Advertisement

T20 Worldcup: ಭಾರತದ ವೇಗಕ್ಕೆ ಐರ್ಲೆಂಡ್‌ ಪಲ್ಟಿ

11:43 PM Jun 05, 2024 | Team Udayavani |

ನ್ಯೂಯಾರ್ಕ್‌: ಭಾರತ ತನ್ನ ಟಿ20 ವಿಶ್ವಕಪ್‌ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ. ಬುಧವಾರದ ಮೊದಲ ಲೀಗ್‌ ಮುಖಾಮುಖೀಯಲ್ಲಿ ಐರ್ಲೆಂಡ್‌ಗೆ ವೇಗದ ಎಸೆತಗಳ ರುಚಿ ತೋರಿಸಿ 8 ವಿಕೆಟ್‌ಗಳ ಜಯ ಸಾಧಿಸಿದೆ.

Advertisement

ಐರ್ಲೆಂಡ್‌ 16 ಓವರ್‌ಗಳಲ್ಲಿ 96 ರನ್ನಿಗೆ ಕುಸಿದರೆ, ಭಾರತ 12.2 ಓವರ್‌ಗಳಲ್ಲಿ 2 ವಿಕೆಟಿಗೆ 97 ರನ್‌ ಬಾರಿಸಿತು. ಭಾರತವಿನ್ನು ರವಿವಾರ ಪಾಕಿಸ್ಥಾನವನ್ನು ಎದುರಿಸಲಿದೆ.

ಚೇಸಿಂಗ್‌ ವೇಳೆ ರೋಹಿತ್‌ ಶರ್ಮ 37 ಎಸೆತಗಳಿಂದ 52 ರನ್‌ ಮಾಡಿದರು (4 ಬೌಂಡರಿ, 3 ಸಿಕ್ಸರ್‌). ಈ ಸಂದರ್ಭದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 4 ಸಾವಿರ ರನ್‌ ಪೂರ್ತಿಗೊಳಿಸಿದರು. ಅವರು ಎಲ್ಲ 3 ಮಾದರಿಗಳಲ್ಲೂ 4 ಸಾವಿರ ರನ್‌ ಬಾರಿಸಿದ ಕೇವಲ 2ನೇ ಕ್ರಿಕೆಟಿಗ. ವಿರಾಟ್‌ ಕೊಹ್ಲಿ ಮೊದಲಿಗ.
ಅರ್ಷದೀಪ್‌ ತಮ್ಮ ಮೊದಲ ಓವರ್‌ನಲ್ಲೇ ಆರಂಭಿಕರಿಬ್ಬರನ್ನೂ ಪೆವಿಲಿಯನ್‌ಗೆ ಅಟ್ಟಿ ಐರ್ಲೆಂಡ್‌ಗೆ ಬಲವಾದ ಆಘಾತವಿಕ್ಕಿದರು. ಮೊದಲ ಎಸೆತದಲ್ಲಿ ನಾಯಕ ಪಾಲ್‌ ಸ್ಟರ್ಲಿಂಗ್‌ ವಿಕೆಟ್‌ (2) ವಿಕೆಟ್‌ ಹಾರಿಸಿದರೆ, ಅಂತಿಮ ಎಸೆತದಲ್ಲಿ ಆ್ಯಂಡ್ರೂé ಬಾಲ್ಬಿರ್ನಿ (5) ಅವರನ್ನು ಬೌಲ್ಡ್‌ ಮಾಡಿದರು. 9 ರನ್ನಿಗೆ 2 ವಿಕೆಟ್‌ ಕಳೆದುಕೊಂಡ ಸಂಕಟ ಐರ್ಲೆಂಡ್‌ನ‌ದ್ದಾಯಿತು.

ಪವರ್‌ ಪ್ಲೇಯಲ್ಲಿ ಐರ್ಲೆಂಡ್‌ 2 ವಿಕೆಟಿಗೆ 26 ರನ್‌ ಮಾಡಿತು. ಇದು ಟಿ20 ವಿಶ್ವಕಪ್‌ನ ಮೊದಲ 6 ಓವರ್‌ಗಳಲ್ಲಿ ಐರ್ಲೆಂಡ್‌ ದಾಖಲಿಸಿದ ಕನಿಷ್ಠ ಗಳಿಕೆ. 2012ರ ಆಸ್ಟ್ರೇಲಿಯ ಎದುರಿನ ಕೊಲಂಬೊ ಪಂದ್ಯದಲ್ಲಿ 3 ವಿಕೆಟಿಗೆ 29 ರನ್‌ ಗಳಿಸಿದ್ದು ಈವರೆಗಿನ ಕಡಿಮೆ ಸ್ಕೋರ್‌ ಆಗಿತ್ತು.

ಈ ಕುಸಿತದಿಂದ ಚೇತರಿಸಿಕೊಳ್ಳಲು ಐರ್ಲೆಂಡ್‌ಗೆ ಸಾಧ್ಯವಾಗಲೇ ಇಲ್ಲ. ಅರ್ಷದೀಪ್‌ ಬಳಿಕ ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ಆಕ್ರಮಣ ತೀವ್ರಗೊಂಡಿತು. ಜತೆಗೆ ಬುಮ್ರಾ ಮತ್ತು ಸಿರಾಜ್‌ ಕೂಡ ಸಾಥ್‌ ನೀಡಿದರು. ಭಾರತದ ವೇಗಕ್ಕೆ ಐರಿಷ್‌ ಪಡೆ ಸಂಪೂರ್ಣ ನೆಲಕಚ್ಚಿತು.

Advertisement

ವೇಗಿಗಳೇ ವಿಕೆಟ್‌ ಉದುರಿಸುತ್ತಿದ್ದುದ ರಿಂದ ಭಾರತದ ಸ್ಪಿನ್‌ ದಾಳಿ ವಿಳಂಬ ಗೊಂಡಿತು. 12ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಅಕ್ಷರ್‌ ಪಟೇಲ್‌ ಕೂಡ ವಿಕೆಟ್‌ ಬೇಟೆಯಾಡಿದರು. ಪಾಂಡ್ಯ 3, ಅರ್ಷದೀಪ್‌ ಮತ್ತು ಬುಮ್ರಾ ತಲಾ 2, ಸಿರಾಜ್‌ ಒಂದು ವಿಕೆಟ್‌ ಕೆಡವಿದರು. 26 ರನ್‌ ಮಾಡಿದ ಗ್ಯಾರೆತ್‌ ಡೆಲಾನಿ ಅವರದು ಐರ್ಲೆಂಡ್‌ ಸರದಿಯ ಅತ್ಯಧಿಕ ಗಳಿಕೆ.

ಯಶಸ್ವಿ ಜೈಸ್ವಾಲ್‌ ಇಲ್ಲ
ಈ ಪಂದ್ಯಕ್ಕಾಗಿ ಎಡಗೈ ಆರಂಭಕಾರ ಯಶಸ್ವಿ ಜೈಸ್ವಾಲ್‌ ಅವರನ್ನು ಹೊರಗಿರಿಸ ಲಾಯಿತು. ರೋಹಿತ್‌ ಶರ್ಮ ಜತೆಗೆ ವಿರಾಟ್‌ ಕೊಹ್ಲಿ ಓಪನರ್‌ ಆಗಿ ಕಾಣಿಸಿ ಕೊಂಡರು. ಇದರಿಂದ ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಅವಕಾಶ ಪಡೆದರು. ಪಂದ್ಯಕ್ಕೂ ಮುನ್ನ 2007ರ ಹೀರೋ ಯುವರಾಜ್‌ ಸಿಂಗ್‌ ವಿಶ್ವಕಪ್‌ ಟ್ರೋಫಿಯನ್ನು ಅಂಗಳಕ್ಕೆ ತಂದರು.

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌-16 ಓವರ್‌ಗಳಲ್ಲಿ 96 (ಡೆಲಾನಿ 26, ಲಿಟ್ಲ 14, ಕ್ಯಾಂಫ‌ರ್‌ 12, ಪಾಂಡ್ಯ 27ಕ್ಕೆ 3, ಬುಮ್ರಾ 6ಕ್ಕೆ 2, ಅರ್ಷದೀಪ್‌ 35ಕ್ಕೆ 2). ಭಾರತ- 12.2 ಓವರ್‌ಗಳಲ್ಲಿ 2 ವಿಕೆಟಿಗೆ 97 (ರೋಹಿತ್‌ 52, ಪಂತ್‌ ಔಟಾಗದೆ 36).

Advertisement

Udayavani is now on Telegram. Click here to join our channel and stay updated with the latest news.

Next