Advertisement

ಪಾಕಿಸ್ಥಾನ-ಅಫ್ಘಾನಿಸ್ಥಾನ: ಸ್ಥಾನಮಾನ ನಿರ್ಧರಿಸುವ ಸೆಣಸಾಟ

10:21 PM Oct 28, 2021 | Team Udayavani |

ದುಬಾೖ: ಟಿ20 ವಿಶ್ವಕಪ್‌ ಕೂಟದ ಅತ್ಯಂತ ನಿರ್ಣಾಯಕ ಸಮರವೊಂದಕ್ಕೆ ಶುಕ್ರವಾರ ದುಬಾೖ ಅಂತಾರಾಷ್ಟ್ರೀಯ ಸ್ಟೇಡಿಯಂ ಸಜ್ಜಾಗಿದೆ. ಇಲ್ಲಿ ಸೆಣಸಲಿರುವ ತಂಡಗಳು ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ. ಇಲ್ಲಿನ ಫಲಿತಾಂಶ ಗ್ರೂಪ್‌ ಎರಡರ ಸ್ಥಾನಮಾನ ನಿರ್ಧರಿಸಲಿರುವ ಕಾರಣ ಇಲ್ಲಿನ ಎಲ್ಲ ತಂಡಗಳಿಗೂ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ.

Advertisement

ಈಗಿನ ಸ್ಥಿತಿ ಹೇಗಿದೆಯೆಂದರೆ, ಪಾಕಿಸ್ಥಾನ ಎರಡು ದೊಡ್ಡ ಬೇಟೆಯ ಮೂಲಕ 4 ಅಂಕ ಗಳಿಸಿ ಅಗ್ರಸ್ಥಾನ ಅಲಂಕರಿಸಿದೆ. ಅದು ದೊಡ್ಡ ಹಾಗೂ ಅಪಾಯಕಾರಿ ತಂಡಗಳಾದ ಭಾರತ ಮತ್ತು ನ್ಯೂಜಿಲ್ಯಾಂಡನ್ನು ಆರಂಭದಲ್ಲೇ ಮಣಿಸಿ ನಿರಾಳವಾಗಿದೆ. ಈ ತಂಡಗಳಿಗೆ ಹೋಲಿಸಿದರೆ ಬಾಬರ್‌ ಆಜಂ ಪಡೆಯ ಉಳಿದ ಎದುರಾಳಿಗಳು ದುರ್ಬಲ. ಅಫ್ಘಾನ್‌ಗೂ ಆಘಾತವಿಕ್ಕಿ ಹ್ಯಾಟ್ರಿಕ್‌ ಜಯ ಸಾಧಿಸಿದರೆ ಪಾಕಿಸ್ಥಾನದ ಸೆಮಿಫೈನಲ್‌ ಪ್ರವೇಶ ಬಹುತೇಕ ಪಕ್ಕಾ! ನಮೀಬಿಯಾ, ಸ್ಕಾಟ್ಲೆಂಡ್‌ ವಿರುದ್ಧ ಅದು ಗೆಲ್ಲುವುದರಲ್ಲಿ ಅನುಮಾನವಿಲ್ಲ. ಅಜೇಯವಾಗಿಯೇ ನಾಕೌಟ್‌ ಪ್ರವೇಶಿಸುವ ಅದೃಷ್ಟ ಒಲಿಯಲೂಬಹುದು.

ಅಫ್ಘಾನ್‌ಗೂ ಅವಕಾಶ :

ಈ ಕೂಟದ ಡಾರ್ಕ್‌ ಹಾರ್ಸ್‌ ಆಗಿರುವ ಅಫ್ಘಾನಿಸ್ಥಾನ ಆಡಿದ ಏಕೈಕ ಪಂದ್ಯದಲ್ಲಿ ಸ್ಕಾಟ್ಲೆಂಡ್‌ಗೆ ಭರ್ಜರಿ ಸೋಲುಣಿಸಿದೆ. ರನ್‌ರೇಟ್‌ ಆರರ ಗಡಿ ದಾಟಿರುವುದು ನಬಿ ಪಡೆಯ ಪಾಲಿಗೊಂದು ವರದಾನ. ಅಕಸ್ಮಾತ್‌ ಪಾಕಿಸ್ಥಾನ ವಿರುದ್ಧ ಅಫ್ಘಾನ್‌ ಜಯಭೇರಿ ಮೊಳಗಿಸಿದ್ದೇ ಆದಲ್ಲಿ ಅದು ಕೂಡ ನಾಕೌಟ್‌ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲಿದೆ!

ಆಗ ಗಂಡಾಂತರ ಎದುರಾಗುವುದು ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳಿಗೆ. ಹೀಗಾಗಿ ಇತ್ತಂಡಗಳ ರವಿವಾರದ ಮುಖಾಮುಖೀಯಲ್ಲಿ ಗೆದ್ದವರಷ್ಟೇ ರೇಸ್‌ನಲ್ಲಿರಲಿದ್ದಾರೆ ಎಂಬುದು ಸದ್ಯದ ಲೆಕ್ಕಾಚಾರ.

Advertisement

ಫಾಸ್ಟ್‌ ವರ್ಸಸ್‌ ಸ್ಪಿನ್‌:

ಇನ್ನು ಪಾಕ್‌-ಅಫ್ಘಾನ್‌ ಪಂದ್ಯಗಳ ವಿಷಯ. ಎರಡೂ ತಂಡಗಳಿಗೆ ಯುಎಇ ಎಂಬುದು ಎರಡನೇ ತವರು. ಇತ್ತಂಡಗಳ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠವಾಗಿಯೇ ಇದೆ. ಬೌಲಿಂಗ್‌ನಲ್ಲಿ ಪಾಕಿಸ್ಥಾನ ವೇಗಿಗಳನ್ನು ನೆಚ್ಚಿಕೊಂಡಿದೆ. ಅಫ್ಘಾನಿಸ್ಥಾನದ ಸ್ಪಿನ್‌ ನಿಸ್ಸಂಶಯವಾಗಿಯೂ ವಿಶ್ವ ದರ್ಜೆಯದ್ದು. ರಶೀದ್‌ ಖಾನ್‌, ಮುಜೀಬ್‌ ಉರ್‌ ರೆಹಮಾನ್‌ ಪ್ರಬಲ ಸ್ಪಿನ್‌ ಅಸ್ತ್ರಗಳಾಗಿದ್ದಾರೆ. ಹೀಗಾಗಿ ಇದು ಫಾಸ್ಟ್‌ ವರ್ಸಸ್‌ ಸ್ಪಿನ್‌ ಮೇಲಾಟವಾಗುವುದು ನಿಶ್ಚಿತ.

ಭಾರತವನ್ನು 10 ವಿಕೆಟ್‌ಗಳಿಂದ ಮಣಿಸಿದ ಪಾಕ್‌, ಅನಂತರ ಕಿವೀಸ್‌ ಎದುರು ಚೇಸ್‌ ಮಾಡುವಾಗ ಆತಂಕದ ಕ್ಷಣಗಳನ್ನೆದುರಿಸಿದ್ದು ಸುಳ್ಳಲ್ಲ. ತಂಡದ 5 ವಿಕೆಟ್‌ ಬೇಗನೇ ಉರುಳಿತ್ತು. ಹೀಗಾಗಿ ಪಾಕ್‌ ಪಾಲಿಗೆ ಅಫ್ಘಾನ್‌ ಸವಾಲು ಖಂಡಿತ ಸುಲಭದ್ದಲ್ಲ.

ಪಾಕ್‌ನ ವೇಗದ ದಾಳಿಯನ್ನು ಅಫ್ಘಾನ್‌ ಎದುರಿಸಿ ನಿಂತರೆ,  ಅಫ್ಘಾನ್‌ನ ಸ್ಪಿನ್‌ ಆಕ್ರಮಣವನ್ನು ಪಾಕ್‌ ತಡೆದು ನಿಂತರೆ ಈ ಸೆಣಸಾಟ ಖಂಡಿತ ರೋಚಕವಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next