ತೈಪೆ: ಅಮೆರಿಕದ ಸರ್ಕಾರಿ ಪ್ರತಿನಿಧಿಗಳನ್ನು ದೇಶದೊಳಗೆ ಬಿಟ್ಟುಕೊಂಡ ತೈವಾನ್‌ಗೆ ಚೀನದ ಭಯ ಹೆಚ್ಚಾಗಿದೆ.
ಇದುವರೆಗೆ ಸೇನಾ ವಿಚಾರದಲ್ಲಿ ಮಾತ್ರವೇ ಇದ್ದ ಭಯ ಇದೀಗ ಜೈವಿಕ ಯುದ್ಧದ ವಿಚಾರದಲ್ಲೂ ಆರಂಭವಾಗಿದ್ದು, ಅದಕ್ಕಾಗಿ ತೈವಾನ್ ಸರ್ಕಾರ ಅತ್ಯಂತ ಕಠಿಣ ನಿಯಮಗಳನ್ನೂ ಜಾರಿಗೊಳಿಸಿದೆ.
ಬೇರೆ ದೇಶಗಳಿಂದ ತೈವಾನ್‌ಗೆ ತೆರಳುವವರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ವರದಿ ತೋರಿಸಬೇಕು. ಅದಲ್ಲದೆ “ಆರೋಗ್ಯ ಘೋಷಣೆ ಪತ್ರ’ವನ್ನೂ ಭರ್ತಿ ಮಾಡಬೇಕು. ಸೋಂಕನ್ನು ಹೊತ್ತೂಯ್ಯಬಲ್ಲಂಥ ಯಾವುದೇ ಆಹಾರವನ್ನು ವಿಮಾನದಲ್ಲಿ ತೈವಾನ್‌ಗೆ ತೆಗೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ಅಂತಹ ಆಹಾರ ತೆಗೆದುಕೊಂಡು ಹೋದರೆ ಅದಕ್ಕೆ ಭಾರೀ ಪ್ರಮಾಣದ ದಂಡವನ್ನೂ ವಿಧಿಸಲಾಗುತ್ತಿದೆ.
ವಿಮಾನವಿಳಿದ ನಂತರ ಮತ್ತೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆಗಾಗಿ ಸ್ಯಾಂಪಲ್ ನೀಡಬೇಕು. ವಿಮಾನ ನಿಲ್ದಾಣ ನಿಗದಿ ಮಾಡುವ ಕಾರಿನಲ್ಲಿ ಕುಳಿತುಕೊಂಡು, ಸರ್ಕಾರ ನಿಗದಿ ಮಾಡಿರುವ ಹೋಟೆಲ್‌ಗೆ ತೆರಳಬೇಕು. ಅಲ್ಲಿ ಮೂರು ದಿನಗಳ ಕ್ವಾರಂಟೈನ್ ಆದ ನಂತರ ಮತ್ತೂಮ್ಮೆ ರ್ಯಾಪಿಡ್ ಪರೀಕ್ಷೆ ಮಾಡಿ, ಅದರಲ್ಲಿ ಸೋಂಕಿಲ್ಲದಿರುವುದು ದೃಢವಾದರೆ ಮಾತ್ರವೇ ನಿಮಗೆ ಹೊರಗೆ ಓಡಾಡುವುದಕ್ಕೆ ಅವಕಾಶ.
ಕೊರೊನಾದ ಉಗಮ ಸ್ಥಾನವಾದ ಚೀನಾ ಬೇರೆ ಬೇರೆ ಬ್ಯಾಕ್ಟೀರಿಯಾ ಹಾಗೂ ಸೋಂಕಿನ ಮೂಲಕ ತೈವಾನ್‌ನ ಜನರ ಆರೋಗ್ಯದ ಜತೆ ಆಟವಾಡಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಈ ಎಲ್ಲ ನಿಯಮಗಳನ್ನು ತೈವಾನ್ ಹೇರಿದೆ.