Advertisement

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

11:11 PM Oct 24, 2021 | Team Udayavani |

ದುಬಾೖ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆರಡರಲ್ಲೂ ಪ್ರಚಂಡ ಪ್ರದರ್ಶನ ನೀಡಿದ ಪಾಕಿಸ್ಥಾನ ಕೊನೆಗೂ ವಿಶ್ವಕಪ್‌ ಇತಿಹಾಸದಲ್ಲಿ ಭಾರತದೆದುರಿನ ಸೋಲಿನ ಸರಪಣಿಯನ್ನು ಕಡಿದುಕೊಂಡಿದೆ.

Advertisement

ಏಕಪಕ್ಷೀಯವಾಗಿ ಸಾಗಿದ ರವಿವಾರದ ಟಿ20 ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಬಾಬರ್‌ ಆಜಂ ಪಡೆ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 7 ವಿಕೆಟಿಗೆ 151 ರನ್‌ ಗಳಿಸಿದರೆ, ಪಾಕಿಸ್ಥಾನ 17.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 152 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಕಪ್ತಾನನ ಆಟವಾಡಿದ ವಿರಾಟ್‌ ಕೊಹ್ಲಿ ಅವರ ಅರ್ಧ ಶತಕ (57), ರಿಷಭ್‌ ಪಂತ್‌ ಅವರ ಬಿರುಸಿನ ಬ್ಯಾಟಿಂಗ್‌ (39) ಟೀಮ್‌ ಇಂಡಿಯಾ ಸರದಿಯ ಹೈಲೈಟ್‌ ಆಗಿತ್ತು. ಆದರೆ ಪಾಕಿಸ್ಥಾನದ ಆರಂಭಿಕರಾದ ಮೊಹಮ್ಮದ್‌ ರಿಜ್ವಾನ್‌ (79) ಮತ್ತು ಬಾಬರ್‌ ಆಜಂ ( 68) ಇಬ್ಬರೇ ಸೇರಿಕೊಂಡು ಈ ಮೊತ್ತವನ್ನು ಬೆನ್ನಟ್ಟಿದರು. ಒಂದೂ ವಿಕೆಟ್‌ ಕೀಳಲಾಗದಿದ್ದುದು ಭಾರತೀಯ ಬೌಲಿಂಗಿನ ಮಹಾ ದುರಂತವೆನಿಸಿತು.

ಕಾಡಿದ ಅಫ್ರಿದಿ
ಭಾರತಕ್ಕೆ “ಯಾರ್ಕರ್‌ ಸ್ಪೆಷಲಿಸ್ಟ್‌’ ಶಾಹೀನ್‌ ಅಫ್ರಿದಿ ಸಿಂಹಸ್ವಪ್ನವಾಗಿ ಕಾಡಿದರು. ಪಂದ್ಯದ 4ನೇ ಎಸೆತದಲ್ಲೇ ತಮ್ಮ ಯಾರ್ಕರ್‌ ಅಸ್ತ್ರದ ಮೂಲಕವೇ ರೋಹಿತ್‌ ಶರ್ಮ ಅವರನ್ನು ಎಲ್‌ಬಿಡಬ್ಲ್ಯು ಮಾಡಿದರು. ರೋಹಿತ್‌ ಎದುರಿಸಿದ ಮೊದಲ ಎಸೆತ ಇದಾಗಿತ್ತು. ಗೋಲ್ಡನ್‌ ಡಕ್‌ ಅವಮಾನದೊಂದಿಗೆ ಅವರು ಮೈದಾನ ತೊರೆಯಬೇಕಾಯಿತು.

Advertisement

ಮತ್ತೋರ್ವ ಆರಂಭಕಾರ ಕೆ.ಎಲ್‌. ರಾಹುಲ್‌ ಕೂಡ ಅಫ್ರಿದಿ ಮೋಡಿಗೆ ಸಿಲುಕಿದರು. ಯಾರ್ಕರ್‌ ಬೇಲ್ಸ್‌ ಹಾರಿಸಿತು. 8 ಎಸೆತ ಎದುರಿಸಿದ ರಾಹುಲ್‌ ಗಳಿಕೆ ಕೇವಲ 3 ರನ್‌. ಆರೇ ರನ್ನಿಗೆ ಭಾರತೀಯ ಆರಂಭಿಕರ ಆಟ ಮುಗಿಯಿತು. ಅದೇ ಓವರ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ ಅಫ್ರಿದಿಗೆ ಸಿಕ್ಸರ್‌ ರುಚಿ ತೋರಿಸಿ ಚಳಿ ಬಿಡಿಸುವ ಸೂಚನೆ ನೀಡಿದರು. ಅಫ್ರಿದಿಯ ಮುಂದಿನ ಓವರ್‌ನಲ್ಲಿ ಕೊಹ್ಲಿ ಕೂಡ ಸಿಕ್ಸರ್‌ ಎತ್ತಿದರು.

ಸಿಡಿಯುವ ಸೂಚನೆ ನೀಡಿದ ಸೂರ್ಯಕುಮಾರ್‌ 11 ರನ್‌ ಮಾಡಿ ಕೀಪರ್‌ ರಿಜ್ವಾನ್‌ ಪಡೆದ ಸೊಗಸಾದ ಕ್ಯಾಚ್‌ಗೆ ಬಲಿಯಾದರು. ಹಸನ್‌ ಅಲಿ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್‌ ಬೇಟೆಯಾಡಿದರು. ಹೀಗೆ ಪವರ್‌ ಪ್ಲೇ ಒಳಗಾಗಿ ಭಾರತದ 3 ವಿಕೆಟ್‌ ಉರುಳಿತು. 6 ಓವರ್‌ ಮುಕ್ತಾಯಕ್ಕೆ ಆರರ ಸರಾಸರಿಯಲ್ಲಿ ಕೇವಲ 36 ರನ್‌ ಒಟ್ಟುಗೂಡಿತ್ತು.

ಇದನ್ನೂ ಓದಿ:ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಕೊಹ್ಲಿ-ಪಂತ್‌ ಆಸರೆ
ಒಂದೆಡೆ ಕ್ಯಾಪ್ಟನ್‌ ಕೊಹ್ಲಿ ನಿಂತಿದ್ದರಿಂದ ಭಾರತಕ್ಕೆ ಚೇತರಿಕೆಯ ಭರವಸೆ ಇತ್ತು. ಇವರಿಗೆ ರಿಷಭ್‌ ಪಂತ್‌ ಬೆಂಬಲವಿತ್ತರು. 10 ಓವರ್‌ ಮುಕ್ತಾಯಕ್ಕೆ ಹೆಚ್ಚಿನ ಆಘಾತಕ್ಕೆ ಸಿಲುಕದ ಭಾರತ ತನ್ನ ಮೊತ್ತವನ್ನು 60 ರನ್ನಿಗೆ ಏರಿಸಿತು. ಕೊನೆಯ 10 ಓವರ್‌ಗಳಲ್ಲಿ 90 ರನ್‌ ಹರಿದು ಬಂದದ್ದು ಭಾರತದ ಬ್ಯಾಟಿಂಗ್‌ ಚೇತರಿಕೆಗೆ ಉತ್ತಮ ನಿದರ್ಶನವೆನಿಸಿತು.

ಒಮ್ಮೆ ರಿವರ್ಸ್‌ ಸ್ವೀಪ್‌ ಪ್ರಯತ್ನಕ್ಕೆ ಮುಂದಾಗಿ ಬಚಾವಾದ ಬಳಿಕ ಪಂತ್‌ ಎಂದಿನ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಹಸನ್‌ ಅಲಿ ಅವರ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್‌ ಸಿಡಿಸಿ ಪಂದ್ಯದ ಕಾವು ಏರಿಸಿದರು. ಈ ಎರಡೂ ಸಿಕ್ಸರ್‌ಗಳನ್ನು ಒಂದೇ ಕೈಯಲ್ಲಿ ಬಾರಿಸುವ ಮೂಲಕ ಪಂತ್‌ ಬ್ಯಾಟಿಂಗ್‌ ಆಕರ್ಷಣೆ ಹೆಚ್ಚಿಸಿದರು. ಆದರೆ ಶದಾಬ್‌ ಖಾನ್‌ ಅವರ ಮುಂದಿನ ಓವರ್‌ನಲ್ಲೇ ವಿಕೆಟ್‌ ಕೈಚೆಲ್ಲಿದರು. ಭರ್ಜರಿ ಹೊಡೆತಕ್ಕೆ ಮುಂದಾದಾಗ ಚೆಂಡು ಆಗಸಕ್ಕೆ ಚಿಮ್ಮಿತು. ಶದಾಬ್‌ ರಿಟರ್ನ್ ಕ್ಯಾಚ್‌ ಪಡೆದರು. ಪಂತ್‌ ಕೊಡುಗೆ 30 ಎಸೆತಗಳಿಂದ 39 ರನ್‌ (2 ಬೌಂಡರಿ, 2 ಸಿಕ್ಸರ್‌). ಕೊಹ್ಲಿ-ಪಂತ್‌ 4ನೇ ವಿಕೆಟಿಗೆ 6.4 ಓವರ್‌ಗಳಿಂದ 53 ರನ್‌ ಪೇರಿಸಿ ಭಾರತದ ಸರದಿಗೆ ಚೈತನ್ಯ ತುಂಬಿದರು.

ಭಾರತದ 100 ರನ್‌ ಪೂರ್ತಿಗೊಳ್ಳಲು ಭರ್ತಿ 15 ಓವರ್‌ ಬೇಕಾಯಿತು. ಕೊನೆಯ 5 ಓವರ್‌ಗಳಲ್ಲಿ 51 ರನ್‌ ಬಂತು. ಡೆತ್‌ ಓವರ್‌ ವೇಳೆ ಕ್ರೀಸಿನಲ್ಲಿದ್ದ ಜೋಡಿ ಕೊಹ್ಲಿ-ಜಡೇಜ. ಮೊದಲ ಓವರ್‌ನಲ್ಲೇ ಕ್ರೀಸ್‌ ಇಳಿದಿದ್ದ ಕೊಹ್ಲಿ ತೀವ್ರ ಎಚ್ಚರಿಕೆಯಿಂದ ಬ್ಯಾಟ್‌ ಬೀಸುತ್ತ ಹೋದರು. ರನ್‌ ಗಳಿಸುವ ಜತೆಗೆ ವಿಕೆಟ್‌ ಕಾಯಬೇಕಾದ ಮಹತ್ತರ ಜವಾಬ್ದಾರಿಯೂ ಅವರ ಮೇಲಿತ್ತು. 45 ಎಸೆತಗಳಿಂದ ಕಪ್ತಾನನ ಅರ್ಧ ಶತಕ ಪೂರ್ತಿಗೊಂಡಿತು. 19ನೇ ಓವರ್‌ ಎಸೆಯಲು ಬಂದು ಅಫ್ರಿದಿ ಈ ವಿಕೆಟ್‌ ಉಡಾಯಿಸಿದರು. ಕೊಹ್ಲಿ ಗಳಿಕೆ 49 ಎಸೆತಗಳಿಂದ 57 ರನ್‌ (5 ಬೌಂಡರಿ, 1 ಸಿಕ್ಸರ್‌).

ಸ್ಕೋರ್‌ ಪಟ್ಟಿ
ಭಾರತ
ಕೆ.ಎಲ್‌. ರಾಹುಲ್‌ ಬಿ ಅಫ್ರಿದಿ 3
ರೋಹಿತ್‌ ಶರ್ಮ ಎಲ್‌ಬಿಡಬ್ಲ್ಯು ಬಿ ಅಫ್ರಿದಿ 0
ವಿರಾಟ್‌ ಕೊಹ್ಲಿ ಸಿ ರಿಜ್ವಾನ್‌ ಬಿ ಅಫ್ರಿದಿ 57
ಸೂರ್ಯಕುಮಾರ್‌ ಸಿ ರಿಜ್ವಾನ್‌ ಬಿ ಅಲಿ 11
ರಿಷಭ್‌ ಪಂತ್‌ ಸಿ ಮತ್ತು ಬಿ ಶದಾಬ್‌ ಖಾನ್‌ 39
ರವೀಂದ್ರ ಜಡೇಜ ಸಿ ನವಾಜ್‌ ಬಿ ಅಲಿ 13
ಹಾರ್ದಿಕ್‌ ಪಾಂಡ್ಯ ಸಿ ಬಾಬರ್‌ ಬಿ ರವೂಫ್ 11
ಭುವನೇಶ್ವರ್‌ ಔಟಾಗದೆ 5
ಮೊಹಮ್ಮದ್‌ ಶಮಿ ಔಟಾಗದೆ 0
ಇತರ 12
ಒಟ್ಟು (7 ವಿಕೆಟಿಗೆ) 151
ವಿಕೆಟ್‌ ಪತನ:1-1, 2-6, 3-31, 4-84, 5-125, 6-133, 7-146.
ಬೌಲಿಂಗ್‌;ಶಾಹೀನ್‌ ಅಫ್ರಿದಿ 4-0-31-3
ಇಮಾದ್‌ ವಾಸಿಮ್‌ 2-0-10-0
ಹಸನ್‌ ಅಲಿ 4-0-44-2
ಶದಾಬ್‌ ಖಾನ್‌ 4-0-22-1
ಮೊಹಮ್ಮದ್‌ ಹಫೀಜ್‌ 2-0-12-0
ಹ್ಯಾರಿಸ್‌ ರವೂಫ್ 4-0-25-1

ಪಾಕಿಸ್ಥಾನ
ಮೊಹಮ್ಮದ್‌ ರಿಜ್ವಾನ್‌ ಔಟಾಗದೆ 79
ಬಾಬರ್‌ ಆಜಮ್‌ ಔಟಾಗದೆ 68
ಇತರ 5
ಒಟ್ಟು (17.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ) 152
ಬೌಲಿಂಗ್‌;ಭುವನೇಶ್ವರ್‌ ಕುಮಾರ್‌ 3 -0-25-0
ಮೊಹಮ್ಮದ್‌ ಶಮಿ 3.5-0-43-0
ಜಸ್‌ಪ್ರೀತ್‌ ಬುಮ್ರಾ 3-0-22-0
ವರುಣ್‌ ಚಕ್ರವರ್ತಿ 4-0-33-0
ರವೀಂದ್ರ ಜಡೇಜ 4-0-28-0

Advertisement

Udayavani is now on Telegram. Click here to join our channel and stay updated with the latest news.

Next