ಹೊಸದಿಲ್ಲಿ : ಇಲ್ಲಿನ ತಾಜ್ ಮಾನ್‌ಸಿಂಗ್ ಹೊಟೇಲಿನ ಇ-ಹರಾಜು ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಇಂದು ಗುರುವಾರ ದಿಲ್ಲಿ ಮುನಿಸಿಪಲ್ ಕೌನ್ಸಿಲ್ (ಎನ್‌ಎಂಡಿಸಿ)ಗೆ ಅನುಮತಿ ನೀಡಿದೆ. ಆ ಮೂಲಕ ಅದು ತಾಜ್ ಮಾನ್ ಸಿಂಗ್ ಹೊಟೇಲನ್ನು ಹರಾಜು ಹಾಕದಂತೆ ಟಾಟಾ ಸಂಸ್ಥೆ ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕರಿಸಿದೆ. ತಾಜ್ ಮಾನಸಿಂಗ್ ಹೊಟೇಲನ್ನು ಪ್ರಕೃತ ಇಂಡಿಯನ್ ಹೊಟೇಲ್ಸ್ ಕಂಪೆನಿ ಲಿಮಿಟೆಡ್ (ಐಎಚ್‌ಸಿಎಲ್) ನಡೆಸುತ್ತಿದೆ.
ಇ-ಹರಾಜಿನಲ್ಲಿ ಟಾಟಾ ಸಮೂಹವು ತಾಜ್ ಮಾನ್‌ಸಿಂಗ್ ಹೊಟೇಲನ್ನು ಕಳೆದುಕೊಂಡ ಪಕ್ಷದಲ್ಲಿ ಮುಂದಿನ ಆರು ತಿಂಗಳ ಒಳಗಾಗಿ ಅದು (ಟಾಟಾ ಸಮೂಹ) ಹೊಟೇಲ್ ಕಟ್ಟಡ ಮತ್ತು ಆವರಣವನ್ನು ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿರುವ ತಾಜ್ ಮಾನ್‌ಸಿಂಗ್ ಹೊಟೇಲನ್ನು ತಾನು ಹರಾಜು ಹಾಕಲು ಬಯಸಿರುವುದಾಗಿ ದಿಲ್ಲಿ ಮುನಿಸಿಪಲ್ ಕೌನ್ಸಿಲ್ ಕಳೆದ ಮಾರ್ಚ್ 3ರಂದು ಸುಪ್ರೀಂ ಕೋರ್ಟಿಗೆ ಹೇಳಿತ್ತು.
2016ರ ಅಕ್ಟೋಬರ್ 27ರಂದು ದಿಲ್ಲಿ ಹೈಕೋರ್ಟ್, ಟಾಟಾ ಸಮೂಹದ ಈ ಐತಿಹಾಸಿಕ ಹೊಟೇಲ್ ಕಟ್ಟಡದ ಇ-ಹರಾಜು ನಡೆಸುವುದಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಆದರೆ ಹೊಟೇಲನ್ನು ನಡೆಸುತ್ತಿರುವ ಇಂಡಿಯನ್ ಹೊಟೇಲ್ಸ್ ಲಿಮಿಟೆಡ್ ಕಂಪೆನಿಯು ನವೆಂಬರ್ 8ರಂದು ಸುಪ್ರೀಂ ಕೋರ್ಟ್ ಮೆಟ್ಟಲೇರಿ ಹರಾಜು ಆದೇಶಕ್ಕೆ ತಡೆಯಾಜ್ಞೆ ತಂದಿತ್ತು.
ತಾಜ್ ಮಾನ್‌ಸಿಂಗ್ ಹೊಟೇಲಿನ ಆಡಳಿತೆಯನ್ನು ತನ್ನಕೈಯಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಟಾಟಾ ಸಮೂಹವು ಮಾಡಿಕೊಂಡಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತಲ್ಲದೆ ಹರಾಜಿನಲ್ಲಿ ಭಾಗವಹಿಸುವಂತೆ ಅದಕ್ಕೆ ಸೂಚಿಸಿತ್ತು.