Advertisement

ಟಿ20: ವಿಶ್ವ ನಂ.1 ಸ್ಥಾನ ವಂಚಿತ ಕೊಹ್ಲಿ

07:10 AM Dec 26, 2017 | Harsha Rao |

ಮುಂಬಯಿ: ವಿಶ್ವ ಕ್ರಿಕೆಟ್‌ನಲ್ಲಿ ಏಕಮೇವಾದ್ವಿತೀಯ ಸಾಮ್ರಾಟನಾಗಿ ಮೆರೆಯುತ್ತಿರುವ ವಿರಾಟ್‌ ಕೊಹ್ಲಿ ಮೈಲುಗಲ್ಲು ಸೃಷ್ಟಿಸುವತ್ತ ಹೆಜ್ಜೆ ಇಟ್ಟಿದ್ದರು. ಅದಕ್ಕೆ ಚಿಕ್ಕ ತಡೆ ಎದುರಾಗಿದೆ. ಇದೀಗ ಬಿಡುಗಡೆಯಾಗಿರುವ ನೂತನ ಟಿ20 ಶ್ರೇಯಾಂಕದಲ್ಲಿ ಕೊಹ್ಲಿ ವಿಶ್ವ ನಂ.1 ಸ್ಥಾನ ಕಳೆದುಕೊಂಡು 3ನೇ ಸ್ಥಾನಕ್ಕಿಳಿದಿದ್ದಾರೆ. ಇದುವರೆಗೆ ಟಿ20, ಏಕದಿನದಲ್ಲಿ ವಿಶ್ವ ನಂ.1, ಟೆಸ್ಟ್‌ನಲ್ಲಿ ನಂ.2 ಆಗಿದ್ದರು. ಟೆಸ್ಟ್‌ನಲ್ಲೂ ನಂ.1 ಸ್ಥಾನಕ್ಕೇರಿದ್ದರೆ ಏಕಕಾಲದಲ್ಲಿ ಮೂರೂ ಮಾದರಿಯಲ್ಲಿ ವಿಶ್ವ ನಂ.1 ಆದ ವಿಶ್ವದ 2ನೇ ಕ್ರೀಡಾಪಟುವಾಗುತ್ತಿದ್ದರು. ಈಗ ಟಿ20 ಶ್ರೇಯಾಂಕ ಕುಸಿದಿರುವುದರಿಂದ ಈ ಹಾದಿಯಲ್ಲಿ ಸಣ್ಣ ತೊಡಕು ಕಾಣಿಸಿಕೊಂಡಿದೆ.

Advertisement

ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಕೊಹ್ಲಿ ಆಡದಿರುವುದೇ ಈ ಶ್ರೇಯಾಂಕ ಕುಸಿತಕ್ಕೆ ಕಾರಣ. ಇದರ ನಡುವೆ ಭಾರತಕ್ಕೆ ಇನ್ನೂ ಒಂದು ಆಘಾತಕಾರಿ ಸುದ್ದಿ ಅದರ ಜತೆಗೊಂದು ಸಿಹಿ ಸುದ್ದಿ ಸಿಕ್ಕಿದೆ.

ಬೌಲಿಂಗ್‌ನಲ್ಲೂ ಭಾರತೀಯ ಜಸ್‌ಪ್ರೀತ್‌ ಬುಮ್ರಾ ವಿಶ್ವ ನಂ.1 ಸ್ಥಾನ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿರುವುದು ಭಾರತೀಯರಿಗೆ ಕಹಿ ಸುದ್ದಿ, ಕರ್ನಾಟಕದ ಕೆ.ಎಲ್‌.ರಾಹುಲ್‌ 23 ಸ್ಥಾನ ಮೇಲಕ್ಕೇರಿ ವಿಶ್ವ ನಂ.4 ಸ್ಥಾನಕ್ಕೇರಿರುವುದು ಸಿಹಿ ಸುದ್ದಿಯಾಗಿದೆ.

ಕೊಹ್ಲಿಗೆ ದೀರ್ಘ‌ಕಾಲ ವಿಶ್ವ ನಂ.1 ಪಟ್ಟ
ವಿರಾಟ್‌ ಕೊಹ್ಲಿ 2014ರಲ್ಲಿ ಟಿ20ಯಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದ್ದರು. ಅಲ್ಲಿಂದ ಹತ್ತಿರ ಹತ್ತಿರ ಮೂರು ವರ್ಷಗಳ ಕಾಲ ಅವರು ಅದೇ ಸ್ಥಾನವನ್ನು ಉಳಿಸಿಕೊಂಡು ಅಮೋಘ ಫಾರ್ಮ್ ಪ್ರದರ್ಶಿಸಿದ್ದರು. ಇಲ್ಲಿಯವರೆಗೆ ಟಿ20ಯಲ್ಲಿ ಕೊಹ್ಲಿ ಶತಕ ಬಾರಿಸಿಲ್ಲವಾದರೂ ನಿರಂತರವಾಗಿ ಅದ್ಭುತ ಇನ್ನಿಂಗ್ಸ್‌ ಆಡುತ್ತಲೇ ಇದ್ದಾರೆ. ಎಂತಹ ಸ್ಥಿತಿಯಲ್ಲೂ ಏಕಾಂಗಿಯಾಗಿ ಹೋರಾಡಿ ಪಂದ್ಯವನ್ನು ದಡ ಮುಟ್ಟಿಸುವ ಚಾಕಚಕ್ಯತೆ ಅವರಿಗಿದೆ. ಅದನ್ನು ಹಲವು ಬಾರಿ ಸಾಬೀತು ಮಾಡಿದ್ದಾರೆ ಕೂಡ. 2015-2016ರಂದು ಭಾರತ ಧೋನಿ ನೇತೃತ್ವದಲ್ಲಿ ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಿದ್ದಾಗ ಕೊಹ್ಲಿ ಅಮೋಘವಾಗಿ ಆಡಿದ್ದರು. ಭಾರತ ಆ ಸರಣಿಯನ್ನು 3-0ಯಿಂದ ಗೆಲ್ಲಲು ನೆರವಾಗಿದ್ದರು. ಈ ಎಲ್ಲ ಕಾರಣಗಳಿಗೆ ಅವರ ನಂ.1 ಸ್ಥಾನವನ್ನು ಯಾರಿಗೂ ಅಲ್ಲಾಡಿಸಲು ಸಾಧ್ಯವಾಗಿರಲಿಲ್ಲ.

ಇದೇ ಮೊದಲ ಬಾರಿಗೆ ಕೊಹ್ಲಿ ತಾವಾಗಿಯೇ ಶ್ರೀಲಂಕಾ ಪ್ರವಾಸದಿಂದ ದೂರವುಳಿದಿದ್ದರಿಂದ ನಂ.1 ಪಟ್ಟ ಕಳೆದುಕೊಳ್ಳಬೇಕಾಗಿ ಬಂತು. 824 ಅಂಕ ಹೊಂದಿದ್ದ ಅವರು 776ಕ್ಕೆ ಕುಸಿದಿದ್ದಾರೆ. ಮುಂದಿನ ಆಫ್ರಿಕಾ ಪ್ರವಾಸದ ವೇಳೆ ಕೊಹ್ಲಿ ಮತ್ತೆ ಶ್ರೇಯಾಂಕ ಹೆಚ್ಚಿಸಿಕೊಳ್ಳುವ ಅಮೂಲ್ಯ ಅವಕಾಶ ಹೊಂದಿದ್ದಾರೆ. ಆದರೆ ಆಫ್ರಿಕಾದ ಕಠಿನ ಪಿಚ್‌ಗಳಲ್ಲಿ ಅವರು ಏನು ಮಾಡುತ್ತಾರೆನ್ನುವುದನ್ನು ಕಾದು ನೋಡಬೇಕು.

Advertisement

3 ಸ್ಥಾನ ಮೇಲೇರಿ ಭಾರತ ವಿಶ್ವ ನಂ.2
ಟಿ20 ಅಂಕಪಟ್ಟಿಯಲ್ಲಿ ನಡೆದ ವಿಶೇಷ ಸಂಗತಿಯೆಂದರೆ ಭಾರತ ವಿಶ್ವ ನಂ.2 ಸ್ಥಾನಕ್ಕೇರಿರುವುದು. ಟಿ20ಯಲ್ಲಿ ಪ್ರಬಲ ತಂಡವಾಗಿದ್ದರೂ ಶ್ರೇಯಾಂಕದಲ್ಲಿ ಮಾತ್ರ ಭಾರತ ಮೇಲೇರಿರಲಿಲ್ಲ. ಪ್ರಮುಖ ಕೂಟಗಳ ನಿರ್ಣಾಯಕ ಘಟ್ಟದಲ್ಲಿ ಸೋಲುತ್ತಿದ್ದುದೇ ಈ ಹಿನ್ನಡೆಗೆ ಕಾರಣ. ಈ ಬಾರಿ ಶ್ರೀಲಂಕಾ ವಿರುದ್ಧ ವೈಟ್‌ವಾಶ್‌ ಮಾಡಿರುವುದರಿಂದ 3 ಸ್ಥಾನ ಮೇಲೇರಿರುವ ಭಾರತ ವೆಸ್ಟ್‌ಇಂಡೀಸ್‌, ಇಂಗ್ಲೆಂಡ್‌, ಶ್ರೀಲಂಕಾ ಕೆಳಕ್ಕೆ ತಳ್ಳಿ ಮೇಲೇರಿದೆ. ಅಚ್ಚರಿಯೆಂದರೆ ಪಾಕಿಸ್ಥಾನ ವಿಶ್ವ ನಂ.1 ಸ್ಥಾನವನ್ನು ಉಳಿಸಿಕೊಂಡಿದೆ.

ವಿರಾಟ್‌ ಕೊಹ್ಲಿಗಿಂತ ರೋಹಿತ್‌ ಶರ್ಮ ಶ್ರೇಷ್ಠ!
ಈಗ ಕ್ರಿಕೆಟ್‌ನಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಜೋರಾಗಿದೆ. ವಿಶ್ವ ಮಟ್ಟಕ್ಕೆ ಬಂದರೆ ಕೊಹ್ಲಿ ಶ್ರೇಷ್ಠನೋ ಆಸ್ಟ್ರೇಲಿಯಾ ನಾಯಕ ಸ್ಟೀವನ್‌ ಸ್ಮಿತ್‌ ಶ್ರೇಷ್ಠನೋ ಎಂಬ ಪ್ರಶ್ನೆಯಿದೆ. ಈ ಇಬ್ಬರ ನಡುವೆ ಅಗ್ರಸ್ಥಾನಕ್ಕೆ ಹೋರಾಟವಿದೆ. ಅದೇ ಭಾರತದ ಮಟ್ಟಿಗೆ ಈ ಪೈಪೋಟಿಯಲ್ಲಿ ಮತ್ತೂಂದು ಹೆಸರು ಕಾಣಿಸಿಕೊಂಡಿದೆ. ಅದು ರೋಹಿತ್‌ ಶರ್ಮ. ಈಗ ರೋಹಿತ್‌ ಶ್ರೇಷ್ಠನೋ, ಕೊಹ್ಲಿ ಶ್ರೇಷ್ಠನೋ ಎಂಬ ಚರ್ಚೆ ಮತ್ತೆ ತೀವ್ರಗೊಂಡಿದೆ. ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಸಂದೀಪ್‌ ಪಾಟೀಲ್‌, ಸೀಮಿತ ಓವರ್‌ಗಳಲ್ಲಿ ಕೊಹ್ಲಿಗಿಂತ ರೋಹಿತ್‌ ಶ್ರೇಷ್ಠ ಎಂದು ಹೇಳುವ ಮೂಲಕ ಚರ್ಚೆಗೆ ನಾಂದಿ ಹಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬಿರುಸು ಪಡೆಯುವ ಸಾಧ್ಯತೆಯಿದೆ. ಕೊಹ್ಲಿ ಟೆಸ್ಟ್‌ನಲ್ಲಿ ಅತ್ಯುತ್ತಮರಾಗಿದ್ದರೂ ಸೀಮಿತ ಓವರ್‌ಗಳಲ್ಲಿ ರೋಹಿತ್‌ ಮೇಲುಗೈ ಸಾಧಿಸುತ್ತಾರೆನ್ನುವುದು ಅವರ ಅಭಿಪ್ರಾಯ. ಅದಕ್ಕೆ ಸರಿಯಾಗಿ ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಟಿ20, ಏಕದಿನ ಸರಣಿಯಲ್ಲಿ ರೋಹಿತ್‌ ಅತ್ಯದ್ಭುತ ಆಟವಾಡಿ ಎಲ್ಲರ ಮನಗೆದ್ದಿದ್ದಾರೆ.

ರಾಹುಲ್‌ 23 ಸ್ಥಾನ ಮೇಲೇರಿಕೆ
ರಾಜ್ಯದ ಕೆ.ಎಲ್‌.ರಾಹುಲ್‌ ಅದ್ಭುತ ಫಾರ್ಮ್ನಲ್ಲಿದ್ದರೂ ತಂಡದಲ್ಲಿರುವ ಗರಿಷ್ಠ ಪೈಪೋಟಿಯಿಂದ ಸ್ಥಾನ ಸಿಗದೇ ಒದ್ದಾಡುತ್ತಿದ್ದಾರೆ. ಅನಿವಾರ್ಯವಾಗಿ ಹೊರಗಿರಬೇಕಾದ ಪರಿಸ್ಥಿತಿ ಅವರದ್ದು. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಟಿ20ಯಲ್ಲಿ ಧವನ್‌ ಹೊರಗುಳಿದಿದ್ದರಿಂದ ರಾಹುಲ್‌ ಆಡುವ ಅವಕಾಶ ಪಡೆದರು. ಇದೇ ಅವಕಾಶ ಧೂಳೆಬ್ಬಿಸಿದ ಅವರು 23 ಸ್ಥಾನ ಮೇಲಕ್ಕೇರಿ ವಿಶ್ವ ನಂ.4 ಎನಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ತಂಡದಲ್ಲೂ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next