Advertisement

ಟೇಬಲ್‌ ಟಾಪ್‌ ಮಾಸ್ಟರ್‌ಪ್ಲಾನ್‌!

12:03 PM Dec 10, 2017 | |

ಬೆಂಗಳೂರು: ರಾಜಧಾನಿಯ ಜನಸಂಖ್ಯೆ, ನೀರಿನ ಬೇಡಿಕೆ, ತ್ಯಾಜ್ಯ ಉತ್ಪಾದನೆ ಪ್ರಮಾಣ, ಜನ ವಸತಿ, ಕಟ್ಟಡಗಳ ಅಂಕಿ ಅಂಶದ ಗುಣಾಕಾರ, ಭಾಗಾಕಾರ ಲೆಕ್ಕಾಚಾರದಲ್ಲಿ ಬಿಡಿಎ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಪರಿಷ್ಕೃತ ಮಾಸ್ಟರ್‌ಪ್ಲಾನ್‌ 2031 ಟೇಬಲ್‌ ವರದಿ ಸಿದ್ಧಪಡಿಸಿದ್ದಾರೆ ಎಂದು ಬೆಂಗಳೂರಿನ ವಿವಿಧ ಸಂಘಟನೆಗಳು, ತಜ್ಞರು ಆರೋಪಿಸಿದ್ದಾರೆ.

Advertisement

ಈ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಅನುಷ್ಠಾನಕ್ಕೆ ಬಂದರೆ ನಗರದ ಪರಿಸರ ಇನ್ನಷ್ಟು ಹಾನಿಯಾಗಲಿದೆ. ಮಾಸ್ಟರ್‌ ಪ್ಲಾನ್‌ಗೂ ವಾಸ್ತಾವಂಶಕ್ಕೂ ತಾಳೆಯಾಗುವುದಿಲ್ಲ. ಜನರ ಆಶೋತ್ತರಗಳ ತುಲನಾತ್ಮ ವರದಿ ಇದಾಗಿಲ್ಲ ಎಂದು ವಿವಿಧ ಸಂಘಸಂಸ್ಥೆಗಳು, ನಗರಾಭಿವೃದ್ಧಿ, ಮೂಲಸೌಕರ್ಯ, ಜಲ ಸಂಪನ್ಮೂಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುನೈಟೆಡ್‌ ಬೆಂಗಳೂರು ನಾಗರಿಕ-ನಾಗರಿಕರ ಕಾವಲು ಸಮಿತಿ ಶನಿವಾರ ನಗರದ ಎನ್‌ಜಿಒ ಸಭಾಂಗಣದಲ್ಲಿ ಆಯೋಜಿಸಿದ್ದ ಕೆರೆ ಒತ್ತುವರಿ ಮೇಲಿನ ಸದನ ಸಮಿತಿ (ಕೋಳಿವಾಡ್‌) ವರದಿ ಮತ್ತು ಪರಿಷ್ಕೃತ ಆರ್‌ಎಂಪಿ ಮಾಸ್ಟರ್‌ ಪ್ಲಾನ್‌ -2031 ನಮ್ಮ ಬೆಂಗಳೂರನ್ನು ವಾಪಸ್‌ ಪಡೆಯಲು ಸಾಧ್ಯವೇ ಎಂಬ ಸಂವಾದ ಕಾರ್ಯಕ್ರಮದಲ್ಲಿ  ಮಾತನಾಡಿದ

ಘನತ್ಯಾಜ್ಯ ನಿರ್ವಹಣೆ ತಜ್ಞ ಎನ್‌.ಎಸ್‌.ರಮಾಕಾಂತ್‌, ಬಿಡಿಎ ಮಾಸ್ಟರ್‌ ಪ್ಲಾನ್‌ 2031 ಇತಿಯೋಫಿಯನ್‌ ಕಥೆಯಂತಿದೆ. 1.25 ಕೋಟಿ ಜನಸಂಖ್ಯೆಯಿಂದ ನಿತ್ಯ ನಾಲ್ಕು ಟನ್‌ ಕಸ ವಿಲೇವಾರಿಯಾಗುತ್ತಿದೆ. ಜನಸಂಖ್ಯೆ 2 ಕೋಟಿ ದಾಟಿದರೆ 13 ಸಾವಿರ ಟನ್‌ ಕಸ ಉತ್ಪತ್ತಿಯಾಗಲಿದೆ ಎಂದು ಪ್ಲಾನ್‌ನಲ್ಲಿ ಹೇಳಿದ್ದಾರೆ. ತ್ಯಾಜ್ಯ ಉತ್ಪಾದನೆ ಪ್ರಮಾಣ ಕಡಿಮೆ ಮಾಡುವ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ವಕೀಲ ಸಜನ್‌ ಪೂವಯ್ಯ ಮಾತಮಾಡಿ, ನಗರವಾಸಿಗಳೇ ಆ ನಗರದ ಪಾಲುದಾರರು. ನಗರದ ರಸ್ತೆ, ಬಸ್‌ ಸಂಚಾರ, ನಿಲ್ದಾಣಗಳು ಇತ್ಯಾದಿ ಜನರ ಬೇಕು ಬೇಡವನ್ನು ನಗರದ ಪಾಲುದಾರರಲ್ಲದ ಪೊಲೀಸರು, ಸಚಿವರು, ಅಧಿಕಾರಿಗಳು ನಿರ್ಧರಿಸುತ್ತಿದ್ದಾರೆ. ಇದನ್ನು ಪ್ರಶ್ನಿಸದೇ ಇರುವುದರಿಂದ ಅಧಿಕಾರಿಗಳು ಸಿದ್ಧಪಡಿಸಿದ ವರದಿ ಜಾರಿಗೆ ಬರುತ್ತಿದೆ. ಯೋಜನೆಯ ಅನುಷ್ಠಾನದ ಪೂರ್ವದಲ್ಲೇ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

Advertisement

ಕೋರಮಂಗಲ 3ನೇ ಬ್ಲಾಕ್‌ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ನಿತಿನ್‌ ಶೇಷಾದ್ರಿ , ಸಿಟಿಜನ್‌ ಆ್ಯಕ್ಷನ್‌ ಫೋರಂ ಅಧ್ಯಕ್ಷ ಎನ್‌.ಎಸ್‌.ಮುಕುಂದ, ಸದಸ್ಯ ವಿಜಯನ್‌ ಮೆನನ್‌, ಐ ಚೇಂಜ್‌ ಸಂಸ್ಥೆಯ ಸ್ನೇಹಾ ನಂದಿಹಾಳ್‌, ಎಟಿಆರ್‌ಇಇ ವೀಣಾ ಶ್ರೀನಿವಾಸನ್‌, ಫ್ರೆಂಡ್ಸ್‌ ಆಫ್ ಲೇಕ್ಸ್‌ನ ರಾಮಪ್ರಸಾದ್‌, ಜಲ ಸಂರಕ್ಷಣ ತಜ್ಞ  ಎಸ್‌. ವಿಶ್ವನಾಥ್‌ ವಿಷಯ ಮಂಡಿಸಿದರು.

2013ಕ್ಕೆ ನಗರದ ಜನಸಂಖ್ಯೆ 2 ಕೋಟಿ ದಾಟಲಿದೆ. ಜನ ವಸತಿಗೆ 213 ಕಿ.ಮೀ. ವಿಸ್ತೀರ್ಣದ ಭೂಮಿ ಅಗತ್ಯ ಎಂದು ಮಾಸ್ಟರ್‌ ಪ್ಲಾನ್‌ನಲ್ಲಿ ತಿಳಿಸಿದೆ. ಆ ಪ್ರಕಾರ ಪ್ರತಿ ವರ್ಷ ನಗರದ ಜನಸಂಖ್ಯೆ ಶೇ.5.6ರಷ್ಟು ಹೆಚ್ಚಾಗಬೇಕು. ಇದು ಅಸಾಧ್ಯ. 2007ರಿಂದ 2017ರ ವರೆಗೆ ಜನಸಂಖ್ಯೆ ಏರಿಕೆ ಪ್ರಮಾಣ ಶೇ.3.8ರಷ್ಟಿದೆ. ನಗರದಲ್ಲಿ ಜಾಗದ ಕೊರತೆ ಇದೆ. ಜನರನ್ನು ಎಲ್ಲಿಂದ ಕರೆತರುತ್ತಾರೆ.
-ನಿತಿನ್‌ ಶೇಷಾದ್ರಿ, ಕೋರಮಂಗಲ 3ನೇ ಬ್ಲಾಕ್‌ ನಿವಾಸಿ ಕ್ಷೇಮಾಭಿವೃದ್ಧಿ ಸಂಘ

ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸುವ ಕಾರ್ಯ ಬಿಡಿಎ ವ್ಯಾಪ್ತಿಗೆ ಬರುವುದಿಲ್ಲ. ಇದು ಭೂ ಅಭಿವೃದ್ಧಿ ಪ್ರಾಧಿಕಾರವಷ್ಟೆ. ಮಾಸ್ಟರ್‌ಪ್ಲಾನ್‌ ಸಿದ್ಧಪಡಿಸಬೇಕಾದ ಮೆಟ್ರೋ ಪಾಲಿಟನ್‌ ಕಮಿಷನ್‌(ಎಂಪಿಸಿ) ಜೀವ ಕಳೆದುಕೊಂಡಿದೆ. ಕಾನೂನು ಹೋರಾಟದಿಂದಲೂ ಪ್ರಯೋಜನ ಇಲ್ಲ. ಜನ ಎಚ್ಚೆತ್ತುಕೊಳ್ಳಬೇಕು.
-ವಿಜಯ್‌ ಮೆನನ್‌, ಸದಸ್ಯ, ಸಿಟಿಜನ್‌ ಆ್ಯಕ್ಷನ್‌ ಫೋರಂ

ಒತ್ತುವರಿ ತೆರವಿಗೆ ಹೋರಾಟ ಅಗತ್ಯ: ಕೆರೆ, ರಾಜಕಾಲುವೆ ಸೇರಿ ಸರ್ಕಾರಿ ಜಾಗಗಳ ಒತ್ತುವರಿ ಸಂಬಂಧ ಸದನ ಸಮಿತಿ ನೀಡುವ ವರದಿ ಹಾಗೂ ಶಿಫಾರಸುಗಳ ಅನುಷ್ಠಾನಕ್ಕಾಗಿ ನಾಗರಿಕರು, ಸಂಘ ಸಂಸ್ಥೆಗಳು ಒಟ್ಟಾಗಿ ಹೋರಾಟ ನಡೆಸಬೇಕು. ಕೆರೆ, ರಾಜಕಾಲುವೆ ಒತ್ತುವರಿ ಸಂಬಂಧ ಸರ್ಕಾರಗಳು ವರದಿ ಪಡೆಯುತ್ತಿವೆ.

ಕೋಳಿವಾಡ ವರದಿ ನಾಲ್ಕನೇ ವರದಿ ಸಲ್ಲಿಸಿದೆ. ಯಾವ ವರದಿಯನ್ನೂ ಅನುಷ್ಠಾನ ಮಾಡಿಲ್ಲ. ಕೋಳಿವಾಡ್‌ ವರದಿಯಲ್ಲಿ ಒತ್ತುವರಿದಾರರಿಗೆ ಅಧಿಕೃತವಾಗಿ ಒತ್ತುವರಿಯನ್ನು ಸಕ್ರಮಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದು ಅತ್ಯಂತ ಅಪಾಯಕಾರಿ ಎಂದು ಸಿಟಿಜನ್‌ ಆಕ್ಷನ್‌ ಫೋರಂ ಅಧ್ಯಕ್ಷ ಎನ್‌.ಎಸ್‌.ಮುಕುಂದ ಕಳವಳ ವ್ಯಕ್ತಪಡಿಸಿದರು.

ಅಭಿವೃದ್ಧಿ ಹೆಸರಲ್ಲಿ ಕೊಳಚೆ ನೀರು ಕೆರೆಗೆ ಹರಿಯದಂತೆ ತಡೆಯಲು ಹೋಗಿ ಮಳೆ ನೀರೂ ಸೇರದಂತೆ ಮಾಡಿದ್ದಾರೆ. ಹೀಗಾಗಿಯೇ ಬಹುತೇಕ ಕೆರಗಳು ಬತ್ತಿ ಹೋಗುತ್ತಿವೆ. ಒತ್ತವರಿಯಿಂದ ಕೆಲವು ಕೆರೆಗಳ ಅಸ್ಥಿತ್ವವೇ ನಾಶಮಾಡಿದ್ದಾರೆ. ಇದೇ ಆಧಾರದಲ್ಲಿ ಸರ್ಕಾರ ನಿರ್ಜೀವ ಕೆರೆಗಳ ಘೋಷಣೆ ಮಾಡುತ್ತಿದೆ. ಉತ್ತಮ ಭವಿಷ್ಯಕ್ಕೆ ಕೆರೆಗಳ ಪುನರುಜ್ಜೀವನ ಅಗತ್ಯ ಎಂದು ಎಟಿಆರ್‌ಇಇ ವೀಣಾ ಶ್ರೀನಿವಾಸನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next