ಬಡತನದಲ್ಲಿ ಅರಳುವ ಪ್ರತಿಭೆಗಳು ಹೆಚ್ಚು ಸದೃಢರಾಗಿರುತ್ತಾರೆ. ಏಕೆಂದರೆ ಅವರೊಂಥರ ಎಲ್ಲಾ ಕಷ್ಟಗಳನ್ನು, ಅಪಮಾನಗಳನ್ನು ದಾಟಿಕೊಂಡು ಬಂದಿರುತ್ತಾರೆ. ಇಂಥವರಿಗೆ ಛಲ ಹೆಚ್ಚು.. ಇಂತಹ ಒಂದು ಅಂಶವನ್ನಿಟ್ಟುಕೊಂಡು ಮಾಡಿರುವ ಸಿನಿಮಾ “ಟೇಕ್ವಾಂಡೋ ಗರ್ಲ್’.
ಒಳ್ಳೆಯ ಶಿಕ್ಷಣದ ಕನಸು ಕಾಣುವ ಋತು ಆರ್.ಟಿ.ಇ ಮೂಲಕ ಸೀಟು ಪಡೆದುಕೊಂಡ ಹುಡುಗಿ ಪ್ರತಿಷ್ಠಿತ ಶಾಲೆ ಸೇರುತ್ತಾಳೆ. ಆದರೆ, ಬಡತನ, ಸ್ಲಂನಿಂದ ಬಂದ ಹುಡುಗಿ ಎಂಬ ಲೇಬಲ್ ಮಾತ್ರ ಆಕೆಯನ್ನು ಶಾಲೆಯಲ್ಲಿ ಅವಮಾನಕ್ಕೀಡು ಮಾಡುತ್ತದೆ.
ಆದರೆ, ಗಟ್ಟಿಗಿತ್ತಿ ಋತು ಮಾತ್ರ ತನ್ನ ಗುರಿ ಸಾಧನೆಯತ್ತ ಮುನ್ನುಗ್ಗುತ್ತಿರುತ್ತಾಳೆ. ಈ ನಡುವೆಯೇ ಆಕೆಯನ್ನು ಟೇಕ್ವಾಂಡೋ ಕಲೆ ಆಕರ್ಷಿಸುತ್ತದೆ. . ತನ್ನ ಕೈಯಲ್ಲಿ ಹಣ ಕೊಟ್ಟು ಟೇಕ್ವಾಂಡೋ ಸಮರ ಕಲೆ ತರಬೇತಿ ಪಡೆಯಲಾಗದ ಋತು, ಕೆಲವರು ಅಭ್ಯಾಸ ಮಾಡುತ್ತಿರುವುದನ್ನು ನೋಡಿ ಸ್ವಯಂ ಆಗಿ ತಾನೇ ಆ ಕಲೆಯನ್ನು ಕಲಿತುಕೊಳ್ಳಲು ಮುಂದಾಗುತ್ತಾಳೆ. ಇದರಲ್ಲಿ ಯಶಸ್ವಿಯಾಗುತ್ತಾಳಾ, ಆಕೆಗೆ ಎದುರಾಗುವ ಸವಾಲುಗಳೇನು ಎಂಬುದೇ ಈ ಸಿನಿಮಾದ ಹೈಲೈಟ್.
ಮೊದಲೇ ಹೇಳಿದಂತೆ ಇಡೀ ಸಿನಿಮಾ ಋತು ಸುತ್ತವೇ ಸಾಗುತ್ತದೆ. ಚಿತ್ರದಲ್ಲಿ ಬಡತನ ಹೇಗೆ ಮನುಷ್ಯರನ್ನು ಕುಗ್ಗಿಸುತ್ತದೆ ಎಂಬ ಅಂಶವನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಆ ಮಟ್ಟಿಗೆ ಇದೊಂದು ಮೆಚ್ಚುವ ಪ್ರಯತ್ನ. ಚಿತ್ರದಲ್ಲಿ ನಟಿಸಿರುವ ಋತುಸ್ಪರ್ಶ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಈ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಉಳಿದಂತೆ ರೇಖಾ ಕೂಡ್ಲಗಿ, ವಿಫಾ ರವಿ, ಸುವಿತಾ, ಸಹನಾ, ರವೀಂದ್ರ ನಟಿಸಿದ್ದಾರೆ.