ ಭಟ್, ಎಡಂಬಳೆ ಸತ್ಯನಾರಾಯಣ ಭಟ್, ರಾಮಚಂದ್ರ ಗಟ್ಟಿ, ಕೆ.ಐ.ಕೇಶವ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸಾಮಾಜಿಕ ಆಂದೋಲನ
ಇದು ಸಾಮಾಜಿಕ ಆಂದೋಲನ. ಯಾವುದೆ ಜಾತಿ ಧರ್ಮದ ವಿರುದ್ಧದ ಹೋರಾಟ ಅಲ್ಲ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮತಾಂಧರು, ಗಾಂಜಾ ವ್ಯಸನಿಗಳು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು.
-ಟಿ.ಜಿ. ರಾಜಾರಾಮ ಭಟ್
ಅಮೃತಧಾರಾ ಗೋಶಾಲೆ ಸಮಿತಿ ಅಧ್ಯಕ್ಷ