ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾದಂತೆಯೆ ಜೆಡಿಎಸ್ ರಣತಂತ್ರ ಆರಂಭಿಸಿದೆ.
ಮುಖ್ಯಮಂತ್ರಿಗಳನ್ನು ಎದುರಿಸುವುದು ಮತ್ತು ಸೋಲಿಸುವ ಉದ್ದೇಶದಿಂದ ಭಾರಿ ರಾಜಕೀಯ ಕಸರತ್ತನ್ನು ಜೆಡಿಎಸ್ ಈಗಾಗಲೇ ಆರಂಭಿಸಿದ್ದು, ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ರಾಜಕೀಯ ವಿರೋಧಿಗಳನ್ನು ಕಲೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ.
ಶನಿವಾರ ಜಿಟಿಡಿ ಅವರು ಮಾಜಿ ಸಚಿವ ಬಿಜೆಪಿ ನಾಯಕ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ಸಿದ್ದರಾಮಯ್ಯ ಬದ್ಧ ವಿರೋಧಿ , ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಅವರು ಹಾಜರಿದ್ದರು.
ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ನಾಲ್ಕು ಬಾರಿ ಗೆಲುವು ದಾಖಲಿಸಿದ್ದರೆ, 2 ಬಾರಿ ಸೋಲನ್ನೂ ಉಂಡಿದ್ದಾರೆ. 2006 ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ನಿಂದ ಚುನಾವಣೆ ಎದುರಿಸಿ 257 ಮತಗಳ ಅಂತರದಿಂದ ಜಯಗಳಿಸಿದ್ದರು.
Related Articles
ಸಿದ್ದರಾಮಯ್ಯ ಅವರನ್ನು ಸೋಲಿಸುವ ರಣತಂತ್ರಕ್ಕೆ ಬಿಜೆಪಿ ಬೆಂಬಲ ನೀಡುವ ಎಲ್ಲಾ ಸಾಧ್ಯತೆಗಳಿದ್ದು, ಕ್ಷೇತ್ರದಲ್ಲಿ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಅಭ್ಯರ್ಥಿಗಳು ಒಟ್ಟು 14 % ಮತಗಳನ್ನು ಮಾತ್ರ ಪಡೆದಿದ್ದರು.