ಬೆಂಗಳೂರು: ಸುಳ್ಳು ದಾಖಲೆ ನೀಡಿ ಟಿಎ-ಡಿಎ ಪಡೆದ ಪ್ರಕರಣ ತೀವ್ರ ವಿವಾದಕ್ಕೊಳಗಾಗಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಐವರು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರು ಸಹವಾಸವೇ ಬೇಡ ಎಂದು ಬೆಂಗಳೂರು ಮತದಾರರ ಪಟ್ಟಿಯ ವಿಳಾಸದಿಂದಲೇ
“ಶಿಫ್ಟ್’ಆಗಿದ್ದಾರೆ.
ಟಿಎ-ಡಿಎ ಪ್ರಕರಣ ಚುನಾವಣಾ ಆಯೋಗ ತಲುಪಿದ್ದರಿಂದ ಬೆಚ್ಚಿ ಬಿದ್ದ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರಾದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ನೂತನ ಸಚಿವ ಆರ್. ಬಿ.ತಿಮ್ಮಪುರ್, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಬೋಸರಾಜ್, ಎಂ.ಡಿ.ಲಕ್ಷ್ಮಿನಾರಾಯಣ ಅವರು ಬೆಂಗಳೂರು ಮತದಾರರ ಪಟ್ಟಿಗೆ ಗುಡ್‌ಬೈ ಹೇಳಿ, ತಮ್ಮ ಸ್ವ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿಕೊಂಡಿದ್ದಾರೆ.
2016, ಸೆಪ್ಟೆಂಬರ್ 28 ರಂದು ನಡೆದ ಬಿಬಿ ಎಂಪಿ-ಮೇಯರ್ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಬಗ್ಗೆ ವಿಳಾಸ ನೀಡಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದ ಈ ಐವರು ಸದ ಸ್ಯರ ಹೆಸರು ಪಾಲಿಕೆ ಆಯುಕ್ತರು ಸಿದ್ದಪಡಿಸಿರುವ ಈ ಬಾರಿಯ ಬಿಬಿಎಂಪಿ ಮೇಯರ್ -ಉಪ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವವರ ಪಟ್ಟಿಯಲ್ಲೇ ಇಲ್ಲ.
ಕಳೆದ ಬಾರಿ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಟಿಎ-ಡಿಎ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮೊದಲಿಗೆ ಡಾ.ಜಿ.ಪರಮೇಶ್ವರ್ ತಮ್ಮ ಹೆಸರು ಬೆಂಗಳೂರು ಮತದಾರರ ಪಟ್ಟಿಯಿಂದ ತೆಗೆದು ಹಾಕಿಸಿದ್ದರು. ಅದಾದ ನಂತರ ಆರ್.ಬಿ.ತಿಮ್ಮಾಪುರ್ 17 ಜನ ವರಿ 2017 ರಂದು ತಮ್ಮ ಹೆಸರು ಮತ ದಾರರ ಪಟ್ಟಿಯಿಂದ ತೆಗೆದುಹಾಕಲು ನಮೂನೆ 7 ಸಲ್ಲಿಸಿದ್ದರು.
ಟಿಎ-ಡಿಎ ಪ್ರಕರಣ ಚುನಾವಣಾ ಆಯೋಗದ ಮೆಟ್ಟಿಲು ಹತ್ತಿದ ನಂತರ ಮಲ್ಲೇಶ್ವರಂ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿದ್ದ ಬೋಸ್ ರಾಜ್ ಅವರು 2017 ಜುಲೈ 7 ರಂದು, ಅಲ್ಲಂ ವೀರಭದ್ರಪ್ಪ ಅವರು ಫೆಬ್ರವರಿ 23 ಹಾಗೂ ಎಂ.ಡಿ. ಲಕ್ಷ್ಮಿನಾರಾಯಣ ಅವರು ಮೇ 20 ರಂದು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಬಾರಿ ಮತದಾನದ ನಂತರ ಸುಳ್ಳು ವಿಳಾಸ ನೀಡಿ ಟಿಎ-ಡಿಎ ಪಡೆದ ಪ್ರಕರಣ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿ ದಂತೆ ಏಳು ಕಾಂಗ್ರೆಸ್ ಹಾಗೂ ಓರ್ವ ಜೆಡಿಎಸ್ ಸದಸ್ಯರ ಸದ ಸ್ಯತ್ವವನ್ನೇ ಅನರ್ಹಗೊಳಿಸುವಂತೆ ಬಿಬಿಎಂಪಿ ಪ್ರತಿ ಪಕ್ಷ ನಾಯಕ ಪದ್ಮನಾಭ ರೆಡ್ಡಿ ಚುನಾವಣಾ ಆಯೋಗಕ್ಕೆ ದೂರು ನೀಡಿ ಅದು ಇದೀಗ ರಾಜ್ಯಪಾಲರ ಅಂಗಳ ತಲುಪಿದೆ. ಪ್ರಕರಣ ಮುಂದೆ ಯಾವ ಸ್ವರೂಪ ಪಡೆಯುವುದೋ ಕಾದು ನೋಡ ಬೇಕಿದೆ.
– ಎಸ್. ಲ ಕ್ಷ್ಮಿನಾರಾಯಣ