ರಾಯಚೂರು: ಸಾಗುವಳಿ ಚೀಟಿ, ಫಾರಂ ನಂ.57ರಲ್ಲಿ ಅರ್ಜಿಗಳನ್ನು ತಂತ್ರಾಂಶಗೊಳಿಸದಿರುವ ಹಾಗೂ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದಿರುವ ತಹಶೀಲ್ದಾರ್ ನಿರ್ಲಕ್ಷ್ಯ ಧೋರಣೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭೂಮಿ ವಸತಿ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒತ್ತಾಯಿಸಿದರು.
ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸರ್ಕಾರಿ ಹೆಸರಿನಲ್ಲಿರುವ ಪಾರಂಫೋಕ್, ಕಂದಾಯ ಗೈರಾಣಿ, ಗೋಮಾಳ ಖಾರಿಜ್‌ಖಾತಾ ಅರಣ್ಯ ಇತರೆ ಹೆಸರಿನಲ್ಲಿ ಜಮೀನುಗಳಲ್ಲಿ ರೈತರು ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತ ಬಂದಿದ್ದಾರೆ ಎಂದು ವಿವರಿಸಿದರು.
ಈ ಹಿಂದೆ ಸಲ್ಲಿಸಿದ ಫಾರಂ ನಂ.50-53 ಮತ್ತು ಹೊಸದಾಗಿ ಸಲ್ಲಿಸಿರುವ ಫಾರಂ ನಂ.57ರ ಅರ್ಜಿ ಕೂಡಲೇ ವಿಲೇವಾರಿ ಮಾಡಿ ಮಂಜೂರಾತಿ ಪಟ್ಟ ನೀಡಬೇಕು. ಗುಂಜಳ್ಳಿ, ಆತ್ಮೂರು, ತಲಮಾರಿ, ಆಲ್ಕೂರು ಗ್ರಾಮಗಳ 14 ರೈತ ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಆದರೆ, ಹದ್ದುಬಸ್ತ್ ನಕ್ಷೆ ಮಾಡದೇ ಪಹಣಿಯಲ್ಲಿ ಹೆಸರು ಸೇರಿಸಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಆತ್ಮೂರು ಗ್ರಾಮ ಸರ್ಕಾರಿ ಜಮೀನು ಸರ್ವೇ ನಂ.338ರಲ್ಲಿ 203 ಎಕರೆ 35 ಗುಂಟೆ ಇದ್ದು ಪೋಟ್ ಖರಾಬ್ ಆಗಿದ್ದು, ಪಹಣಿಯಲ್ಲಿ ಸೊನ್ನೆ ಗುಂಟೆ ತೋರಿಸಲಾಗುತ್ತಿದೆ. ಕೂಡಲೇ ತಿದ್ದಪಡಿ ಮಾಡುವಂತೆ ಒತ್ತಾಯಿಸಿದರು.
ಮ್ಯಾನುವಲ್ ಅರ್ಜಿಗಳನ್ನು ತಂತ್ರಾಂಶಗಳೆಂದು ಪರಿಗಣಿಸಿ, ಸ್ಥಾನಿಕ ಪರಿಶೀಲನೆಗೆ ಕಳುಹಿಸಬೇಕು ಹಾಗೂ ಕುರಪದೊಡ್ಡಿ ಗ್ರಾಮದ ನಾಲ್ಕು ರೈತ ಕುಟುಂಬಗಳಿಗೆ ಪಹಣಿ ಮಾಡಿಕೊಡುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಈ ವೇಳೆ ಸಮಿತಿ ಪದಾಧಿಕಾರಿಗಳಾದ ಮಾರೆಪ್ಪ ಹರವಿ, ಆಂಜನೇಯ ಕುರಬದೊಡ್ಡಿ, ರಂಗರೆಡ್ಡಿ, ಗೋವಿಂದದಾಸ್, ನರಸಿಂಹಲು ಕುರುಬದೊಡ್ಡಿ ಸೇರಿದಂತೆ ಇತರರಿದ್ದರು.