Advertisement

ವಸತಿ ಪ್ರದೇಶದಲ್ಲಿ ಸ್ಪೋಟ: ಆತಂಕದಲ್ಲಿ ಗ್ರಾಮಸ್ಥರು

03:50 PM Oct 30, 2021 | Team Udayavani |

ನಾಗಮಂಗಲ: ವಸತಿ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಸ್ಥಳವೊಂದರಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಸುತ್ತಮುತ್ತಲಿನ ಜನತೆ ಆತಂಕದಲ್ಲಿ ಬದುಕುವ ಸ್ಥಿತಿ ಎದುರಾಗಿದೆ ಎಂದು ಆರೋಪಿಸಿ ಮೊದಲಹಳ್ಳಿ ಗ್ರಾಮಸ್ಥರು ತಾಲೂಕು ದಂಡಾಧಿಕಾರಿ, ಪೊಲೀಸ್‌ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ.

Advertisement

ಪರಿಶೀಲನೆ: ಮೊದಲಹಳ್ಳಿ ವಸತಿ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಸರ್ವೆ ನಂ.190ರಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ನೀಡಿರುವ ದೂರಿನ ಅನ್ವಯ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಗಣಿಗಾರಿಕೆ ನಡೆದಿರುವುದು ಸಾಬೀತಾಗಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ;- ಶತಮಾನೋತ್ಸವಕ್ಕೆ ಆರ್‌ಎಸ್‌ಎಸ್ ಇನ್ನಷ್ಟು ವಿಸ್ತಾರ: ದತ್ತಾತ್ರೇಯ ಹೊಸಬಾಳೆ

ಸಾರ್ವಜನಿಕರ ದೂರು ಮತ್ತು ಸ್ಥಳ ಪರಿಶೀಲನೆ ವರದಿ ಹಿನ್ನೆಲೆಯಲ್ಲಿ ಭೂ ಮಾಲಿಕ ಅನಿಲ್‌ ಎಂಬವರ ವಿರುದ್ಧ ನಾಗಮಂಗಲ ಪಟ್ಟಣ ಪೊಲೀಸ್‌ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸ್‌ ಇಲಾಖೆ ಸಬ್‌ ಇನ್ಸ್‌ಪೆಕ್ಟರ್‌ ರವಿಶಂಕರ್‌, ವೃತ್ತ ನಿರೀಕ್ಷ ಸುಧಾಕರ್‌, ಗಣಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

„ ಕಲ್ಲುಗಣಿಗಾರಿಕೆ ಕೂಡಲೇ ತಡೆಗಟ್ಟಿ

Advertisement

„ ಮೊದಲಹಳ್ಳಿ ಗ್ರಾಮಸ್ಥರ ಆಗ್ರಹ

„ ತಹಶೀಲ್ದಾರ್‌, ಗಣಿ-ಭೂವಿಜ್ಞಾನ ಇಲಾಖೆಗೆ ದೂರು

„ ಅಧಿಕಾರಿಗಳ ಸ್ಥಳ ಪರಿಶೀಲನೆ

„ ಗಣಿ ಮಾಲಿಕರ ವಿರುದ್ಧ ಪ್ರಕರಣ ದಾಖಲು

ಗಣಿಗಾರಿಕೆ ವಸತಿ ಪ್ರದೇಶಕ್ಕೆ ಮಾರಕ: ಗ್ರಾಮಸ್ಥರಿಂದ ದೂರು

ಸರ್ವೆ ನಂಬರ್‌ 190ರಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಮೊದಲಹಳ್ಳಿ ಗ್ರಾಮ ಮತ್ತು ಸುತ್ತಮುತ್ತಲಿನ ಜನ ಭಯಭೀತರಾಗಿದ್ದಾರೆ. ಸರ್ವೆ ನಂ.190ರ, 100-200 ಮೀಟರ್‌ ಆಸುಪಾಸಿನಲ್ಲಿ ವಸತಿ ಮನೆ, ಬೆಲೆ ಬಾಳುವ ಕಟ್ಟಡ, ಮೊದಲಹಳ್ಳಿ ಕೆರೆ ಇದ್ದು, ಕಲ್ಲು ಸಿಡಿಸುವ ಶಬ್ಧಕ್ಕೆ ಮನೆಗಳು ಬಿರುಕು ಬಿಡುವ ಸಂಭವವಿದೆ.

ರಾತ್ರಿ ವೇಳೆ ಜಿಲೆಟಿನ್‌ ಬಳಸಿ ಸ್ಫೋಟಿಸುವುದರಿಂದ ಸ್ಫೋಟದ ಶಬ್ಧಕ್ಕೆ ಸಾರ್ವಜನಿಕರು ಹೆದರಿ ಅತಂಕಕ್ಕೀಡಾಗುತ್ತಿದ್ದಾರೆ. ಸ್ಥಳೀಯ ಶಾಸಕರು ಇತ್ತ ಗಮನ ಹರಿಸಬೇಕಿದೆ. ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಗೂ ಒಳಗಾಗದೆ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೊದಲಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next