ತುಮಕೂರು: ಕೋಲಾರ ಜಿಲ್ಲೆಯ ಬಂಗಾರಪೇಟೆಯ ಹತ್ಯೆಗೀಡಾಗಿದ್ದ ತಹಶೀಲ್ದಾರ್ ಬಿ. ಕೆ.ಚಂದ್ರಮೌಳೇಶ್ವರ ಅವರ ಅಂತ್ಯ ಸಂಸ್ಕಾ ರವು ಅವರ ಪತ್ನಿಯ ತವರಾದ ಗುಬ್ಬಿ ತಾಲೂ ಕಿನ ಕದಿರೇಗೌಡನಪಾಳ್ಯದಲ್ಲಿ ಪೊಲೀಸ್ ಗೌರವಗಳೊಂದಿಗೆ ಶುಕ್ರವಾರ ನೆರವೇರಿತು.
ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಗುಬ್ಬಿ ತಾಲೂಕಿನ ಕದಿರೇಗೌಡನ ಪಾಳ್ಯ ದಲ್ಲಿ ನಡೆದ ತಹಶೀಲ್ದಾರ್ ಬಿ.ಕೆ. ಚಂದ್ರ ಮೌಳೇಶ್ವರ ಅಂತ್ಯಕ್ರಿಯೆಯಲ್ಲಿ ಕೋಲಾರ ಉಸ್ತುವಾರಿ ಸಚಿವ ಎಚ್.ನಾಗೇಶ್, ಕೋಲಾರ ಸಂಸದ ಎಸ್.ಮುನಿಸ್ವಾಮಿ, ಕಂದಾಯ ಇಲಾಖೆಯ ಪ್ರಧಾನ ಕಾನ್ಯದರ್ಶಿ ಮಂಜುನಾಥ್ ಪ್ರಸಾದ್,
ತುಮಕೂರು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಸಿಕೃಷ್ಣ, ಉಪ ವಿಭಾಗಾಧಿಕಾರಿ ಅಜಯ್, ಕೋಲಾರ ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀ ಲ್ದಾರ್ ಗಳಾದ ಡಾ. ಪ್ರದೀಪ್ ಕುಮಾರ್, ಮೋಹನ್‌ಕುಮಾರ್ ಸೇರಿ ಅಧಿಕಾರಿ ಗಳು, ಕುಟುಂಬಸ್ಥರು, ಅಭಿಮಾನಿಗಳು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ: ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರ ಪಾರ್ಥಿವ ಶರೀರವನ್ನು ತುಮಕೂರು ನಗರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಅಲ್ಲದೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜ್ ಮತ್ತು ಪದಾಧಿಕಾರಿಗಳು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಬಂಗಾರ ಪೇಟೆ ತಹಶೀಲ್ದಾರ್ ಬಿ.ಕೆ ಚಂದ್ರ ಮೌಳಿ ಅವರ ಹತ್ಯೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ದಿಂದ ಸಂತಾಪ ಸೂಚಿಸಿದ್ದು ಈ ಘಟನೆಯನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್. ನರಸಿಂಹ ರಾಜ್ ತೀವ್ರ ವಾಗಿ ಖಂಡಿಸಿದ್ದಾರೆ. ಕೊಲೆ ಮಾಡಿರುವ ಆರೋಪಿಯನ್ನು ಗಡಿಪಾರು ಮಾಡಬೇಕು ಮತ್ತು ರಾಜ್ಯದ ಎಲ್ಲಾ ತಹಶೀಲ್ದಾರ್ ಅವರಿಗೆ ಗನ್ ಮ್ಯಾನ್ ನೀಡಿ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ತಹಶೀಲ್ದಾರ್ ನಿಧನಕ್ಕೆ ಕಂದಾಯ ಇಲಾಖೆಯ ನೌಕರರು ತಮ್ಮ ಇಲಾಖೆಗಳಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿದರು.