ಆಕ್ಲಂಡ್: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಪ್ರವಾಸಿ ಆಸ್ಟ್ರೇಲಿಯ ತಂಡವು ಶುಕ್ರವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 72 ರನ್ನುಗಳಿಂದ ಸೋಲಿಸಿದೆ. ಈ ಗೆಲುವಿನಿಂದ 2-0 ಮುನ್ನಡೆ ಸಾಧಿಸಿದ ಆಸ್ಟ್ರೇಲಿಯ ಸರಣಿ ತನ್ನದಾಗಿಸಿಕೊಂಡಿದೆ.
ಸರಣಿಯ ಮೂರನೇ ಪಂದ್ಯ ಫೆ. 25ರಂದು ಆಕ್ಲಂಡ್‌ನಲ್ಲಿಯೇ ನಡೆಯಲಿದೆ. ಟಿ20 ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯ ಆರು ವಿಕೆಟ್‌ಗಳಿಂದ ಜಯಿಸಿತ್ತು.
ಬೌಲರ್‌ಗಳು ಮೇಲುಗೈ ಸಾಧಿಸಿದ್ದ ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್ ಮತ್ತು ಪ್ಯಾಟ್ ಕಮಿನ್ಸ್ ಅವರ ತಾಳ್ಮೆಯ ಆಟದಿಂದಾಗಿ ಆಸ್ಟ್ರೇಲಿಯ ತಂಡವು 19.5 ಓವರ್‌ಗಳಲ್ಲಿ 174 ರನ್ನಿಗೆ ಆಲೌಟಾಯಿತು. ಹೆಡ್ ಗರಿಷ್ಠ 45 ರನ್ ಹೊಡೆದರು. 22 ಎಸೆತ ಎದುರಿಸಿದ ಅವರು 2 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದ್ದರು. ಲ್ಯೂಕಿ ಫೆರ್ಗ್ಯುಸನ್ ಕೇವಲ 12 ರನ್ನಿಗೆ 4 ವಿಕೆಟ್ ಕಿತ್ತು ಎದುರಾಳಿಗೆ ಪ್ರಬಲ ಹೊಡೆತ ನೀಡಿದರು.
ಗೆಲ್ಲಲು 175 ರನ್ ಗಳಿಸುವ ಸವಾಲು ಪಡೆದ ನ್ಯೂಜಿಲ್ಯಾಂಡ್ ತಂಡವು ಆಸ್ಟ್ರೇಲಿಯದ ಬಿಗು ದಾಳಿಗೆ ರನ್ ಗಳಿಸಲು ಒದ್ದಾಡಿತಲ್ಲದೇ 17 ಓವರ್‌ಗಳಲ್ಲಿ ಕೇವಲ 102 ರನ್ನಿಗೆ ಆಲೌಟಾಗಿ ಶರಣಾಯಿತು. ಗ್ಲೆನ್ ಫಿಲಿಪ್ಸ್ ಗರಿಷ್ಠ 42 ರನ್ ಹೊಡೆದರು. ಜೋಶ್ ಕ್ಲಾರ್ಕ್‌ಸನ್ ಮತ್ತು ಟ್ರೆಂಟ್ ಬೌಲ್ಟ್ ಎರಡಂಕೆಯ ಮೊತ್ತ ತಲುಪಿದ ಇನ್ನಿಬ್ಬರು ಆಟಗಾರರಾಗಿದ್ದಾರೆ.
ಬಿಗು ದಾಳಿ ಸಂಘಟಿಸಿದ ಆ್ಯಡಂ ಝಂಪ ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ 34 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ನ್ಯೂಜಿಲ್ಯಾಂಡಿಗೆ ಬಲವಾದ ಹೊಡೆತ ನೀಡಿದರು. ನಥನ್ ಎಲ್ಲಿಸ್ 16 ರನ್ನಿಗೆ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 19.5 ಓವರ್‌ಗಳಲ್ಲಿ 174 (ಟ್ರ್ಯಾವಿಸ್ ಹೆಡ್ 45, ಫೆರ್ಗ್ಯುಸನ್ 12ಕ್ಕೆ 4); ನ್ಯೂಜಿಲ್ಯಾಂಡ್ 17 ಓವರ್‌ಗಳಲ್ಲಿ 102 (ಗ್ಲೆನ್ ಫಿಲಿಪ್ಸ್ 42, ಆ್ಯಡಂ ಝಂಪ 34ಕ್ಕೆ 4).