ಜಮ್ಮು-ಕಾಶ್ಮೀರ: 1990ರ ಜನವರಿ 25ರಂದು ಶ್ರಿನಗರದಲ್ಲಿ ಭಾರತೀಯ ವಾಯುಪಡೆಯ ನಾಲ್ವರು ಯೋಧರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ ಎಫ್) ಮುಖ್ಯಸ್ಥ ಯಾಸಿನ್ ಮಲಿಕ್ ವಿರುದ್ಧ ಜಮ್ಮುವಿನ ಟಾಡಾ(ಭಯೋತ್ಪಾದಕ ಮತ್ತು ವಿಧ್ವಂಸಕ ಚಟುಟವಟಿಕೆಗಳ ಕಾಯ್ದೆಯ ಕೋರ್ಟ್ ಬುಧವಾರ (ನವೆಂಬರ್ 23) ಹೊಸ ವಾರಂಟ್ ಅನ್ನು ಹೊರಡಿಸಿದೆ.
ಇದನ್ನೂ ಓದಿ:ಅದಾನಿಯ ವಿಝಿಂಜಮ್ ಬೃಹತ್ ಬಂದರು ಯೋಜನೆಗೆ ಮೀನುಗಾರರ ಸಮುದಾಯದ ವಿರೋಧವೇಕೆ?
1990ರಲ್ಲಿ ನಡೆದ ಭಾರತೀಯ ವಾಯುಪಡೆಯ ಯೋಧರ ಹತ್ಯೆ ಪ್ರಕರಣದಲ್ಲಿ ಮಲಿಕ್ ಆರೋಪಿಯಾಗಿರುವುದಾಗಿ ವರದಿ ತಿಳಿಸಿದೆ. ಯಾಸಿನ್ ಮಲಿಕ್ ವಿರುದ್ಧ ಟಾಡಾ ಕೋರ್ಟ್ ವಾರಂಟ್ ಜಾರಿಗೊಳಿಸಿರುವುದಾಗಿ ಸಿಬಿಐ ವಕೀಲ ಮೋನಿಕ್ ಕೊಹ್ಲಿ ಮಾಹಿತಿ ನೀಡಿದ್ದು, ಮುಂದಿನ ವಿಚಾರಣೆ ಡಿಸೆಂಬರ್ 22ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 22ಕ್ಕೆ ಮುಂದೂಡಲಾಗಿದೆ. ಟೆರರ್ ಫಂಡಿಂಗ್ ಪ್ರಕರಣದಲ್ಲಿ ಯಾಸಿನ್ ಮಲಿಕ್ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, ಭಾರತೀಯ ವಾಯುಪಡೆ ಯೋಧರ ಹತ್ಯೆ ಪ್ರಕರಣದಲ್ಲಿಯೂ ಮಲಿಕ್ ಆರೋಪಿಯಾಗಿರುವುದಾಗಿ ವರದಿ ವಿವರಿಸಿದೆ.
ಭಯೋತ್ಪಾದಕರಿಗೆ ನೆರವು ನೀಡಿದ ಪ್ರಕರಣದಲ್ಲಿ ದೋಷಿಯಾಗಿದ್ದ ಯಾಸಿನ್ ಮಲಿಕ್ ಗೆ ಮರಣದಂಡನೆ ವಿಧಿಸಬೇಕೆಂದು ಎನ್ ಐಎ ಮನವಿ ಮಾಡಿತ್ತು. ಆದರೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.