ಹಾಸನ: ಹಾಸನ ತಾಲೂಕಿನಲ್ಲಿ 1,091 ಕೆರೆಗಳಿದ್ದು, ಹಾಸನ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆರೆಗಳನ್ನು ಸರ್ವೆಮ್ತಾವರಿ ತೆರವುಗೊಳಿಸಬೇಕು ಎಂದು ತಹಶೀಲ್ದಾರ್ ಶಿವಶಂಕರಪ್ಪ ಸೂಚಿಸಿದ್ದಾರೆ.
ಹಾಸನ ತಾಲೂಕು ಕಚೇರಿಯಲ್ಲಿ ಕೆರೆಗಳ ಅಭಿವೃದ್ಧಿ ಕುರಿತು ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆರೆಗಳ ಪೂರ್ಣ ಮಾಹಿತಿಯನ್ನು ಮಾ.15 ರೊಳಗೆ ನೀಡಬೇಕು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿಂಗಳಿಗೊಮ್ಮೆ ಗ್ರಾಮಗಳಿಗೆ ಭೇಟಿ ನೀಡಿ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಒತ್ತುವರಿ ತೆರವಿಗೆ ಸಹಕರಿಸಿ: ಕೆರೆಗಳ ಒತ್ತುವರಿ ತೆರವುಗೊಳಿಸುವ ಸಮಯದಲ್ಲಿ ಅಕ್ಕ ಅಪಕ್ಕದ ರೈತರಿಗೆ ತೊಂದರೆಯಾಗದಂತೆ ಕೆಲಸ ಮಾಡಿಸಬೇಕು. ಸಾರ್ವಜನಿಕರು ಕೆರೆಗಳ ಅಭಿವೃದ್ಧಿಗೆ ಹಾಗೂ ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಮಾ.8ರೊಳಗೆ ವರದಿ ನೀಡಿ: ಲೋಕಾಯುಕ್ತ ಡಿವೈಎಸ್ಪಿ ಭಾನು ಮಾತನಾಡಿ, ತಾಲೂಕು ಪಂಚಾಯಿತಿ ಇಒ ಹಾಗೂ ಪಿಡಿಒ ಸ್ಥಳದಲ್ಲಿ ಹಾಜರಿದ್ದು ಕೆರೆಗಳನ್ನು ಸರ್ವೆಮಾಡಿ ಸುತ್ತ ಕಾಲುವೆ ತೆಗೆಸಬೇಕು. ಇನ್ನೊಂದು ತಿಂಗಳೊಗಳಗೆ ಶೇ.80ರಷ್ಟು ಕೆರೆಗಳ ತೆರವುಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಿ ಮಾ. 8ರೊಳಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜುನಾಥ್ ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಸಹಾಯಕರ ಸಹಕಾರ ಪಡೆದು ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು. ಹಾಸನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ್, ಸಾಲಗಾಮೆ ಉಪ ತಹಶಿಲ್ದಾರ್ ಯು.ಎಂ. ಮೋಹನ್ ಕುಮಾರ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.