Advertisement

ತಡಕಲ್‌ ಗ್ರಾಪಂ ಲೆಕ್ಕ ಪತ್ರ ನೀಡಲು ಆಗ್ರಹ

11:16 AM Mar 12, 2022 | Team Udayavani |

ಆಳಂದ: ಉದ್ಯೋಗ ಖಾತ್ರಿಯಡಿ ಎಲ್ಲ ಕಾರ್ಮಿಕರಿಗೂ ಕೆಲಸ ನೀಡಬೇಕು. ಐದು ವರ್ಷಗಳಿಂದಾದ ಖರ್ಚು-ವೆಚ್ಚಗಳ ಲೆಕ್ಕಪತ್ರ ನೀಡಬೇಕು ಎನ್ನುವ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಡಕಲ್‌ ಗ್ರಾ.ಪಂ ಎದುರು ಸದಸ್ಯ ವಿಶ್ವನಾಥ ಬಿ. ಪವಾಡಶೆಟ್ಟಿ, ಶರಣಪ್ಪ ಜಮಾದಾರ ನೇತೃತ್ವದಲ್ಲಿ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಯಿತು.

Advertisement

ಧರಣಿಯಲ್ಲಿ ಪಾಲ್ಗೊಂಡಿದ್ದ ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ ಮಾತನಾಡಿ, ಇದು ವಿರೋಧಕ್ಕಾಗಿ ಧರಣಿಯಲ್ಲ. ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಾಮಾನ್ಯ ಸಭೆ, ಗ್ರಾಮಸಭೆ ಕೈಗೊಂಡಿಲ್ಲ. ಅನುದಾನ, ತೆರಿಗೆ ವಸೂಲಿ ಕುರಿತು ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು. ಆದರೆ ಒಂದೂವರೆ ವರ್ಷದಿಂದಲೂ ಸಾಮಾನ್ಯ ಸಭೆ, ಚರ್ಚೆ ನಡೆದಿಲ್ಲ. ಸ್ಥಾಯಿ ಸಮಿತಿ ರಚಿಸದೇ ಗ್ರಾಪಂ ಸದಸ್ಯರನ್ನು ಕಡೆಗಣಿಸಿ ಹಣ ಲೂಟಿ ಮಾಡಲಾಗುತ್ತಿದೆ. ಅಧ್ಯಕ್ಷರು, ಅಧಿಕಾರಿಗಳು, ಸದಸ್ಯರು ಕೇಳಿದ ಮಾಹಿತಿ ನೀಡಬೇಕು. ಬೋಗಸ್‌ ಕಾಮಗಾರಿ ತಡೆಯಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಸದಸ್ಯ ವಿಶ್ವನಾಥ ಬಿ. ಪವಾಡಶೆಟ್ಟಿ, ಕಲ್ಯಾಣಿ ತುಕಾಣಿ ಮಾತನಾಡಿ, ಕಾರ್ಮಿಕರಿಗೆ ಕೆಲಸ ನೀಡಿ ಅನುಕೂಲ ಕಲ್ಪಿಸಬೇಕು. ಹಲವು ಬಾರಿ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ಒತ್ತಾಯಿಸಿದ ಮೇಲೆ ಕಳೆದ ವಾರ ಕೆಲವೇ ಕಾರ್ಮಿಕರಿಗಷ್ಟೇ ಕೆಲಸ ನೀಡಿ, ಇನ್ನುಳಿದವರಿಗೆ ಕೆಲಸ ನೀಡದೇ ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲಸಕ್ಕಾಗಿ ಕಾರ್ಮಿಕರು ಫಾರಂ ನಂ.06 ಭರ್ತಿ ಮಾಡಿ 45 ದಿನಗಳಾದರೂ ಯಾವುದೇ ಕೆಲಸ ಕೊಡುತ್ತಿಲ್ಲ. ಈ ಕುರಿತು ಪಿಡಿಒಗಳಿಗೆ ಕೇಳಿದರೆ ಅಸಡ್ಡೆ ತೋರಿಸುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಅನಿರ್ದಿಷ್ಟಾವಧಿ ಧರಣಿ ನಡೆಸಿ ಎರಡು ಬಾರಿ ಅರ್ಜಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗ ಖಾತ್ರಿ ಯೋಜನೆ ಅಡಿ ಸಂಪೂರ್ಣ ಮಾನವ ದಿನಗಳ ಕೆಲಸ ಕೊಡಬೇಕು. 2021-22ನೇ ಸಾಲಿನ ಉದ್ಯೋಗ ಖಾತ್ರಿ ಕಾಮಗಾರಿ ಹಾಗೂ ತೆರಿಗೆ ಹಣದ ಸಂಪೂರ್ಣ ದಾಖಲಾತಿ ನೀಡಬೇಕು. ಜಲಜೀವನ ಮಶಿನ್‌ ಯೋಜನೆ ಸಂಪೂರ್ಣ ನಕಲು ದಾಖಲಾತಿ ಕೊಡಬೇಕು. ಗ್ರಾಮಸಭೆ ಮತ್ತು ವಾರ್ಡ್‌ ಸಭೆ ತಕ್ಷಣಕ್ಕೆ ಕರೆಯಬೇಕು. ಎಲ್ಲ ಬ್ಯಾಂಕ್‌ ಖಾತೆಗಳ ಸ್ಟೇಟ್‌ಮೆಂಟ್‌, ಬಿಆರ್‌ಎಸ್‌ ಸ್ಟೇಟ್‌ಮೆಂಟ್‌ ಕೊಡಬೇಕು. 2017ರಿಂದ 2022ರ ವರೆಗಿನ ಸಾಮಾಜಿಕ ಲೆಕ್ಕಪರಿಶೋಧನೆ ನಕಲು ಪ್ರತಿ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಧರಣಿ ಸ್ಥಳಕ್ಕೆ ಆಗಮಿಸಿದ್ದ ತಾಪಂ ಇಒ ಡಾ| ಸಂಜಯ ರೆಡ್ಡಿ ಮನವಿ ಸ್ವೀಕರಿಸಿ, ಮಾ. 21ರ ವರೆಗೆ ಕಾಲಾವಕಾಶ ನೀಡಿ, ಸಕಲ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಧರಣಿ ಹಿಂದಕ್ಕೆ ಪಡೆಯಲಾಯಿತು. ಧರಣಿಯಲ್ಲಿ ಕುಪ್ಪಣ್ಣಾ ನಾಮಣೆ, ಸಿದ್ಧಪ್ಪಾ ರುದ್ರವಾಡಿ, ಕಾಂತು ಮಾಳಗೆ, ಶಿವಲಿಂಗಪ್ಪ ಹಳ್ಳೆ, ಸುಭಾಷ ಜಮಾದಾರ ಮತ್ತಿತರರು ಪಾಲ್ಗೊಂಡಿದ್ದರು. ಶ್ರೀನಿವಾಸ ಗುತ್ತೇದಾರ, ಪಿಡಿಒ ಪಾರ್ವತಿಬಾಯಿ ಪೂಜಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next