Advertisement

Kushtagi: ತೆರವು ಹಂತದಲ್ಲಿದ್ದ ಶಾಲೆಗೆ ತಹಶೀಲ್ದಾರ್‌ ಭೇಟಿ; ತೆರವಿಗೆ ತಾತ್ಕಾಲಿಕ ಬ್ರೇಕ್

03:45 PM Nov 21, 2023 | Team Udayavani |

ಕುಷ್ಟಗಿ: ಗದಗ-ವಾಡಿ ರೈಲು ಮಾರ್ಗದ ಉದ್ದೇಶಿತ ರೈಲ್ವೇ ಸ್ಟೇಷನ್ ನಿರ್ಮಾಣದ ಹಿನ್ನೆಲೆ ತೆರವು ಹಂತದಲ್ಲಿದ್ದ ಸಂತ ಶಿಶುನಾಳ‌ ಶರೀಪ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ‌ ಶಾಲಾ ಕಟ್ಟಡಕ್ಕೆ ತಹಶೀಲ್ದಾರೆ ಶ್ರುತಿ‌ ಮಳ್ಳಪ್ಪಗೌಡ್ರು ಅವರ ಮಧ್ಯಪ್ರವೇಶದಿಂದ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

Advertisement

ಗದಗ-ವಾಡಿ ರೈಲು ಮಾರ್ಗದ ಕಾಮಗಾರಿ ಹಂತದಲ್ಲಿ ಕುಷ್ಟಗಿ ಪಟ್ಟಣದ ಹೊರವಲಯದ ಸಂತ ಶಿಶುನಾಳ ಶರೀಫ ನಗರದಲ್ಲಿ ಅಲೆಮಾರು ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ. ಈ ಪ್ರದೇಶಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲಿ ರೈಲ್ವೇ ಸ್ಟೇಷನ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಈ ಹಂತದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ 36 ಮನೆಗಳ ತೆರವಿಗೆ ಜಾಗದ ಮಿತಿ ಗುರುತಿಸಿ ಸ್ವಾಧೀನಪಡಿಸಿ ಕೊಂಡಿದ್ದು, ಈಗಾಗಲೇ ಭೂ ಪರಿಹಾರ ನೀಡಿ ರೈಲ್ವೇ ಸ್ಟೇಷನ್ ನಿರ್ಮಾಣ ಕಾರ್ಯ ಕೈಗೆತ್ತಿಗೊಂಡಿದೆ. ಈ ಸ್ಥಿತಿಯಲ್ಲಿ  ಶಾಲಾ ಕಟ್ಟಡಕ್ಕೆ ಪರ್ಯಾಯ ಕ್ರಮ ಕೈಗೊಳ್ಳದೇ ತೆರವಿಗೆ ಮುಂದಾಗಿರುವುದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿತ್ತು.

ಸ್ಥಳೀಯರ ವಿರೋಧವನ್ನೂ ಲೆಕ್ಕಿಸದ ರೈಲ್ವೇ ಇಲಾಖೆ 15 ದಿನಗಳ‌ ಅಂತಿಮ‌ ಗಡವು ನೀಡಿತ್ತು. ಈ ಪರಿಸ್ಥಿತಿಯಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ  ಮೈಹಿಬೂಬಸಾಬ್ ಮದಾರಿ, ತಹಶೀಲ್ದಾರ ಶ್ರುತಿ ಮಳ್ಳಪ್ಪಗೌಡ್ರು ಅವರ ಗಮನಕ್ಕೆ ತಂದ ಹಿನ್ನೆಲೆ ತಹಶೀಲ್ದಾರ್, ನ.21ರ ಮಂಗಳವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಯಾವುದೇ ಕಾರಣಕ್ಕೆ ಶಾಲಾ ಕಟ್ಟಡ ತೆರವುಗೊಳಿಸದಂತೆ ರೈಲ್ವೇ ಇಲಾಖೆಗೆ ಸೂಚನೆ ನೀಡಿದರು.

Advertisement

ಈ ಸಂಬಂದ ನಾಳೆ ಅಥವಾ ನಾಡಿದ್ದು, ರೈಲ್ವೇ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ರೈಲ್ವೆ ಕಾಮಗಾರಿಯ ಉದ್ದೇಶಿತ ನೀಲನಕ್ಷೆ, ಎಸ್ಟೀಮೇಟ್ ಮಾಹಿತಿಯೊಂದಿಗೆ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸೂಚಿಸಿದರು.

ರೈಲ್ವೇ ಸ್ಟೇಷನ್ ನಿರ್ಮಾಣದ ಹಿನ್ನೆಲೆಯಲ್ಲಿ ಭೂಸ್ವಾಧೀನ ಹೊರತು ಪಡಿಸಿದ ಸ್ಥಳದಲ್ಲಿ ತೆರವುಗೊಳಿಸಿದ ಶೌಚಾಲಯ ಕಟ್ಟಡವನ್ನು ನಿರ್ಮಿಸಲು ರೈಲ್ವೇ ಇಲಾಖೆಯ ಇಂಜಿನೀಯರ್ ಅಶೋಕ ಅವರಿಗೆ ಸೂಚಿಸಿದರು.

ಈ ಬೆಳವಣಿಗೆ ಹಿನ್ನೆಲೆ ಶಾಲೆಯ ಕಟ್ಟಡ ತೆರವಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಸ್ಥಳೀಯರಲ್ಲಿ ತಹಶೀಲ್ದಾರ್ ಶ್ರುತಿ‌ ಮಳ್ಳಪ್ಪಗೌಡ್ರು ಮಧ್ಯೆ ಪ್ರವೇಶದಿಂದ ಶಾಲಾ ಕಟ್ಟಡ ತೆರವು ಕಾರ್ಯ ಮುಂದೂಡಿಕೆಯಾಗಿದೆ. ‌

ಎಸ್.ಡಿ.ಎಂ.ಸಿ. ಅಧ್ಯಕ್ಷ ಮೈಬೂಸಾಬ್ ಮದಾರಿ ಪ್ರತಿಕ್ರಿಯಿಸಿ, ಶಾಲಾ ಕಟ್ಟಡವನ್ನು ರೈಲ್ವೇ ಇಲಾಖೆಯವರು ತೆರವುಗೊಳಿಸಿದರೆ ಮಕ್ಕಳ ಭವಿಷ್ಯದ ಶಿಕ್ಷಣ ಚಿಂತೆಯಾಗಿದೆ. ಚಿಂದಿ ಆಯುತ್ತಿದ್ದ, ಭೀಕ್ಷೆ ಬೇಡುತ್ತಿದ್ದ ಮಕ್ಕಳಿಗೆ ಶೈಕ್ಷಣಿಕ ಸಂಸ್ಕಾರ ಸಿಕ್ಕಿದೆ. ಈಗ ಶಾಲಾ ಕಟ್ಟಡ ತೆರವುಗೊಳಿಸುವುದು, ಹೊಸ ಶಾಲಾ ಕಟ್ಟಡ ನಿರ್ಮಿಸಿದ ಮೇಲೆ ಅನಿವಾರ್ಯವಾದರೆ ಮಾತ್ರ ಈ ಶಾಲಾ ಕಟ್ಟಡ ತೆರವುಗೊಳಿಸಬೇಕು ಎಂದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಮುಖ್ಯ ಶಿಕ್ಷಕಿ ಅಮೃತಾ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next