Advertisement

T20 World Cup,ಭಾರತ-ಅಫ್ಘಾನಿಸ್ಥಾನ ಕ್ರಿಕೆಟ್‌ ಕದನ

11:54 PM Jun 19, 2024 | Team Udayavani |

ಬ್ರಿಜ್‌ಟೌನ್‌ (ಬಾರ್ಬಡಾಸ್‌): ಟಿ20 ವಿಶ್ವಕಪ್‌ ಲೀಗ್‌ ಹಂತದಲ್ಲಿ ಅಜೇಯ ಪ್ರದರ್ಶನ ಕಾಯ್ದುಕೊಂಡು ಬಂದ ಟೀಮ್‌ ಇಂಡಿಯಾ ಈಗ ಸೂಪರ್‌-8 ಸಮರಕ್ಕೆ ಸಜ್ಜುಗೊಂಡಿದೆ.

Advertisement

ಗುರುವಾರ ಇಲ್ಲಿನ “ಕೆನ್ಸಿಂಗ್ಟನ್‌ ಓವಲ್‌’ನಲ್ಲಿ ಅಪಾಯಕಾರಿ ಅಫ್ಘಾನಿಸ್ಥಾನ ವಿರುದ್ಧ ಸೆಣಸಲಿದೆ. ಅನಂತರದ ದಿನಗಳಲ್ಲಿ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯ ವಿರುದ್ಧ ಆಡಬೇಕಿದೆ.

“ಎ’ ವಿಭಾಗದಲ್ಲಿ ಆಡಿದ್ದ ರೋಹಿತ್‌ ಪಡೆ, ಐರ್ಲೆಂಡ್‌, ಪಾಕಿಸ್ಥಾನ ಮತ್ತು ಅಮೆರಿಕವನ್ನು ಮಣಿಸಿ ಮೆರೆದಾಡಿತ್ತು. ಆದರೆ ಕೆನಡಾ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲಿ ಆಡಿದ ಟೀಮ್‌ ಇಂಡಿಯಾ, ಸೂಪರ್‌-8 ಪಂದ್ಯಗಳನ್ನೆಲ್ಲ ವೆಸ್ಟ್‌ ಇಂಡೀಸ್‌ ಟ್ರ್ಯಾಕ್‌ಗಳಲ್ಲಿ ಆಡಲಿದೆ.

“ಸೂಪರ್‌-8′ ಡಿಫ‌ರೆಂಟ್‌ ಬಾಲ್‌ ಗೇಮ್‌. ಇಲ್ಲಿಯ ತನಕ ಬೌಲರ್‌ಗಳ ಮೇಲಾಟ, ಬ್ಯಾಟರ್‌ಗಳ ಪರದಾಟ, ಲೋ ಸ್ಕೋರ್‌ ಪಂದ್ಯಗಳಿಂದ ಸ್ಪರ್ಧೆಗಳೆಲ್ಲ ತುಸು ನೀರಸವಾಗಿದ್ದವು. ಐಪಿಎಲ್‌ನಲ್ಲಿ ರನ್‌ ಪರ್ವತ ಕಂಡವರಿಗೆ ವಿಶ್ವಕಪ್‌ನಲ್ಲಿ ಈ ರೋಮಾಂಚನ ಕಂಡುಬಂದಿರಲಿಲ್ಲ. ವೆಸ್ಟ್‌ ಇಂಡೀಸ್‌ ಟ್ರ್ಯಾಕ್‌ಗಳು ರನ್‌ ಬರಗಾಲಕ್ಕೆ ಮುಕ್ತಿ ನೀಡಬಹುದೆಂಬ ನಿರೀಕ್ಷೆ ಇದೆ. ಆದರೆ ಸರಾಸರಿ ಮೊತ್ತ 160-165ರ ಗಡಿ ದಾಟುವುದು ಅನುಮಾನ.

ಕಾಂಬಿನೇಶನ್‌ ಸಮಸ್ಯೆ
ಭಾರತ ಲೀಗ್‌ ಹಂತದಲ್ಲಿ ಅಜೇಯವಾಗಿ ಟೇಬಲ್‌ ಟಾಪರ್‌ ಎನಿಸಿದರೂ ಕೆಲವು ಸಮಸ್ಯೆ ಗಳಿಂದ ಮುಕ್ತವಾಗಿಲ್ಲ. ಇವುಗಳಲ್ಲಿ ಮುಖ್ಯ ವಾದುದು ತಂಡದ ಕಾಂಬಿನೇಶನ್‌. ಆರಂಭಿಕನಾಗಿ ಬರುತ್ತಿರುವ ವಿರಾಟ್‌ ಕೊಹ್ಲಿ ಇನ್ನೂ ಬ್ಯಾಟಿಂಗ್‌ ಲಯಕ್ಕೆ ಮರಳಿಲ್ಲ. 3 ಪಂದ್ಯಗಳಲ್ಲಿ ಕೊಹ್ಲಿ ಗಳಿಕೆ 10 ರನ್‌ ಕೂಡ ಆಗಿಲ್ಲ. ಹಾಗೆಯೇ ತಂಡದ ಯಶಸ್ಸಿನಲ್ಲಿ ಶಿವಂ ದುಬೆ, ರವೀಂದ್ರ ಜಡೇಜ, ಮೊಹಮ್ಮದ್‌ ಸಿರಾಜ್‌ ಅವರ ಕೊಡುಗೆ ಕೂಡ ನಿರೀಕ್ಷಿತ ಮಟ್ಟದಲ್ಲಿಲ್ಲ. ಹಾರ್ದಿಕ್‌ ಪಾಂಡ್ಯ ಕೂಡ ಬ್ಯಾಟಿಂಗ್‌ನಲ್ಲಿ ಕ್ಲಿಕ್‌ ಆಗದಿದ್ದರೂ ಬೌಲಿಂಗ್‌ನಲ್ಲಿ ಈ ವೈಫ‌ಲ್ಯವನ್ನು ಹೊಡೆದು ಹಾಕಿದ್ದಾರೆ. ಯಶಸ್ವಿ ಜೈಸ್ವಾಲ್‌, ಕುಲದೀಪ್‌ ಯಾದವ್‌, ಸಂಜು ಸ್ಯಾಮ್ಸನ್‌ ಅವರನ್ನು ಇನ್ನೂ ಆಯ್ಕೆಗೆ ಪರಿಗಣಿಸಿಲ್ಲ.

Advertisement

ಕೆನಡಾ ವಿರುದ್ಧದ ಪಂದ್ಯದಲ್ಲಿ ಭಾರತ ತನ್ನ ಮೀಸಲು ಸಾಮರ್ಥ್ಯವನ್ನು ಪರೀಕ್ಷಿಸುತ್ತಿತ್ತೋ ಏನೋ. ಇದಕ್ಕೆ ಮಳೆ ಅವಕಾಶ ಕೊಡಲಿಲ್ಲ. ಸೂಪರ್‌-8 ಸ್ಪರ್ಧೆ ಹೆಚ್ಚು ತೀವ್ರತೆಯನ್ನು ಪಡೆ ಯುವ ಕಾರಣ ಭಾರತವಿಲ್ಲಿ ಭಾರೀ ಬದ ಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಆದರೆ ಚೈನಾಮನ್‌ ಕುಲದೀಪ್‌ ಯಾದವ್‌ ಅವರಿಗೆ ಅವಕಾಶವೊಂದು ಲಭಿಸುವ ಸಾಧ್ಯತೆ ಇದೆ. ಆಗ ಮೊಹಮ್ಮದ್‌ ಸಿರಾಜ್‌ ಅವರನ್ನು ಹೊರಗಿಡಬಹುದು.

ಭಾರತ ತಂಡ ಬ್ರಿಜ್‌ಟೌನ್‌ಗೆ ಬಂದಿಳಿದ ಬಳಿಕ ಎರಡು ಸುತ್ತಿನ ಅಭ್ಯಾಸ ನಡೆಸಿದೆ. ಆಗ, ಕೆನ್ಸಿಂಗ್ಟನ್‌ ಓವಲ್‌ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸುಳಿವು ಸಿಕ್ಕಿದೆ. ಹಾಗೆಯೇ ಪವರ್‌ ಪ್ಲೇಯಲ್ಲಿ ಎಸೆತಗಳು ಸ್ವಿಂಗ್‌ ಆಗುವ ಸಾಧ್ಯತೆಯೂ ಗೋಚರಿಸಿದೆ. ಆಗ ಕುಲದೀಪ್‌ಗೆ ಆಯ್ಕೆಗೆ ದಾರಿ ಸುಗಮಗೊಂಡೀತು.

ಉಳಿದಂತೆ ಬೌಲಿಂಗ್‌ ವಿಭಾಗದಲ್ಲಿ ಬುಮ್ರಾ ಭರ್ಜರಿ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಅರ್ಷದೀಪ್‌ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

ಅಫ್ಘಾನ್‌ ಸಮತೋಲಿತ ತಂಡ
ಅಫ್ಘಾನಿಸ್ಥಾನ ಮೊದಲ 3 ಲೀಗ್‌ ಪಂದ್ಯಗಳಲ್ಲಿ ಬೌಲಿಂಗ್‌ ಆಕ್ರಮಣದ ಮೂಲಕವೇ ಯಶಸ್ಸು ಕಂಡಿತ್ತು. ಆದರೆ ವೆಸ್ಟ್‌ ಇಂಡೀಸ್‌ ವಿರುದ್ಧ ಬೌಲಿಂಗ್‌ ದಿಕ್ಕು ತಪ್ಪಿತು. ಎಡಗೈ ಪೇಸರ್‌ ಫ‌ಜಲ್‌ ಹಕ್‌ ಫಾರೂಖೀ ಪ್ರಧಾನ ಬೌಲಿಂಗ್‌ ಅಸ್ತ್ರ. ಕೂಟದಲ್ಲಿ ಸರ್ವಾಧಿಕ 12 ವಿಕೆಟ್‌ ಉಡಾಯಿಸಿದ ಹೆಗ್ಗಳಿಕೆ ಇವರದು. ಇವರೆದರು ರೋಹಿತ್‌-ಕೊಹ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next