Advertisement

ತಹಶೀಲ್ದಾರ ಬೆವರಿಳಿಸಿದ ಜಿಲ್ಲಾಧಿಕಾರಿ!

01:46 PM Jul 06, 2017 | Team Udayavani |

ಚಿಕ್ಕಮಗಳೂರು: “ಹೇಗಿದ್ದರೂ ಕಚೇರಿ  ನಿಷ್ಕ್ರಿಯವಾಗಿದೆ. ಕಚೇರಿ ಬಾಗಿಲಿಗೆ ಬೀಗ ಹಾಕಿಬಿಡಿ. ಇಲ್ಲವೇ ನಾನೇ ಬಂದು
ಬೀಗ ಹಾಕುತ್ತೇನೆ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಹಶೀಲ್ದಾರ್‌ ಶಿವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಚಿಕ್ಕಮಗಳೂರು ತಾಲೂಕು ಕಚೇರಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ದೂರುಗಳ ಸುರಿಮಳೆಯೇ ಹರಿದು ಬಂದವು. ಅಲ್ಲದೆ, ತಾಲೂಕು ಕಚೇರಿಯಿಂದ ಸಭೆಗೆ ಯಾರೂ ಬಂದಿರಲಿಲ್ಲ. ಕೂಡಲೇ ತಹಶೀಲ್ದಾರ್‌ ಶಿವಣ್ಣ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿದ ಜಿಲ್ಲಾಧಿಕಾರಿಗಳು ಸಭೆಗೆ ಹಾಜರಾಗುವಂತೆ ಸೂಚಿಸಿದರು. 

ತಹಶೀಲ್ದಾರ್‌ ಶಿವಣ್ಣ ಸಭೆಗೆ ಬಂದಾಗಲೂ ಚಿಕ್ಕಮಗಳೂರು ತಾಲೂಕಿಗೆ ಸಂಬಂಧಿಸಿದ ದೂರಗಳನ್ನೇ ವಿಚಾರಿಸುತ್ತಿದ್ದರು. ಶಿವಣ್ಣ  ಅವರನ್ನು ನೋಡಿದ ಕೂಡಲೇ ಜಿಲ್ಲಾಧಿಕಾರಿ ಜಿ.ಸತ್ಯವತಿ, ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸವೂ ಆಗುತ್ತಿಲ್ಲ. ನಿಮಗೆ ಯಾರ ಮೇಲೂ ನಿಯಂತ್ರಣವೂ ಇಲ್ಲ. ರೈತರು ತಮ್ಮ ಕೆಲಸ ಮಾಡಿಸಿಕೊಳ್ಳಲು ಎಷ್ಟು ಬಾರಿ ಕಚೇರಿಗೆ ಬರಬೇಕು. ನಿಮಗೂ ಇಂತಹ ಪರಿಸ್ಥಿತಿ ಬರಬೇಕು. ಆಗಲೇ ನಿಮಗೆ ಇವರ ಕಷ್ಟ ಗೊತ್ತಾಗೋದು ಎಂದು ಹರಿಹಾಯ್ದರು.

ಮೂಡಿಗೆರೆ ತಾಲೂಕು ಬಸ್ಕಲ್‌ ಹೋಬಳಿ ಕನ್ನಾಪುರ ಗ್ರಾಮದ ಐ.ಎಂ.ಶ್ರೀನಿವಾಸ್‌ ದೂರು ಸಲ್ಲಿಸಿ, ತಮ್ಮ ಹಾಗೂ ಪಕ್ಕದವರಲ್ಲಿ ಭೂ ವ್ಯಾಜ್ಯವಿತ್ತು. ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸ್ಥಳದಲ್ಲಿಯೇ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸುವಂತೆ ನ್ಯಾಯಾಲಯ  ಆದೇಶಿಸಿ ಕಡತವನ್ನು ಮೂಡಿಗೆರೆತಾಲೂಕು ಕಚೇರಿಗೆ 2 ವರ್ಷದ ಹಿಂದೆಯೇ ಕಳುಹಿಸಿದೆ. ಆದರೆ ತಾಲೂಕು ಕಚೇರಿಯಲ್ಲಿ ಕಡತ ಇಲ್ಲ ಎಂದು ಹೇಳುತ್ತಿದ್ದಾರೆ. ಪ್ರಕರಣವನ್ನೂ ಇತ್ಯರ್ಥಗೊಳಿಸಿಲ್ಲ ಎಂದು ಮನವಿ ಮಾಡಿದರು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತಹಶೀಲ್ದಾರರ ವಿರುದ್ಧ ನ್ಯಾಯಾಲಯ ಆದೇಶ ನಿಂದನೆ ಪ್ರಕರಣ  ದಾಖಲಿಸಿ, ಜು.14ರೊಳಗಾಗಿ ಕಡತ ಹುಡುಕಿ ವರದಿ ಸಲ್ಲಿಸುವಂತೆ ಸೂಚಿಸಿದರು.

ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ಸರ್ಕಾರಿ ಕೆರೆ ಹಾಗೂ ನೀರು ಹರಿಯುವ ಜಾಗವನ್ನು ಖಾಸಗಿಯವರು ಒತ್ತುವರಿ
ಮಾಡಿಕೊಂಡಿದ್ದಾರೆ. ಎರಡು ವರ್ಷಗಳಿಂದ ಈ ಬಗ್ಗೆ ಅರ್ಜಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಹಶೀಲ್ದಾರರು ಸರ್ವೇಗೆ ಆದೇಶ ಮಾಡಿದ್ದರೂ ಸರ್ವೇ ಕಾರ್ಯ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದರು. ಸರ್ಕಾರಿ ಕೆರೆ ಒತ್ತುವರಿಯನ್ನೇ ತೆರವುಗೊಳಿಸಲು ಆಗಿಲ್ಲ ಎಂದರೆ ಹೇಗೆ ಎಂದು ತಹಶೀಲ್ದಾರ್‌ ಶಿವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ಇನ್ನೂ ಮುಂದೆ ಸರ್ಕಾರಿ ಕೆರೆ, ಕಟ್ಟೆ ಒತ್ತುವರಿಯಾದರೆ ಅಧಿಕಾರಿಗಳ ವಿರುದ್ಧವೇ
ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕಾಗುತ್ತದೆ. ಕೂಡಲೇ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು.

Advertisement

ಮೂಡಿಗೆರೆ ತಾಲೂಕು ಹಲಸುಮನೆ ಗ್ರಾಮದ ವ್ಯಕ್ತಿಯೊಬ್ಬರು ಸರ್ಕಾರಿ ಜಾಗದಲ್ಲಿ ಕಳೆದ 20 ವರ್ಷಗಳಿಂದ
ಸಾಗುವಳಿ ಮಾಡುತ್ತಿದ್ದೇನೆ. ಈಗ ಗುಡಿಸಲು ಕಟ್ಟಿಕೊಂಡಿದ್ದನ್ನು ಕೆಲವರು ಕಿತ್ತು ಹಾಕಿದ್ದಾರೆ. ಮನೆ ಕಟ್ಟಿಕೊಳ್ಳಲು ತಮಗೆ ಸ್ವಂತ ಜಾಗ ಇಲ್ಲ ಎಂದು ದೂರಿದರು. ಅಕ್ರಮ-ಸಕ್ರಮದಡಿ ಅರ್ಜಿ ಸಲ್ಲಿಸಿದ್ದೀರ ಎಂಬ ಪ್ರಶ್ನೆಗೆ ಇಲ್ಲ ಎಂಬ ಉತ್ತರ ಬಂತು.

ನಿವೇಶನವಿಲ್ಲದಿದ್ದರೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದರೆ ನಿವೇಶನ ಕೊಡಿಸಬಹುದು. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡರೆ ಹೇಗೆ ಎಂದು ಪ್ರಶ್ನಿಸಿ, ಇತ್ತೀಚಿನ ದಿನಗಳಲ್ಲಿ ಕೆಲವರು ಹಣ ಪಡೆದು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳಿ ನಿಮಗೆ ಮಂಜೂರು  ಮಾಡಿಸುತ್ತೇನೆ ಎಂದು ಹೇಳುವ ದಂಧೆ ಆರಂಭವಾಗಿದೆ. ಕೂಡಲೇ ಗ್ರಾಮದ
ಸ.ನಂ.16ರಲ್ಲಿ ಯಾರೇ ಗುಡಿಸಲು ಹಾಕಿಕೊಂಡಿದ್ದರೂ ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ
ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next