ಬಂಕಾಪುರ: ಶಿಗ್ಗಾವಿ ತಹಶೀಲ್ದಾರ್ ಚಂದ್ರಶೇಖರ ಗಾಳಿ ಪಟ್ಟಣದ ಉಪತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಆಧಾರ್ ನೋಂದಣಿ, ತಿದ್ದುಪಡಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ, ಬುದ್ಧಿಮಾಂದ್ಯ ಮಾಸಾಶನಕ್ಕೆ ಬರುವ ಸಾರ್ವಜನಿಕರಿಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ದಾಖಲಾತಿ ಪಡೆದು ವಿಳಂಬ ಧೋರಣೆ ತಾಳದೆ ಕೆಲಸ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಿದರು.
ಆಧಾರ್ ನೋಂದಣಿ, ತಿದ್ದುಪಡಿಗಾಗಿ ಬರುವ ಸಾರ್ವಜನಿಕರನ್ನು ಅನಾವಶ್ಯಕವಾಗಿ ಅಲೆದಾಡಿಸುವುದನ್ನು ಬಿಟ್ಟು, ಬೆಳಗ್ಗೆ ಕೋಪನ್‌ಗಳನ್ನು ನೀಡಿ ಅವರು ಮರಳಿ ಬರುವ ಸಮಯವನ್ನು ಮೊದಲೇ ನಮೂದಿಸಿ ನಂತರ ಅವರಿಗೆ ಸೇವೆ ನೀಡಿ. ಸಾರ್ವಜನಿಕರ ಹಿತ ಕಾಪಾಡುವಂತೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಬುದ್ಧಿಮಾಂಧ್ಯ ಮಗ ಮಲ್ಲಪ್ಪನೊಂದಿಗೆ ನಾಡಕಚೇರಿಗೆ ಆಗಮಿಸಿದ್ದ ನಾರಾಯಣಪುರ ಗ್ರಾಮದ ವೃದ್ಧೆ ಕಾಳಮ್ಮ ರಾಯಣ್ಣವರ ತಹಶೀಲ್ದಾರ್ ಅವರ ಮುಂದೆ ತಮ್ಮ ಅಳಲು ತೊಡಿಕೊಂಡು, ಒಂದು ವರ್ಷದಿಂದ ಅಲೆದಾಡುತ್ತಿದ್ದೇನೆ ನನಗೆ ವೃದ್ಧಾಪ್ಯ ವೇತನ ಬರುತ್ತಿಲ್ಲ. ಬುದ್ಧಿಮಾಂಧ್ಯ ಮಗನಿಗೆ ಡಾಕ್ಟರ್ ಸರ್ಟಿಫಿಕೇಟ್ ನೀಡುತ್ತಿಲ್ಲ, ನನಗೆ ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ದಯವಿಟ್ಟು ನ್ಯಾಯ ಒದಗಿಸಿ ಎಂದು ಅಂಗಲಾಚಿ ಬೇಡಿಕೊಂಡರು. ಕೂಡಲೇ ಸಂಬಂಧಪಟ್ಟ ಗ್ರಾಮಲೆಕ್ಕಿಗನನ್ನು ಕರೆಯಿಸಿ ಎಲ್ಲರೇದುರೇ ತರಾಟೆ ತೆಗೆದುಕೊಂಡ ತಹಶೀಲ್ದಾರ್, ನಾಚಿಕೆಯಾಗುವುದಿಲ್ಲವೇ ನಿಮಗೆ? ಇಂತಹ ವೃದ್ಧರನ್ನು ಅಲೆದಾಡಿಸತ್ರಿರಲ್ಲ… ಸಂಬಂಧಪಟ್ಟ ದಾಖಲಾತಿ ಪಡೆದು ಸಂಧ್ಯಾಸುರಕ್ಷಾ ಯೋಜನೆ ಲಾಭ ಕಲಿಸಿ, ಅವರ ಬುದ್ಧಿ ಮಾಂಧ್ಯಮಗನಿಗೆ ಜಿಲ್ಲಾ ಆಸ್ಪತ್ರೆ ವೈದ್ಯರಿಂದ ತಪಾಸಣೆಗೊಳಪಡಿಸಿ ಪ್ರಮಾಣ ಪತ್ರ ಪಡೆದು; ಅಂಗವಿಕಲ ಮಾಸಾಶನ ಸೌಲಭ್ಯ ನೀಡಿ ಎಂದು ಆದೇಶಿಸಿದರು. ಇನ್ನು ಮುಂದೆ ಇಂತಹ ಯಾವುದೇ ಪ್ರಕರಣಗಳು ನನ್ನ ಗಮನಕ್ಕೆ ಬಂದರೆ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಸರ್ಕಾರಿ ಸೌಲಭ್ಯಕ್ಕಾಗಿ ಆಗಮಿಸುವ ಸಾರ್ವಜನಿಕರಿಗೆ, ಮಹಿಳೆ, ವೃದ್ಧರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಕಂದಾಯ ಇಲಾಖೆ ಅಧಿಕಾರಿ ಆರ್.ಎಂ.ನಾಯಕ ಅವರಿಗೆ ಸೂಚಿಸಿದರು.