Advertisement

ಜುಲೈನಲ್ಲೂ ಟಿ20 ವಿಶ್ವಕಪ್‌ ಕ್ರಿಕೆಟ್‌ ನಿರ್ಧಾರ ಅನುಮಾನ

11:30 PM Jun 26, 2020 | Sriram |

ಸಿಡ್ನಿ: ಟಿ20 ವಿಶ್ವಕಪ್‌ ಕ್ರಿಕೆಟ್‌ ಆಯೋಜನೆ ಕುರಿತಂತೆ ಎರಡು ಸಲ ಐಸಿಸಿ ಸಭೆ ಸೇರಿ ವಿಫ‌ಲವಾಗಿತ್ತು. ಇದೀಗ ಜುಲೈ ಮೊದಲ ವಾರದಲ್ಲಿ ವೀಡಿಯೊ ಕಾನ್ಫರೆನ್ಸ್‌ ಮೂಲಕ ಐಸಿಸಿ ಮತ್ತೂಮ್ಮೆ ಸಭೆ ನಡೆಸಿ ಅಂತಿಮ ನಿರ್ಣಯಕ್ಕೆ ಬರಲಿದೆ ಎಂದಿದೆ. ಆದರೆ ಆಸೀಸ್‌ ಆತಿಥ್ಯದ ವಿಶ್ವಕಪ್‌ ಕೂಟದ ಕುರಿತು ಅಂತಿಮ ನಿರ್ಧಾರಕ್ಕೆ ಬರುವುದು ಕಷ್ಟ ಎನ್ನುವುದು ಸದ್ಯದ ಸ್ಥಿತಿ.

Advertisement

ವೈರಸ್‌ ತಲೆನೋವು
ಮೇ ಕೊನೆಯ ವಾರದಲ್ಲಿ ಐಸಿಸಿ ಸಭೆ ನಡೆಸಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿತ್ತಾದರೂ ಟಿ20 ವಿಶ್ವಕಪ್‌ ಕುರಿತಂತೆ ಸ್ಪಷ್ಟ ನಿರ್ಧಾರಕ್ಕೆ ಬಂದಿರಲಿಲ್ಲ. ಜೂ. 10ರ ತನಕ ಕಾದು ನೋಡಲು ನಿರ್ಧರಿಸಿತ್ತು. ಆಗಲೂ ಕೋವಿಡ್ 19 ಭೀತಿ ಕಡಿಮೆ ಆಗಿ ರಲಿಲ್ಲ. ಹೀಗಾಗಿ ಜುಲೈನಲ್ಲಿ ಪರಿಸ್ಥಿತಿ ನೋಡಿಕೊಂಡು ಅಂತಿಮ ನಿರ್ಧಾರಕ್ಕೆ ಬರುವುದಾಗಿ ತಿಳಿಸಿತ್ತು.

ಆದರೆ ಈಗಲೂ ಕೋವಿಡ್ 19 ಸೋಂಕಿನ ತೀವ್ರತೆ ಕಡಿಮೆ ಆಗಿಲ್ಲ. ಮೂಲಗಳ ಪ್ರಕಾರ ವಿಶ್ವಕಪ್‌ ಟಿ20 ಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆ ಇದೆ. ಆದರೆ ಭಾರತ 2021ರ ಟಿ20 ವಿಶ್ವಕಪ್‌ ಆತಿಥ್ಯ ವಹಿಸಿದೆ. ಹೀಗಾಗಿ ಗೊಂದಲ ಮುಂದುವರಿಯುವುದರಲ್ಲಿ ಅನುಮಾನವಿಲ್ಲ.

ಅಧ್ಯಕ್ಷರ ಆಯ್ಕೆಗೆ ಒತ್ತು
ನೂತನ ಅಧ್ಯಕ್ಷರ ನೇಮಕವೇ ಮುಂದಿನ ಐಸಿಸಿ ಸಭೆಯ ಪ್ರಮುಖ ಅಂಶವಾಗಿರಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಸ್ಪಷ್ಟಪಡಿಸಿದೆ.

ಸದ್ಯ ಭಾರತೀಯ ಮೂಲದ ಶಶಾಂಕ್‌ ಮನೋಹರ್‌ ಐಸಿಸಿ ಅಧ್ಯಕ್ಷರಾಗಿದ್ದಾರೆ. ಇವರ ಅಧಿಕಾರಾವಧಿ ಈಗಾಗಲೇ ಮುಕ್ತಾಯಗೊಂಡರೂ ಚುನಾವಣೆ ತಡವಾಗಿದ್ದರಿಂದ ಮುಂದಿನ ಅಧ್ಯಕ್ಷರು ನೇಮಕವಾಗುವ ತನಕ ಈ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಮುಂದಿನ ಸಭೆಯಲ್ಲಿ ಐಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗಲಿದೆ. ಹೀಗಿರುವಾಗ ಟಿ20 ವಿಶ್ವಕಪ್‌ ಕುರಿತು ಅಂತಿಮ ನಿರ್ಧಾರಕ್ಕೆ ಬರುವುದು ಅನುಮಾನ ಎನ್ನಲಾಗಿದೆ.

Advertisement

ಐಪಿಎಲ್‌ ದಾರಿ ಸಲೀಸು?
ಒಂದು ವೇಳೆ ಟಿ20 ವಿಶ್ವಕಪ್‌ ರದ್ದುಗೊಂಡರೆ ಅಥವಾ ಮುಂದೂಡಲ್ಪಟ್ಟರೆ ಬಿಸಿಸಿಐ ಐಪಿಎಲ್‌ ಪಂದ್ಯಾವಳಿಯನ್ನು ಆಯೋಜಿಸುವ ನಿರ್ಧಾರಕ್ಕೆ ಬರಬಹುದಾಗಿದೆ. ವೀಕ್ಷಕರನ್ನು ನಿರ್ಬಂಧಿಸಿಯಾದರೂ ಐಪಿಎಲ್‌ ಆಯೋಜಿಸಲು ಬಿಸಿಸಿಐ ತುದಿಗಾಲಲ್ಲಿ ನಿಂತಿದೆ. ಆದರೆ ಭಾರತದಲ್ಲೂ ಕೋವಿಡ್ 19 ಹೆಚ್ಚುತ್ತಿರುವುದರಿಂದ ಐಪಿಎಲ್‌ಗೆ ಅನುಮತಿ ಸಿಗುವುದು ಕಷ್ಟ. ಆಗ ಇದನ್ನು ವಿದೇಶಕ್ಕೆ ಸ್ಥಳಾಂತರಿಸಬೇಕಾಗುತ್ತದೆ. ಇದಕ್ಕೂ ಬಿಸಿಸಿಐ ಸಜ್ಜಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next