ಜೋಯಿಡಾ: ತಾಲೂಕಿನ ದಂಡಾಧಿಕಾರಿಗಳಿಗೆ ಕರ್ತವ್ಯ ಪಾಲನೆಗಾಗಿ ಹಾಗೂ ತಾಲೂಕಿನ ಜನರ ಸಮಸ್ಯೆಗೆ ಶೀಘ್ರ ಸ್ಪಂದನೆಗಾಗಿ ಓಡಾಡಲು ಸರಕಾರ ನೀಡಿರುವ ವಾಹನ ಕಳೆದ ಒಂದು ವರ್ಷದಿಂದ ಕೆಟ್ಟು ನಿಂತಿದೆ. ಇದರಿಂದಾಗಿ ತಾಲೂಕಿನಾದ್ಯಂತ ಓಡಾಟಕ್ಕೆ ತೊಂದರೆ ಉಂಟಾಗಿದೆ.
ವರ್ಷದಿಂದ ರಿಪೇರಿ ಎಂದು ಸರಿಪಪಡಿಸಲು ಏಷ್ಟೇ ಪ್ರಯತ್ನಿಸಿದರೂ ಸರಿಯಾಗುತ್ತಿಲ್ಲ. ಇದನ್ನು ಕಳೆದ ಹಲವಾರು ವರ್ಷಗಳಿಂದ ರಿಪೇರಿ ಮಾಡಿ ಓಡಿಸುತ್ತಲೇ ಬರಲಾಗಿತ್ತು. ಆದರೆ ಹಲವು ಬಾರಿ ರಿಪೇರಿ ಮಾಡಿ ದೂರದ ಹಳ್ಳಿಗಳಿಗೆ ಹೋದಾಗ ದಾರಿ ಮಧ್ಯೆ ಕೈಕೊಟ್ಟು, ಬೇರೆ ವಾಹನಗಳಲ್ಲಿ ತಹಶೀಲ್ದಾರರು ಕಚೇರಿ ತಲುಪಿದ ಘಟನೆ ಕೆಲಬಾರಿ ನಡೆದಿದೆ.
ಜೋಯಿಡಾ ತಾಲೂಕು ವಿಸ್ತಿರ್ಣದಲ್ಲಿ ಅತ್ಯಂತ ದೊಡ್ಡದು. ಯಾವುದೇ ಆಡಳಿತಾತ್ಮಕ ಕಾರ್ಯದಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗಳಿಗೆ ಹೋಗಲು ಸುಮಾರು 50ರಿಂದ 100 ಕಿ.ಮೀ. ಹೋಗಬೇಕಾಗುತ್ತಿದೆ. ಕೊಡಸಳ್ಳಿಯಂತ ದೂರದ ಪ್ರದೇಶಕ್ಕೆ ಹೋಗಲು ಜೋಯಿಡಾದಿಂದ ಕದ್ರಾ ಮೂಲಕ ನೂರಾರು ಕಿ.ಮೀ. ದೂರ ಸಾಗಬೇಕಿದೆ. ಇಂತಹ ಸಂದರ್ಭದಲ್ಲಿ ವಾಹನವಿಲ್ಲದೆ ತಹಶೀಲ್ದಾರರು ಅಗತ್ಯ ಕರ್ತವ್ಯ ನಿಮಿತ್ತ ಖಾಸಗಿ ವಾಹನದ ಮೊರೆ ಹೋಗಬೇಕಾದ ಅನಿವಾರ್ಯತೆಯಿದೆ. ಇದಲ್ಲದೆ ಸಚಿವರ ಸಭೆ, ಜಿಲ್ಲಾಮಟ್ಟದ ಸಭೆ, ತಾಲೂಕು ಅಧಿಕಾರಿಗಳ ಸಭೆ ಹೀಗೆ ಹಲವು ಆಡಳಿತಾತ್ಮಕ ಕಾರ್ಯದಲ್ಲಿ ವಾಹನವಿಲ್ಲದೇ ಪರದಾಡುತ್ತಿದ್ದಾರೆ.
ಸ್ವಂತ ವಾಹನದಲ್ಲಿ ಸಂಚಾರ: ಮಳೆಗಾಲ ಸೇರಿದಂತೆ ಇನ್ನಿತರ ಸಮಸ್ಯೆ ಎದುರಿಸಲು ತೊಂದರೆಯಾಗಬಾರದೆಂದು ಈಗಿನ ತಹಶೀಲ್ದಾರ್ ಸಂಜಯ ಕಾಂಬಳೆ ತಮ್ಮ ಸ್ವಂತ ವಾಹನದಲ್ಲಿಯೇ ಕಳೆದ ಕೆಲ ತಿಂಗಳುಗಳಿಂದ ಓಡಾಡಿಕೊಂಡಿದ್ದಾರೆ. ಕೆಲ ಗ್ರಾಪಂಗಳಿಗೆ ಅವರ ವಾಹನ ಕೂಡಾ ಹೋಗದೆ ಕಷ್ಟ ಎದುರಿಸುತ್ತಿದ್ದಾರೆ. ಆದರೆ ಕರ್ತವ್ಯ ಪಾಲನೆಯ ಜರೂರ ಇರುವ ಸಂದರ್ಭದಲ್ಲಿ ಅನೇಕ ಸಾರಿ ತಮ್ಮ ವಾಹನದ ಉಪಯೋಗ ಮಾಡಿಕೊಂಡು ತಮ್ಮ ಜವಾಬ್ದಾರಿ ನಿಭಾಯಿಸಿರುತ್ತಾರೆ.
ಮಳೆಗಾಲದಲ್ಲಿ ತೀರಾ ಅಗತ್ಯ: ಮಳೆಗಾಲದ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ, ಸೂಪಾ ಡ್ಯಾಮ್ ಹಿನ್ನೀರನ ಪ್ರದೇಶದ ಗ್ರಾಮಗಳಲ್ಲಿ ಹಿನ್ನಿರಿನಿಂದ ಉದ್ಭವಿಸುವ ಸಮಸ್ಯೆಗಳು, ಅತಿ ವೃಷ್ಟಿ, ಅನಾವೃಷ್ಟಿಯಿಂದಾಗುವ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿದ್ದು, ಇಂತಹ ಸಮಸ್ಯೆಗಳಿಗೆ ತ್ವರಿತವಾಗಿ ಕಾರ್ಯೋ ನ್ಮೂಖರಾಗಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ವಾಹನವಿಲ್ಲದೆ ಪರದಾಡು ವಂತಾದರೆ ಜನಸಾಮಾನ್ಯರಿಗೆ ಆಗುವ ಹಾನಿಗೆ ತಹಶೀಲ್ದಾರರ ಕರ್ತವ್ಯಲೋಪ ಕಾರಣವಾಗುವಂತ ಪರಿಸ್ಥಿತಿ ನಿರ್ಮಾಣವಾಗಲಿದೆ.
ಸರಕಾರ ಈ ಬಗ್ಗೆ ಗಮನ ಹರಿಸಿ ಜೋಯಿಡಾ ತಾಲೂಕಿನ ದುರ್ಗಮ ಪ್ರದೇಶ, ದಟ್ಟ ಕಾಡಿನ ಮಧ್ಯದ ಗ್ರಾಮೀಣ ಪ್ರದೇಶ ಮತ್ತು ವಿಸ್ತಾರದ ದೃಷ್ಟಿಯಿಂದ ಅತ್ಯಂತ ಸುರಕ್ಷಿತ ಹಾಗೂ ಕಾಲಮಿತಿಯಲ್ಲಿ ಶೀಘ್ರ ತಲುಪಲು ಅಗತ್ಯ ವಿರುವ ವಿಶೇಷ ವಾಹನ ವ್ಯವಸ್ಥೆ ಮಾಡಬೇಕಿದೆ.