Advertisement

ಟಿ20 ವಿಶ್ವಕಪ್‌: ಕನಸೆಂಬೋ ಕುದುರೆಯನೇರಿ 

10:23 PM Oct 20, 2022 | Team Udayavani |

2021ರಂದು ಯುಎಇಯಲ್ಲಿ ಭಾರತದ ಆತಿಥ್ಯದಲ್ಲೇ ಟಿ20 ವಿಶ್ವಕಪ್‌ ನಡೆದಿತ್ತು. ಅಲ್ಲಿ ಗುಂಪುಹಂತದಲ್ಲೇ ಭಾರತ ಹೊರಬಿತ್ತು. ಅಲ್ಲಿಗೆ ವಿರಾಟ್‌ ಕೊಹ್ಲಿ ಟಿ20 ನಾಯಕತ್ವವೂ ಕೊನೆಯಾಯಿತು. ಅನಂತರ ರೋಹಿತ್‌ ಶರ್ಮ ಪಟ್ಟಕ್ಕೇರಿದರು. ಅಲ್ಲಿಂದ ಇಲ್ಲಿಯವರೆಗೆ ಭಾರತ 35 ಟಿ20 ಪಂದ್ಯವಾಡಿದೆ. 26 ಗೆಲುವು, 8 ಸೋಲುಗಳನ್ನು ಅನುಭವಿಸಿದೆ. ಅಲ್ಲಿಗೆ ಭಾರತದ ದಾಖಲೆ ಉತ್ತಮವೇ ಇದೆ. ಒಂದು ಕ್ರಿಕೆಟ್‌ ವರ್ಷದಲ್ಲಿ ಗರಿಷ್ಠ ಗೆಲುವು ಸಾಧಿಸಿದ ದಾಖಲೆಯೂ ಜೊತೆಗಿದೆ. ಇಂತಹ ಬಲವಾದ ದಾಖಲೆಯನ್ನಿಟ್ಟುಕೊಂಡು ಅ.23ರಿಂದ ಮೆಲ್ಬರ್ನ್ನಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಅಭಿಯಾನ ಆರಂಭಿಸಲಿದೆ. ಆದರೆ ಪರಿಸ್ಥಿತಿ ನಾವಂದುಕೊಂಡಷ್ಟು ಭಾರತದ ಪರವಾಗಿಲ್ಲ. ತಂಡ ಕಪ್‌ ಗೆಲ್ಲುವ ಅವಕಾಶ ಶೇ.50:50 ಎಂದಷ್ಟೇ ಹೇಳಬಹುದು. ಈ ಹಿನ್ನೆಲೆಯಲ್ಲಿ ತಂಡದ ಶಕ್ತಿ ದೌರ್ಬಲ್ಯಗಳ ವಿಶ್ಲೇಷಣೆ ಇಲ್ಲಿದೆ.

Advertisement

ಹೊಸರೂಪದಲ್ಲಿದೆ ಭಾರತ ತಂಡ :

ಕಳೆದ ವರ್ಷ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿದಿತ್ತು. ಅದು ಕೊಹ್ಲಿಗೆ ನಾಯಕನಾಗಿ ಕಡೆಕಡೆಯ ದಿನಗಳು, ಅದಾಗಲೇ ಅವರು ವಿಶ್ವಕಪ್‌ ನಂತರ ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದರು. ಅದೇ ಸಮಯದಲ್ಲಿ ರಾಹುಲ್‌ ದ್ರಾವಿಡ್‌ ತಂಡದ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆ ವಿಶ್ವಕಪ್‌ ಮುಗಿದ ಬಳಿಕ ರಾಹುಲ್‌ ದ್ರಾವಿಡ್‌-ರೋಹಿತ್‌ ಶರ್ಮ ಜೊತೆಯಾಟ ಶುರುವಾಯಿತು. ಈ ಜೋಡಿಯಿನ್ನೂ ಅದ್ಭುತ ಅನ್ನುವಂತಹ ಯಾವುದೇ ನೆನಪುಗಳನ್ನು ಕೊಟ್ಟಿಲ್ಲ. ಈ ವಿಶ್ವಕಪ್‌ ಗೆಲುವು ಅಂತಹದ್ದೊಂದು ದಾಖಲೆ ನಿರ್ಮಿಸಬಹುದು.

ಶಕ್ತಿಗಳೇನು? :

ಲಯಕ್ಕೆ ಮರಳಿದ್ದಾರೆ ಕೊಹ್ಲಿ :

Advertisement

ವಿರಾಟ್‌ ಕೊಹ್ಲಿ ತಮ್ಮ ಬ್ಯಾಟಿಂಗ್‌ ಮೂಲಕ ವಿಶ್ವ ಕ್ರಿಕೆಟನ್ನು ಆಳಿದ್ದ ಆಟಗಾರ. ದುರದೃಷ್ಟವಶಾತ್‌ ಕಳೆದ ಒಂದು ವರ್ಷದಲ್ಲಿ ತೀವ್ರ ರನ್‌ ಬರಗಾಲ ಎದುರಿಸಿದ್ದರು. ಅದೃಷ್ಟವಶಾತ್‌ ವಿಶ್ವಕಪ್‌ ಆರಂಭದ ಹೊತ್ತಿನಲ್ಲಿ ಅವರು ಲಯಕ್ಕೆ ಮರಳಿದ್ದಾರೆ. ಈ ಕೂಟದಲ್ಲಿ ಅವರ ನೈಜ ಸಾಮರ್ಥ್ಯ ಪ್ರಕಟವಾದರೆ ಭಾರತ ನಿಶ್ಚಿಂತ.

ರೋಹಿತ್‌-ರಾಹುಲ್‌ :

ನಾಯಕ ರೋಹಿತ್‌ ಶರ್ಮ, ಉಪನಾಯಕ ಕೆ.ಎಲ್‌.ರಾಹುಲ್‌ ಅದ್ಭುತ ಬ್ಯಾಟಿಗರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ  ಪೂರಕವಾಗಿ ಅವರಿಬ್ಬರು ಬ್ಯಾಟಿಂಗ್‌ ಕೂಡ ಮಾಡುತ್ತಿದ್ದಾರೆ. ಈ ಇಬ್ಬರು ಹಿಂದಿನ ಚೈತನ್ಯ ತೋರುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ಚಿಂತೆಯಂತೂ ಇಲ್ಲ.

ಸೂರ್ಯಕುಮಾರ್‌ ಎಂಬ ಭರವಸೆ : 

ವಿಶ್ವ ಟಿ20ಯ ನಂ.2 ಬ್ಯಾಟಿಗ ಸೂರ್ಯಕುಮಾರ್‌ ಯಾದವ್‌ ಪ್ರಸ್ತುತ ಅದ್ಭುತ ಲಯದಲ್ಲಿದ್ದಾರೆ. ಕೈಹಿಡಿಯುತ್ತಾರೆ ಎಂದು ಖಚಿತವಾಗಿ ಹೇಳಬಹುದಾದ ಭಾರತದ ಬ್ಯಾಟರ್‌ ಇವರೊಬ್ಬರೇ. ಇವರು ಸಾಮರ್ಥ್ಯಕ್ಕೆ ತಕ್ಕಂತೆ ಸಿಡಿಯುವುದು ಮುಖ್ಯ.

ಕಾರ್ತಿಕ್‌ ಫಿನಿಶಿಂಗ್‌ :

ಕೆಲವೇ ಎಸೆತಗಳಲ್ಲಿ ಗರಿಷ್ಠ ರನ್‌ ಬೇಕಿದ್ದಾಗ ಕ್ರೀಸ್‌ಗೆ ಬರುವ ದಿನೇಶ್‌ ಕಾರ್ತಿಕ್‌, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಅತ್ಯುತ್ತಮ ಫಿನಿಶರ್‌ ಅನಿಸಿಕೊಂಡಿದ್ದಾರೆ.

ಹಾರ್ದಿಕ್‌ ಆಲ್‌ರೌಂಡ್‌ ಆಟ

ಹಾರ್ದಿಕ್‌ ಪಾಂಡ್ಯ ಬ್ಯಾಟರ್‌ ಆಗಿ, ಬೌಲರ್‌ ಆಗಿ ಯಾವುದೇ ತಂಡಕ್ಕೂ ಒಂದು ಆಸ್ತಿ. ಈ ಬಾರಿ ಅವರು ಉತ್ತಮ ಲಯದಲ್ಲಿದ್ದಾರೆ. ತಂಡ ಅವರಿಂದ ನಿರೀಕ್ಷೆ ಹೊಂದಿದೆ.

ಆಲ್‌ರೌಂಡರ್‌ಗಳ ಕೊರತೆ  :

ತಂಡದಲ್ಲಿ ಹಾರ್ದಿಕ್‌ ಪಾಂಡ್ಯ ಇದ್ದಾರೆ ನಿಜ, ಅವರಂತಹ ಇನ್ನೊಬ್ಬ ಆಲ್‌ರೌಂಡರ್‌ ಇಲ್ಲ. ರವೀಂದ್ರ ಜಡೇಜ ಕೂಡ ಗಾಯದಿಂದ ಹೊರಬಿದ್ದಿದ್ದಾರೆ. ಹೀಗಿರುವಾಗ ತಂಡದ ಸಮತೋಲನಕ್ಕೆ ಕಾರಣವಾಗಬಲ್ಲ ಮತ್ತೂಬ್ಬ ಆಲ್‌ರೌಂಡರ್‌ ಇಲ್ಲದಿರುವುದು ಸಮಸ್ಯೆಯಾಗಿದೆ,

2007, ಸೆ.11- 24 :

ಆತಿಥೇಯ ದೇಶ               :               ದ.ಆಫ್ರಿಕಾ

ವಿಜೇತ ತಂಡ    :               ಭಾರತ

ದ್ವಿತೀಯ ಸ್ಥಾನಿ :               ಪಾಕಿಸ್ತಾನ

ದ.ಆಫ್ರಿಕಾದಲ್ಲಿ ಮೊದಲ ಕೂಟ ನಡೆಯಿತು. ಕೆಲವೇ ತಿಂಗಳ ಹಿಂದೆ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಹೀನಾಯ ಸೋಲನುಭವಿಸಿತ್ತು. ಇಂತಹ ಹೊತ್ತಿನಲ್ಲಿ ಬಿಸಿಸಿಐಗೆ ತಂಡ ಕಳುಹಿಸುವ ಮನಸ್ಸೂ ಇರಲಿಲ್ಲ ಎಂಬ ವರದಿಗಳಿವೆ. ಆ ಕೂಟದಿಂದ ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌ ತಾವಾಗಿಯೇ ಹಿಂದೆ ಸರಿದಿದ್ದರು. ಎಂ.ಎಸ್‌.ಧೋನಿ ನಾಯಕತ್ವದಲ್ಲಿ ತೆರಳಿದ ಭಾರತದ ಯುವಪಡೆ ಇತಿಹಾಸ ನಿರ್ಮಿಸಿ ಚಾಂಪಿಯನ್‌ ಆಯಿತು.

2009, ಜೂ.5  – 21 :

ಆತಿಥೇಯ ದೇಶ   :           ಇಂಗ್ಲೆಂಡ್‌

ವಿಜೇತ ತಂಡ    :              ಪಾಕಿಸ್ತಾನ

ದ್ವಿತೀಯ ಸ್ಥಾನಿ :              ಶ್ರೀಲಂಕಾ

2007ರ ಮೊದಲ ಕೂಟದಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದ ಭಾರತ ಇಲ್ಲಿ ಸೆಮಿಫೈನಲ್‌ಗೇರಲೂ ಆಗಲಿಲ್ಲ. ಮೊದಲ ಕೂಟದಲ್ಲಿ ರನ್ನರ್‌ ಅಪ್‌ ಆಗಿದ್ದ ಪಾಕಿಸ್ತಾನ, ಇಲ್ಲಿ ಕಿರೀಟ ಧರಿಸಿತು.

2010, ಏ.30 - ಮೇ 16 :

ಆತಿಥೇಯ ದೇಶ  :             ವೆಸ್ಟ್‌ ಇಂಡೀಸ್‌

ವಿಜೇತ ತಂಡ    :               ಇಂಗ್ಲೆಂಡ್‌

ದ್ವಿತೀಯ ಸ್ಥಾನಿ :              ಆಸ್ಟ್ರೇಲಿಯ

ಭಾರತ ಈ ಕೂಟದಲ್ಲೂ ಸೆಮಿಫೈನಲ್‌ಗೇರಲಿಲ್ಲ. ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಗಳ ನಡುವೆ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್‌ ಚಾಂಪಿಯನ್‌ ಆಯಿತು. ಕ್ರಿಕೆಟ್‌ ಜನಕ ಇಂಗ್ಲೆಂಡ್‌ ತನ್ನ ಇತಿಹಾಸದಲ್ಲಿ ಗೆದ್ದ ಮೊದಲ ವಿಶ್ವಕಪ್‌ ಇದು.

2012, ಸೆ.18 -ಅ.7 :

ಆತಿಥೇಯ ದೇಶ :              ಶ್ರೀಲಂಕಾ

ವಿಜೇತ ತಂಡ    :               ವೆಸ್ಟ್‌ ಇಂಡೀಸ್‌

ದ್ವಿತೀಯ ಸ್ಥಾನಿ :               ಶ್ರೀಲಂಕಾ

ವಿಶೇಷವೆಂದರೆ ಈ ಕೂಟದಲ್ಲೂ ಭಾರತ ಸೆಮಿಫೈನಲ್‌ಗೇರಲು ವಿಫ‌ಲವಾಯಿತು. ಆತಿಥೇಯ ಶ್ರೀಲಂಕಾ ಎದುರು ಫೈನಲ್‌ನಲ್ಲಿ ಸೆಣೆಸಿದ ವೆಸ್ಟ್‌ ಇಂಡೀಸ್‌ ಚಾಂಪಿಯನ್‌ ಆಯಿತು. ಇದು ವಿಂಡೀಸ್‌ಗೆ ಒಲಿದ ಮೊದಲ ಟಿ20 ವಿಶ್ವಕಪ್‌.

2014, ಮಾ.16 - ಏ.6 :

2007ರಲ್ಲಿ ಟಿ20 ವಿಶ್ವಕಪ್‌ ಶುರುವಾಯಿತು. ಮೊದಲ ಕೂಟದಲ್ಲಿ ಫೈನಲ್‌ಗೇರಿದ್ದು ಭಾರತ-ಪಾಕಿಸ್ತಾನ. ಪ್ರಶಸ್ತಿ ಗೆದ್ದಿದ್ದು ಭಾರತ. ಅಲ್ಲಿಂದ ಇಲ್ಲಿಯವರೆಗೆ ಭಾರತ ಗೆದ್ದೇ ಇಲ್ಲ. 2014ರಲ್ಲಿ ಫೈನಲ್‌ಗೇರಿತ್ತು, ಆದರೆ ಪ್ರಶಸ್ತಿ ಶ್ರೀಲಂಕಾ ಪಾಲಾಯಿತು. 2016ರಲ್ಲಿ ಭಾರತದಲ್ಲೇ ಕೂಟ ನಡೆದಿದ್ದರೂ ಫೈನಲ್‌ಗೇರಲೂ ಆಗಲಿಲ್ಲ.

2016, ಮಾ.8 - ಏ.3 :

ಆತಿಥೇಯ ದೇಶ  :            ಭಾರತ

ವಿಜೇತ ತಂಡ    :               ವೆಸ್ಟ್‌ ಇಂಡೀಸ್‌

ದ್ವಿತೀಯ ಸ್ಥಾನಿ :              ಇಂಗ್ಲೆಂಡ್‌

ತನ್ನದೇ ನೆಲದಲ್ಲಿ ನಡೆದಿದ್ದ ಕೂಟದಲ್ಲಿ ಭಾರತ ಸ್ಪಷ್ಟವಾಗಿ ಮೆಚ್ಚಿನ ತಂಡವಾಗಿತ್ತು. ಆದರೆ ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ವಿಂಡೀಸ್‌ ಫೈನಲ್‌ಗೆ ನೆಗೆಯಿತು. ಇಂಗ್ಲೆಂಡ್‌ ತಂಡವನ್ನು ಸೋಲಿಸಿದ ವಿಂಡೀಸ್‌ 2ನೇ ಬಾರಿಗೆ ಚಾಂಪಿಯನ್‌ ಆಯಿತು. ಈ ಕೂಟದಿಂದಲೇ ಕಾರ್ಲೋಸ್‌ ಬ್ರಾಥ್‌ವೇಟ್‌ ಎಂಬ ಕ್ರಿಕೆಟರ್‌ ಸೂಪರ್‌ಸ್ಟಾರ್‌ ಆಗಿದ್ದು.

ಒಂದೇ ವರ್ಷದಲ್ಲಿ 2ನೇ ಟಿ20 ವಿಶ್ವಕಪ್‌! :

2021ರಲ್ಲಿ ಟಿ20 ವಿಶ್ವಕಪ್‌ ಫೈನಲ್‌ ನಡೆದಿದ್ದು ನ.14ರಂದು. ಅಲ್ಲಿ ಆಸ್ಟ್ರೇಲಿಯ ಚಾಂಪಿಯನ್‌ ಆಗಿತ್ತು. ಈ ಬಾರಿ ಅ.16ರಿಂದ ಮೊದಲಹಂತದ ಪಂದ್ಯಗಳು ಆರಂಭವಾಗಿವೆ. ಅ.22ರಿಂದ ಸೂಪರ್‌ 12 ಹಂತ ಆರಂಭ. ನ.13ಕ್ಕೆ ಫೈನಲ್‌ ನಡೆಯಲಿದೆ. ಅರ್ಥಾತ್‌ ಒಂದೇ ವರ್ಷದ ಅಂತರದಲ್ಲಿ 2ನೇ ಬಾರಿಗೆ ವಿಶ್ವಕಪ್‌ ನಡೆಯುತ್ತಿದೆ. ವಿಚಿತ್ರವೆಂದರೆ ಕಳೆದವರ್ಷಕ್ಕೂ ಮುನ್ನ ಐದು ವರ್ಷಗಳ ಹಿಂದೆ 2016ರಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್‌ ನಡೆದಿತ್ತು!

2021, ಅ.17 - ನ.14 :

ಆತಿಥೇಯ ದೇಶ  :             ಯುಎಇ, ಓಮನ್‌

ವಿಜೇತ ತಂಡ    :               ಆಸ್ಟ್ರೇಲಿಯ

ದ್ವಿತೀಯ ಸ್ಥಾನಿ :              ನ್ಯೂಜಿಲೆಂಡ್‌

ವಸ್ತುಸ್ಥಿತಿಯಲ್ಲಿ ಈ ಕೂಟ ಭಾರತದಲ್ಲಿ ನಡೆಯಬೇಕಿತ್ತು. ಇಲ್ಲಿ ಕೊರೊನಾ ತೀವ್ರವಾಗಿದ್ದರಿಂದ ಯುಎಇಗೆ ಸ್ಥಳಾಂತರ ವಾಯಿತು. ಆದರೂ ಕೂಟವನ್ನು ಆಯೋಜಿಸಿದ್ದು ಭಾರತವೇ. ಇಲ್ಲಿ ಆಸ್ಟ್ರೇಲಿಯ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿತು. ಕಿವೀಸ್‌ಗಿದು ಮೊದಲ ಫೈನಲ್‌.

 

-ಕೆ. ಪೃಥ್ವಿಜಿತ್‌

Advertisement

Udayavani is now on Telegram. Click here to join our channel and stay updated with the latest news.

Next