ಗಯಾನ: ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ನಂತರ ಭಾರತದ ನಾಯಕ ರೋಹಿತ್ ಶರ್ಮಾ ಟಿ20 ಇತಿಹಾಸದ ಅತ್ಯಂತ ಯಶಸ್ವಿ ನಾಯಕ ಎಂಬ ಸಾಧನೆ ಮಾಡಿದರು.
ಗುರುವಾರದಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 68 ರನ್‌ಗಳಿಂದ ಸೋಲಿಸಿತು. ಅಲ್ಲದೆ ಮೂರನೇ ಸತತ ಐಸಿಸಿ ಫೈನಲ್ ಗೆ ಅರ್ಹತೆ ಪಡೆಯಿತು.
ಈ ಗೆಲುವಿನ ಮೂಲಕ ರೋಹಿತ್ ಶರ್ಮಾ ಅವರು ಟೀಂ ಇಂಡಿಯಾ ನಾಯಕನಾಗಿ 49ನೇ ಗೆಲುವು ಕಂಡರು. ಈ ಮೂಲಕ ಪಾಕಿಸ್ತಾನದ ನಾಯಕ ಬಾಬರ್ ಅಜಂ ದಾಖಲೆ ಮುರಿದರು.
ಬಾಬರ್ ಅವರು ನಾಯಕರಾಗಿ 85 ಪಂದ್ಯಗಳಲ್ಲಿ 48 ಗೆಲುವುಗಳನ್ನು ಹೊಂದಿದ್ದಾರೆ. ಅವರ ಗೆಲುವಿನ ಶೇಕಡಾವಾರು 56.47. ಮತ್ತೊಂದೆಡೆ, ರೋಹಿತ್ 61 ಪಂದ್ಯಗಳಿಂದ 78.68 ಗೆಲುವಿನೊಂದಿಗೆ 49 ಗೆಲುವುಗಳನ್ನು ಹೊಂದಿದ್ದಾರೆ. ಭಾರತದ ನಾಯಕ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದುವರೆಗಿನ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಭಾರತೀಯ ನಾಯಕ ಈ ಕೂಟದಲ್ಲಿ 41.33ರ ಸರಾಸರಿಯಲ್ಲಿ 248 ರನ್ ಗಳಿಸಿದ್ದಾರೆ. ಮೂರು ಅರ್ಧಶತಕ ಬಾರಿಸಿರುವ ರೋಹಿತ್ 155.97ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.
ರೋಹಿತ್ ಶರ್ಮಾ ಅವರು ಟಿ20 ವಿಶ್ವಕಪ್ ನ ಇತಿಹಾಸದಲ್ಲಿ 43 ಇನ್ನಿಂಗ್ಸ್ ಗಳಿಂದ 35.61 ಸರಾಸರಿ ಮತ್ತು 132.78 ಸ್ಟ್ರೈಕ್ ರೇಟ್ ನಲ್ಲಿ 1211 ರನ್ ಗಳಿಸುವ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.