Advertisement

ಅವಿದ್ಯಾವಂತ ಮಹಿಳೆಯರನ್ನೂ ಸ್ವಾವಲಂಬಿಗಳನ್ನಾಗಿ ಮಾಡಿದ ದಿಟ್ಟೆ

10:21 PM Jan 04, 2020 | Sriram |

ಉಡುಪಿ: ಸ್ವ- ಉದ್ಯೋಗ ಕೇವಲ ಶಿಕ್ಷಣ ಪಡೆದವರಿಗೆ ಸೀಮಿತ ಎನ್ನುವ ಕಾಲಘಟ್ಟದಲ್ಲಿ ವೀಣಾ ರಮೇಶ್‌ ಅವರು ಸಾವಿರಾರು ಅವಿದ್ಯಾವಂತ ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕೆ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಿದ್ದಾರೆ.

Advertisement

ಇಂದಿರಾ ನಗರದ ನಿವಾಸಿ ವೀಣಾ ರಮೇಶ್‌ (29) ಅವರು 10 ವರ್ಷಗಳಿಂದ ಅಧಿಕ ಸಮಾಜದ ಅವಿದ್ಯಾವಂತ, ವಿದ್ಯಾವಂತ, ಶೋಷಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಟೈಲರಿಂಗ್‌ ತರಬೇತಿ ನೀಡಿದ್ದಾರೆ. ಇವರಿಂದ ತರಬೇತಿ ಪಡೆದ ಮಹಿಳೆಯರು ಉದ್ಯೋಗ ಮಾಡುತ್ತಿದ್ದರೆ, ಇನ್ನು ಕೆಲವರು ಸ್ವಂತ ಉದ್ದಿಮೆ ಪ್ರಾರಂಭಿಸಿ ಸ್ವಾವಲಂಬಿಗಳಾಗಿದ್ದಾರೆ.

ವೀಣಾ ರಮೇಶ್‌ ಅವರು ಸಿಂಗರ್‌ ಫ್ಯಾಷನ್‌ ಡಿಸೈನಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. 2008ರಲ್ಲಿ ಭಾರತೀಯ ವಿಕಾಸ ಟ್ರಸ್ಟ್‌ ಮಣಿಪಾಲದಲ್ಲಿ ನೂರಾರು ಮಂದಿಗೆ ಕ್ಲಾತ್‌ ಡಿಸೈನಿಂಗ್‌ ಬಗ್ಗೆ ತರಬೇತಿ ನೀಡುತ್ತಿದ್ದರು. ಅನಂತರದಲ್ಲಿ ಕಲಿತ ಸಿಂಗರ್‌ ಫ್ಯಾಷನ್‌ ಡಿಸೈನಿಂಗ್‌ ಸೆಂಟರ್‌ನಲ್ಲೇ ಸುಮಾರು 2,000ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದ್ದಾರೆ.

ಗ್ಲಾಸ್‌ ಪೈಂಟಿಂಗ್‌ ಬೇಡಿಕೆ
ಟೈಲರಿಂಗ್‌ ತರಬೇತಿ ಮಾತ್ರವಲ್ಲದೇ ಕ್ಲಾತ್‌ ಡಿಸೈನಿಂಗ್‌, ಎಂಬ್ರಾಯಿಡರಿ, ಕ್ರಾಫ್ಟ್, ಪ್ಲವರ್‌ ಸೆಟ್ಟಿಂಗ್‌, ಸ್ಯಾರಿಗೊಂಡು, ಗ್ಲಾಸ್‌ ಪೈಂಟಿಂಗ್‌, ಫ್ಯಾಬ್ರಿಕ್‌ ಪೈಂಟಿಂಗ್‌ ಕುರಿತ ತರಬೇತಿಯನ್ನೂ ನೀಡುತ್ತಿದ್ದಾರೆ. ಇದರಿಂದ ಮಹಿಳೆಯರು ಮನೆಯಲ್ಲಿ ಬಿಡುವಿನ ಸಮಯದಲ್ಲಿ ಕೆಲಸ ಮಾಡಿ ಸಾಕಷ್ಟು ಸಂಪಾದನೆ ಮಾಡಬಹುದು ಎನ್ನುವುದು ಅವರ ಅಭಿಪ್ರಾಯ. ಪ್ರಸ್ತುತ ಬಟ್ಟೆ ಮಾರುಕಟ್ಟೆಯಲ್ಲಿ ಗ್ಲಾಸ್‌ ಪೈಂಟಿಂಗ್‌ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಇದೆ.

ಆರ್ಥಿಕ ಬೆಳವಣಿಗೆಗೆ ಸಹಕಾರಿ
ಹಲವು ಮಂದಿ ತಮ್ಮದೇ ಆದ ಸ್ವಂತ ಅಂಗಡಿ ತೆರೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಮಾತು ಬಾರದ ಮಹಿಳೆಯೊಬ್ಬರೂ ಇವರಲ್ಲಿ ತರಬೇತಿ ಪಡೆದು, ಆರ್ಥಿಕವಾಗಿ ಬೆಳೆಯುತ್ತಿರುವುದನ್ನು ಕಂಡು, ತರಬೇತಿ ನೀಡಿದ ಇವರಲ್ಲಿ ಸಾರ್ಥಕ ಭಾವ ಮೂಡಿದೆ. ಪ್ರತಿಯೊಬ್ಬರಿಗೂ ಸ್ವಾವಲಂಬಿ ಜೀವನವನ್ನು ಕಟ್ಟಿಕೊಡುವುದು ಇವರ ಪ್ರಮುಖ ಕನಸು.

Advertisement

ಫ್ಯಾಶನ್‌ ಉದ್ಯಮ ತರಬೇತಿ
ದಿನೇ ದಿನೇ ಬೆಳೆಯುತ್ತಿರುವ ಫ್ಯಾಶನ್‌ ಉದ್ಯಮಕ್ಕೆ ಹಾಗೂ ಹೊಸ ಹೊಸ ವಿನ್ಯಾಸದ ಡ್ರೆಸ್‌ಗಳನ್ನು ಸಿದ್ಧಪಡಿಸುವುದರ ಬಗ್ಗೆ ಸಹ ತರಬೇತಿ ನೀಡುತ್ತಿದ್ದಾರೆ.

ಅನೇಕ ವರ್ಷಗಳ ಹಿಂದೆ ಕಲಿತ ಮಹಿಳೆಯರು ಇವರಲ್ಲಿ ಬಂದು ಮತ್ತೆ ಹೊಸ ವಿನ್ಯಾಸಗಳನ್ನು ಕಲಿಯುತ್ತಾರೆ. ಇಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರೂ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೇ, ಟೈಲರಿಂಗ್‌ ಮೂಲಕ ಪ್ರತಿ ತಿಂಗಳು ಸಾವಿರಾರು ರೂ.ಸಂಪಾದನೆ ಮಾಡುತ್ತಿದ್ದಾರೆ.

ಪ್ರಸ್ತುತ ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್‌ ಬಳಿ, ಶ್ರೀ ದುರ್ಗಾ ಟೈಲರಿಂಗ್‌ ಕ್ಲಾಸ್‌ನಲ್ಲಿ ಅವರು ತರಬೇತಿ ನೀಡುತ್ತಿದ್ದಾರೆ.

ಆರ್ಥಿಕ ಸ್ವಾವಲಂಬಿ
ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಸೀಮಿತ ವಾಗಬಾರದು. ಟೈಲರಿಂಗ್‌ ಮೂಲಕ ಆರ್ಥಿಕ ಸ್ವಾಲಂಬಿ ಜೀವನ ನಡೆಸಬಹುದು. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಮಹಿಳೆಯರಿಗೆ ತರಬೇತಿಯನ್ನು ನೀಡುತ್ತಿದ್ದೇನೆ. ಈ ಕೆಲಸದಲ್ಲಿ ನೆಮ್ಮದಿ ಇದೆ.
-ವೀಣಾ ರಮೇಶ್‌, ಟೈಲರ್‌

Advertisement

Udayavani is now on Telegram. Click here to join our channel and stay updated with the latest news.

Next