ಡಲ್ಲಾಸ್: ಪಾಕಿಸ್ತಾನ ಕ್ರಿಕೆಟ್ ತಂಡದ ನಸೀಬು ಹಾಳಾದಂತಿದೆ. ಇಂಗ್ಲೆಂಡ್ ವಿರುದ್ಧ ಸೋತು ಟಿ20 ವಿಶ್ವಕಪ್ ಗೆ ಬಂದಿದ್ದ ಪಾಕಿಸ್ತಾನ ತಂಡವು ಕ್ರಿಕೆಟ್ ಶಿಶು ಯುಎಸ್ಎ ವಿರುದ್ಧ ಸೋತು ಅವಮಾನಕ್ಕೆ ಒಳಗಾಗಿದೆ. ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲೇ ಸೋಲು ಕಂಡ ಬಾಬರ್ ಅಜಂ ಪಡೆ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ಪಾಕ್ ತಂಡದ ಪ್ರಮುಖ ಬೌಲರ್ ಇದೀಗ ಬ್ಯಾನ್ ಆಗುವ ಭೀತಿ ಎದುರಿಸುತ್ತಿದ್ದಾರೆ.
ಗುರುವಾರ ನಡೆದ ಪಂದ್ಯದ ವೇಳೆ ಪಾಕಿಸ್ತಾನದ ಸ್ಟಾರ್ ಆಟಗಾರ ಹ್ಯಾರಿಸ್ ರೌಫ್ ಅವರು ಬಾಲ್ ಟ್ಯಾಂಪರಿಂಗ್ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಪ್ರಸ್ತುತ ಯುಎಸ್‌ಎ ಹಿರಿಯ ರಾಷ್ಟ್ರೀಯ ಕ್ರಿಕೆಟ್ ತಂಡದ ಸದಸ್ಯರಾಗಿರುವ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ರಸ್ಟಿ ಥೆರಾನ್, ಪಾಕಿಸ್ತಾನದ ಅನುಭವಿ ವೇಗದ ಬೌಲರ್ ರೌಫ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನ್ನು ಟ್ಯಾಗ್ ಮಾಡಿ ಆರೋಪ ಮಾಡಿದ್ದಾರೆ.
ರೌಫ್ ಅವರು ಯುಎಸ್ಎ ವಿರುದ್ಧ ದುಬಾರಿಯಾಗಿದ್ದರು. 4 ಓವರ್‌ಗಳಲ್ಲಿ 37 ರನ್ ಗಳನ್ನು ಬಿಟ್ಟುಕೊಟ್ಟು ಕೇವಲ 1 ವಿಕೆಟ್ ಪಡೆದರು. ಪಂದ್ಯದ ಸಮಯದಲ್ಲಿ, ವೇಗಿಯು ಹೊಸ ಚೆಂಡಿಗೆ ತನ್ನ ಉಗುರುಗಳ ಮೂಲಕ ವಿರೂಪ ಮಾಡಲು ಪ್ರಯತ್ನಿಸಿದ್ದಾರೆ ಎಂದು ಥರಾನ್ ಹೇಳಿದ್ದಾರೆ.
ಆರೋಪವು ಗಂಭೀರವಾಗಿದ್ದರೂ, ಘಟನೆಯ ಕುರಿತು ಯುಎಸ್ಎ ತಂಡದಿಂದ ಯಾವುದೇ ಅಧಿಕೃತ ದೂರು ನೀಡಲಾಗಿಲ್ಲ.