Advertisement

ಮತ್ತೆ ಭುಗಿಲೆದ್ದ ಚೀನ-ತೈವಾನ್‌ ಸಂಘರ್ಷ: ತೈವಾನ್‌ನತ್ತ 103 ಸೇನಾ ವಿಮಾನಗಳ ರವಾನೆ

09:55 AM Sep 19, 2023 | Team Udayavani |

ತೈಪೇ: ಚೀನ ಮತ್ತು ತೈವಾನ್‌ ನಡುವಣ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, 24 ತಾಸುಗಳ ಅವಧಿಯಲ್ಲಿ ಚೀನ ಸೇನೆಯು ತೈವಾನ್‌ನತ್ತ 103 ಸೇನಾ ವಿಮಾನಗಳನ್ನು ರವಾನಿಸಿದೆ.

Advertisement

ರವಿವಾರ ಬೆಳಗ್ಗೆ ಗಂಟೆ 6ರಿಂದ ಸೋಮವಾರ ಬೆಳಗ್ಗೆ ಗಂಟೆ 6ರ ವರೆಗಿನ ಅವಧಿಯಲ್ಲಿ ಈ ವಿಮಾನಗಳು ತೈವಾನ್‌ನತ್ತ ಧಾವಿಸುತ್ತಿರುವುದನ್ನು ತೈವಾನ್‌ನ ರಕ್ಷಣ ಸಚಿವಾಲಯ ದೃಢೀಕರಿಸಿದ್ದು ವಾಡಿಕೆಯಂತೆ ಈ ವಿಮಾನಗಳು ತೈವಾನ್‌ ತಲುಪುವುದಕ್ಕೂ ಮುನ್ನ ವಾಪಸಾಗಿವೆ ಎಂದು ತಿಳಿಸಿದೆ.

ಸ್ವಯಂ ಆಡಳಿತವನ್ನು ಹೊಂದಿರುವ ದ್ವೀಪರಾಷ್ಟ್ರ ತೈವಾನ್‌ನತ್ತ ಪ್ರತಿನಿತ್ಯ ಚೀನದ ತೀರಾ ಕಡಿಮೆ ಸಂಖ್ಯೆಯಲ್ಲಿ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿರುತ್ತವೆ. ಆದರೆ ಕಳೆದೊಂದು ದಿನದ ಅವಧಿಯಲ್ಲಿ 100ಕ್ಕೂ ಯುದ್ಧ ವಿಮಾನಗಳ ಸಹಿತ ಸೇನಾ ವಿಮಾನಗಳು ಏಕಾಏಕಿ ಹಾರಾಟ ನಡೆಸಿವೆ ಎಂದು ರಕ್ಷಣ ಅಧಿಕಾರಿಗಳು ತಿಳಿಸಿರುವರಾದರೂ ಎಷ್ಟು ಸಮಯದವರೆಗೆ ಈ ವಿಮಾನಗಳು ಹಾರಾಟ ನಡೆಸಿದವು ಎಂಬ ಬಗೆಗೆ ಖಚಿತ ಮಾಹಿತಿ ನೀಡಲಿಲ್ಲ.

40 ವಿಮಾನಗಳು ಚೀನ ಮತ್ತು ತೈವಾನ್‌ ನಡುವಣ ಸಾಂಕೇತಿಕ ಮಧ್ಯ ರೇಖೆಯನ್ನು ದಾಟಿ ಹಾರಾಟ ನಡೆಸಿವೆ. ಈ ಪೈಕಿ ವಾಯುಮಾರ್ಗದ ಮಧ್ಯೆ ವಿಮಾನಗಳಿಗೆ ಇಂಧನ ತುಂಬಿಸುವ ಟ್ಯಾಂಕರ್‌ ವಿಮಾನಗಳ ಸಹಿತ 30 ಯುದ್ಧ ವಿಮಾನಗಳು ಸೇರಿದ್ದವು. ಇದೇ ವೇಳೆ ಚೀನದ 9 ನೌಕಾ ಹಡಗುಗಳು ಕೂಡ ದ್ವೀಪರಾಷ್ಟ್ರದ ಸಮುದ್ರ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದವು. ತೈವಾನ್‌ಗೆ ಕಿರುಕುಳ ನೀಡಲೆಂದೇ ಚೀನ ಈ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ದೂರಿದರು.

ಯಾವುದೇ ಮಧ್ಯ ರೇಖೆ ಇಲ್ಲ: ಚೀನ ಮತ್ತು ತೈವಾನ್‌ ನಡುವೆ ಯಾವುದೇ ಸಾಂಕೇತಿಕ ಮಧ್ಯ ರೇಖೆ ಎಂಬುದಿಲ್ಲ ಎಂದು ಸ್ಪಷ್ಟ ಸ್ಪಡಿಸಿರುವ ಚೀನ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್‌, ತೈವಾನ್‌ ಚೀನದ ಭಾಗವೇ ಆಗಿರುವುದರಿಂದ ಚೀನ ಸೇನಾ ವಿಮಾನಗಳು ತನ್ನ ವಾಯು ಪ್ರದೇಶದಲ್ಲಿ ಹಾರಾಡಿವೆ ಎಂದಿದ್ದಾರೆ.

Advertisement

ತೈವಾನ್‌ ಅನ್ನು ತನ್ನ ಭಾಗವೆಂದೇ ಪ್ರತಿಪಾದಿಸುತ್ತ ಬಂದಿರುವ ಚೀನ ನಿರಂತರವಾಗಿ ತೈವಾನ್‌ ಗಡಿ ಭಾಗದಲ್ಲಿ ಸೇನಾ ಅಣಕು ಕಾರ್ಯಾಚರಣೆ, ಗಸ್ತು ನಡೆಸುತ್ತ ಬಂದಿದೆ. ಚೀನದ ನೌಕಾ ಪಡೆ ಮತ್ತು ವಾಯು ಪಡೆ ತೈವಾನ್‌ ಪ್ರದೇಶ ದಲ್ಲಿ ತಮ್ಮ ಕಾರ್ಯಾಚರಣೆಯನ್ನು ಪದೇಪದೆ ತೀವ್ರಗೊಳಿಸುವ ಮೂಲಕ ತೈವಾನ್‌ ಮೇಲೆ ಅಧಿಪತ್ಯ ಸ್ಥಾಪಿಸಲು ಪ್ರಯತ್ನ ನಡೆಸುತ್ತ ಬಂದಿದೆ. ಇದೇ ವಿಚಾರ ವಾಗಿ ಅಮೆರಿಕ, ಚೀನದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಬಂದಿದೆ.

ಅಧ್ಯಕ್ಷೀಯ ಚುನಾವಣೆ ಮೇಲೆ ಪ್ರಭಾವ ಬೀರುವ ಯತ್ನ: ತೈವಾನ್‌ನಲ್ಲಿ ಮುಂದಿನ ಜನವರಿಯಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಚೀನ ಸರಕಾರ ತೈವಾನ್‌ ವಿರುದ್ಧದ ತನ್ನ ಆಕ್ರಮಣಕಾರಿ ನಿಲುವನ್ನು ಮತ್ತಷ್ಟು ಹೆಚ್ಚಿಸಿದೆ. ತೈವಾನ್‌ನ ಆಡಳಿತಾರೂಢ ಡೆಮಾಕ್ರಟಿಕ್‌ ಪ್ರೊಗ್ರೆಸಿವ್‌ ಪಾರ್ಟಿ ತೈವಾನ್‌ನ ಸ್ವಾಯತ್ತೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತ ಬಂದಿದ್ದು ಚೀನ ನಾಯಕತ್ವದ ವಿರೋಧ ಕಟ್ಟಿಕೊಂಡಿದೆ. ಇದೇ ವೇಳೆ ಚೀನ ತನ್ನ ಪರ ಮೃದು ಧೋರಣೆಯನ್ನು ಹೊಂದಿರುವ ತೈವಾನ್‌ನ ವಿಪಕ್ಷ ಅಭ್ಯರ್ಥಿಯ ಪರವಾಗಿದೆ.

ಇದನ್ನೂ ಓದಿ: Chaitra Kundapura: ಚೈತ್ರಾ ಕುಂದಾಪುರ ವಿರುದ್ಧ ಮತ್ತೂಂದು ಪ್ರಕರಣ ದಾಖಲು…

Advertisement

Udayavani is now on Telegram. Click here to join our channel and stay updated with the latest news.

Next