ಪರ್ತ್: ಆಸ್ಟ್ರೇಲಿಯ ತಂಡದ ಸ್ಟಾರ್ ಸ್ಪಿನ್ನರ್ ಆ್ಯಡಂ ಝಂಪ ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಂಡದಿಂದ ಹೊರಗುಳಿದರು.
ಝಂಪ ಅವರಿಗೆ ಕೋವಿಡ್ ಸೋಂಕಿನ ಲಕ್ಷಣಗಳು ಗಂಭೀರವಾಗಿಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಹೊರಗಿಡಲು ಹಾಲಿ ಚಾಂಪಿಯನ್ ನಿರ್ಧರಿಸಿದೆ. ಝಂಪ ಹುಷಾರಾಗಿದ್ದಾರೆ.
ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ನಾಲ್ಕು ಪಂದ್ಯಗಳು ಇರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಹೊರಗಿಡಲಾಯಿತು ಎಂಧು ವೇಗಿ ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮದಂತೆ ಆಟಗಾರರಿಗೆ ಕೋವಿಡ್ ಸೋಂಕು ದೃಢಪಟ್ಟರೂ ಅವರು ಪಂದ್ಯಗಳಲ್ಲಿ ಭಾಗವಹಿಸಬಹುದು. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೋವಿಡ್ ದೃಢಪಟ್ಟ ಐರ್ಲೆಂಡಿನ ಜಾರ್ಜ್ ಡಾಕ್ರೆಲ್ ಆಡಿದ್ದರು.
ಝಂಪ ಬದಲಿಗೆ ಆಸ್ಟ್ರೇಲಿಯ ತಂಡವು ಆಸ್ಟನ್ ಅಗರ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿತ್ತು. ಅಗರ್ ಕಳೆದ ಟಿ20 ವಿಶ್ವಕಪ್‌ನಲ್ಲಿ ಕೇವಲ ಒಂದು ಪಂದ್ಯವನ್ನಾಡಿದ್ದರು.