Advertisement

ಆಸೀಸ್‌ ದಾಳಿಗೆ ಬಾಂಗ್ಲಾ ಧೂಳೀಪಟ

10:03 PM Nov 04, 2021 | Team Udayavani |

ದುಬೈ: ಇಂಗ್ಲೆಂಡ್‌ ವಿರುದ್ಧ ಅನುಭವಿಸಿದ ಸೋಲಿಗೆ ಬಾಂಗ್ಲಾದೇಶ ವಿರುದ್ಧ ಸೇಡು ತೀರಿಸಿಕೊಂಡಂತೆ ಆಸ್ಟ್ರೇಲಿಯ ಆಡಿದೆ. ಟಿ20 ವಿಶ್ವಕಪ್‌ನ ಗುರುವಾರದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಗುಂಪು ಒಂದರ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದೆ. ಅಲ್ಲಿಗೆ ಸೆಮಿಫೈನಲ್‌ ಪೈಪೋಟಿಯಲ್ಲಿ ಉಳಿದುಕೊಂಡಿದೆ.

Advertisement

ಆ್ಯಡಂ ಝಂಪ ದಾಳಿಗೆ ತತ್ತರಿಸಿದ ಬಾಂಗ್ಲಾ 15 ಓವರ್‌ಗಳಲ್ಲಿ ಕೇವಲ 73 ರನ್ನಿಗೆ ಕುಸಿಯಿತು. ಕಾಂಗರೂ ಪಡೆ 6.2 ಓವರ್‌ಗಳಲ್ಲಿ 2 ವಿಕೆಟಿಗೆ 78 ರನ್‌ ಬಾರಿಸಿತು. ಬಾಂಗ್ಲಾ ಆಡಿದ ಐದೂ ಪಂದ್ಯಗಳಲ್ಲಿ ಸೋತು ತೀವ್ರ ಮುಖಭಂಗ ಅನುಭವಿಸಿತು. ಆಸ್ಟ್ರೇಲಿಯ 82 ಎಸೆತ ಬಾಕಿ ಇರುವಂತೆಯೇ ಗೆದ್ದ ಕಾರಣ ರನ್‌ರೇಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು. ಎರಡೂ ತಂಡಗಳು 4 ಪಂದ್ಯಗಳಲ್ಲಿ ಮೂರನ್ನು ಗೆದ್ದಿವೆ.

ಬಾಂಗ್ಲಾದೇಶ ಈ ವರ್ಷದ ಟಿ20 ಪಂದ್ಯಗಳಲ್ಲಿ ಅತ್ಯಧಿಕ 4ನೇ ಸಲ ನೂರರೊಳಗೆ ಆಲೌಟ್‌ ಆಯಿತು. ಹಾಗೆಯೇ ಸತತ 2 ಪಂದ್ಯಗಳಲ್ಲಿ ಎರಡಂಕೆಯ ಮೊತ್ತಕ್ಕೆ ಸರ್ವಪತನ ಕಂಡ 3ನೇ ತಂಡವೆನಿಸಿತು. ಇದಕ್ಕೂ ಹಿಂದಿನ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಬಾಂಗ್ಲಾ 84ಕ್ಕೆ ಕುಸಿದಿತ್ತು. ಆ್ಯಡಂ ಝಂಪ 19 ರನ್ನಿತ್ತು 5 ವಿಕೆಟ್‌ ಕೆಡವಿದರು. ಇದು ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯದ ಬೌಲರ್‌ ಒಬ್ಬನ ಶ್ರೇಷ್ಠ ನಿರ್ವಹಣೆಯಾಗಿದೆ.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ 15 ಓವರ್‌, 73 (ಶಮಿಮ್‌ 19, ನೈಮ್‌ 17, ಝಂಪ 19ಕ್ಕೆ 5, ಹೇಝಲ್‌ವುಡ್‌ 8ಕ್ಕೆ 2). ಆಸ್ಟ್ರೇಲಿಯ 6.2 ಓವರ್‌, 78/2 (ಫಿಂಚ್‌ 40, ವಾರ್ನರ್‌ 18, ಶೊರಿಫುಲ್‌ 9ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next