ಶಿವರಾಜಕುಮಾರ್ ಅಭಿಮಾನಿಗಳು ಶುಕ್ರವಾರಕ್ಕೆ ಕಾಯುತ್ತಿದ್ದಾರೆ. ಕುತೂಹಲದಿಂದ ಕಾಯುತ್ತಿದ್ದ ಸಿನಿಮಾವನ್ನು ಬೆಳ್ಳಂಬೆಳಗೆ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇಷ್ಟು ಹೇಳಿದ ಮೇಲೆ ಯಾವ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ ಎಂದು ನಿಮಗೆ ಗೊತ್ತಾಗಿರಬಹುದು. ಹೌದು, ನಾವು ಹೇಳುತ್ತಿರೋದು “ಟಗರು’ ಸಿನಿಮಾ ಬಗ್ಗೆ. ಟ್ರೇಲರ್ ಹಾಗೂ ಹಾಡುಗಳ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ “ಟಗರು’ ಚಿತ್ರ ಈ ವಾರ (ಫೆ.23) ತೆರೆಕಾಣುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಶಿವರಾಜಕುಮಾರ್ ಚಿತ್ರವೆಂದರೆ ಅದು “ಟಗರು’. ಸೂರಿ ನಿರ್ದೇಶನದ ಈ ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದಾರೆ. ಮಾನ್ವಿತಾ ಹರೀಶ್ ಹಾಗೂ ಭಾವನಾ ನಾಯಕಿಯರು. “ಟಗರು’ ಚಿತ್ರ ಪ್ರದರ್ಶನ ಶುಕ್ರವಾರ ಮುಂಜಾನೆ 5.45 ರಿಂದಲೇ ಆರಂಭವಾಗಲಿದ್ದು, ಚಿತ್ರಮಂದಿರಗಳಲ್ಲಿ ದಿನಕ್ಕೆ 6 ಶೋಗಳ ಪ್ರದರ್ಶನ ಕಾಣಲಿದೆ. ಸಾಮಾನ್ಯವಾಗಿ ಬಳ್ಳಾರಿ, ಹೊಸಪೇಟೆಗಳಲ್ಲಿ ಕನ್ನಡ ಚಿತ್ರಗಳು ಮುಂಜಾನೆ ಪ್ರದರ್ಶನ ಕಾಣುತ್ತಿದ್ದವು.
ಆದರೆ, “ಟಗರು’ ಚಿತ್ರ ಕೇವಲ ಬಳ್ಳಾರಿ, ಹೊಸಪೇಟೆಯಷ್ಟೇ ಅಲ್ಲದೇ, ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಮುಂಜಾನೆ ಪ್ರದರ್ಶನ ಕಾಣುತ್ತಿರೋದು ವಿಶೇಷ. ಇನ್ನು, ಅಭಿಮಾನಿಗಳು ಕೂಡಾ ತಮ್ಮದೇ ಶೈಲಿಯಲ್ಲಿ “ಟಗರು’ ಸಂಭ್ರವನ್ನು ಆಚರಿಸಲಿದ್ದಾರೆ. ಮೆರವಣಿಗೆ, ಅನ್ನದಾನ ಸೇರಿದಂತೆ ಶಿವರಾಜಕುಮಾರ್ ಅಭಿಮಾನಿ ಸಂಘಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಈಗಾಗಲೇ ಚಿತ್ರದ ಮುಂಗಡ ಬುಕ್ಕಿಂಗ್ ಕೂಡಾ ಆರಂಭವಾಗಿದ್ದು, ಬುಕ್ಕಿಂಗ್‌ನಲ್ಲೂ “ಟಗರು’ ಹವಾ ಜೋರಾಗಿದೆ. 300 ರಿಂದ 400 ಚಿತ್ರಮಂದಿರಗಳಲ್ಲಿ “ಟಗರು’ ಬಿಡುಗಡೆಯಾಗುತ್ತಿದ್ದು, ಕೇವಲ ಕರ್ನಾಟಕವಷ್ಟೇ ಅಲ್ಲದೇ, ಹೊರರಾಜ್ಯಗಳಲ್ಲೂ ಫೆ.23 ರಂದೇ ಬಿಡುಗಡೆಯಾಗುತ್ತಿದೆ. ಚೆನ್ನೈ, ಪುಣೆ, ಮುಂಬೈ, ಗೋವಾ, ಅಹಮದಾಬಾದ್, ಹೈದರಾಬಾದ್, ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ “ಟಗರು’ ಚಿತ್ರ ಬಿಡುಗಡೆಯಾಗುತ್ತಿದೆ.
ಚಿತ್ರದ ಬಗೆಗಿನ ಕ್ರೇಜ್ ಕಂಡು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಖುಷಿಯಾಗಿದ್ದಾರೆ. “ಅಭಿಮಾನಿಗಳು ಗುರುವಾರ ಮಧ್ಯರಾತ್ರಿಯೇ ಸಿನಿಮಾ ಪ್ರದರ್ಶನ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ನಾವೇ ಬೇಡ ಎಂದು ಶುಕ್ರವಾರ ಮುಂಜಾನೆಯಿಂದ ಪ್ರದರ್ಶನ ಆರಂಭಿಸುತ್ತಿದ್ದೇವೆ. ಶಿವಣ್ಣ ಅಭಿಮಾನಿಗಳು “ಟಗರು’ ಸಂಭ್ರಮವನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಿದ್ದೇವೆ. “ಜೋಗಿ’, “ಜೋಗಯ್ಯ’ ನಂತರ ಈಗ “ಟಗರು’ಗೆ ಈ ಮಟ್ಟದ ಕ್ರೇಜ್ ಹುಟ್ಟಿದೆ’ ಎನ್ನುವುದು ಶ್ರೀಕಾಂತ್ ಮಾತು.
* ಮುಂಜಾನೆ 5.45 ರಿಂದ ಪ್ರದರ್ಶನ ಆರಂಭ
* ಮೆರವಣಿಗೆ, ಅನ್ನದಾನ ಮೂಲಕ ಅಭಿಮಾನಿಗಳ ಸಂಭ್ರಮ
* ಹೊರರಾಜ್ಯಗಳಲ್ಲೂ ಫೆ.23ರಂದೇ ಬಿಡುಗಡೆ