Advertisement
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 9 ವಿಕೆಟಿಗೆ 174 ರನ್ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಆಸ್ಟ್ರೇಲಿಯ 7 ವಿಕೆಟಿಗೆ 154 ರನ್ ಮಾಡಿ ಶರಣಾಯಿತು. 5ನೇ ಹಾಗೂ ಅಂತಿಮ ಪಂದ್ಯ ರವಿವಾರ ಬೆಂಗಳೂರಿನಲ್ಲಿ ನಡೆಯಲಿದೆ.ಮೊದಲ 3 ಪಂದ್ಯಗಳು ಬ್ಯಾಟಿಂಗ್ ಟ್ರ್ಯಾಕ್‌ನಲ್ಲಿ ನಡೆದರೆ, ರಾಯ್‌ಪುರದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸ್ಪಿನ್ ಅನುಭವವಾಯಿತು. ಅಕ್ಷರ್ ಪಟೇಲ್, ರವಿ ಬಿಷ್ಣೋಯಿ ಕಾಂಗರೂ ಪಾಲಿಗೆ ಸಿಂಹಸ್ವಪ್ನರಾದರು. ಅಕ್ಷರ್ ಕೇವಲ 16 ರನ್ ನೀಡಿ 3 ವಿಕೆಟ್ ಕೆಡವಿದರೆ, ಬಿಷ್ಣೋಯಿ 17 ರನ್ ನೀಡಿ ಜೋಶ್ ಫಿಲಿಪ್ ವಿಕೆಟ್ ಉಡಾಯಿಸಿದರು. ಅಕ್ಷರ್ ಮೋಡಿಗೆ ಸಿಲುಕಿದವರೆಂದರೆ ಹೆಡ್, ಮೆಕ್‌ಡರ್ಮಟ್ ಮತ್ತು ಹಾರ್ಡಿ. ಬಳಿಕ ದೀಪಕ್ ಚಹರ್ 2 ವಿಕೆಟ್ ಉರುಳಿಸಿ ಹಿಡಿತವನ್ನು ಬಿಗಿಗೊಳಿಸಿದರು.
ಭಾರತಕ್ಕೆ ಯಶಸ್ವಿ ಜೈಸ್ವಾಲ್ ಅಬ್ಬರದ ಆರಂಭ ಕೊಡಿಸಿದರು. 3ನೇ ಓವರ್‌ನಲ್ಲಿ ಇವರ ಸ್ಫೋಟಕ ಆಟ ಕಂಡುಬಂತು. ಡ್ವಾರ್ಶಿಯಸ್ ಓವರ್‌ನಲ್ಲಿ 3 ಬೌಂಡರಿ ಬಾರಿಸಿ ಅಬ್ಬರಿಸಿದರು. ಆದರೆ ಪವರ್ ಪ್ಲೇ ಇನ್ನೇನು ಮುಗಿಯಬೇಕು ಎನ್ನುವ ಹಂತದಲ್ಲಿ ಜೈಸ್ವಾಲ್ ವಿಕೆಟ್ ಬಿತ್ತು. ಹಾರ್ಡಿ ಎಸೆತ ವನ್ನು ಮಿಡ್‌ಆನ್‌ನಲ್ಲಿದ್ದ ಮೆಕ್‌ಡರ್ಮಟ್‌ಗೆ ಕ್ಯಾಚ್ ನೀಡಿ ವಾಪಸಾದರು. ಹಾರ್ಡಿ ತಮ್ಮ ಮೊದಲ ಓವರ್‌ನಲ್ಲೇ ಬ್ರೇಕ್ ಒದಗಿಸಲು ಯಶಸ್ವಿಯಾದರು. ಅಲ್ಲಿಗೆ 6 ಓವರ್‌ಗಳ ಆಟ ಮುಗಿದಿತ್ತು. ಭಾರತ ಭರ್ತಿ 50 ರನ್ ಮಾಡಿತ್ತು. ಜೈಸ್ವಾಲ್ ಗಳಿಕೆ 28 ಎಸೆತಗಳಿಂದ 37 ರನ್ (6 ಬೌಂಡರಿ, 1 ಸಿಕ್ಸರ್).
Related Articles
Advertisement
ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಗಾಯಕ್ವಾಡ್ ಇನ್ನೇನು ಬಿರುಸು ಪಡೆದುಕೊಳ್ಳಬೇಕೆನ್ನುವ ಹಂತದಲ್ಲೇ ಎಡವಿದರು. ತನ್ವೀರ್ ಸಂಘಾ 2ನೇ ವಿಕೆಟ್ ಕೆಡವಿದರು. 28 ಎಸೆತ ಎದುರಿಸಿದ ಗಾಯಕ್ವಾಡ್ ಕೊಡುಗೆ 32 ರನ್ (3 ಬೌಂಡರಿ, 1 ಸಿಕ್ಸರ್).
ರಿಂಕು ಟಾಪ್ ಸ್ಕೋರರ್ರಿಂಕು ಸಿಂಗ್ ಮೊದಲ ಎಸೆತವವನ್ನೇ ಬೌಂಡ ರಿಗೆ ಬಾರಿಸಿ ಅಬ್ಬರಿಸುವ ಸೂಚನೆಯಿತ್ತರು. 14ನೇ ಓವರ್‌ನಲ್ಲಿ 114ಕ್ಕೆ 4 ವಿಕೆಟ್ ಕಳೆದುಕೊಂಡ ಭಾರತಕ್ಕೆ ಇದು ಅನಿವಾರ್ಯವೂ ಆಗಿತ್ತು. ಇನ್ನೊಂದು ತುದಿಯಲ್ಲಿ ಜಿತೇಶ್ ಶರ್ಮ ಕೂಡ ಜಬರ್ದಸ್ತ್ ಬೀಸುಗೆಗೆ ಮುಂದಾದರು. 15 ಓವರ್ ಅಂತ್ಯಕ್ಕೆ ಸ್ಕೋರ್ 130ಕ್ಕೆ ಏರಿತು.
ಡೆತ್ ಓವರ್‌ಗಳಲ್ಲಿ ರಿಂಕು-ಜಿತೇಶ್ ಇದ್ದುದರಿಂದ ಭಾರತ ಭಾರೀ ಮೊತ್ತದ ನಿರೀಕ್ಷೆ ಇರಿಸಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಕೊನೆಯ 5 ಓವರ್‌ಗಳಲ್ಲಿ 5 ವಿಕೆಟ್ ಉರುಳಿಸಿಕೊಂಡ ಭಾರತ ಕೇವಲ 44 ರನ್ ಗಳಿಸಿತು. ಈ ಐದೂ ವಿಕೆಟ್ 9 ಎಸೆತಗಳ ಅಂತರದಲ್ಲಿ ಉದುರಿದವು. 29 ಎಸೆತಗಳಿಂದ 46 ರನ್ ಬಾರಿಸಿದ ರಿಂಕು ಸಿಂಗ್ ಭಾರತದ ಟಾಪ್ ಸ್ಕೋರರ್ (4 ಬೌಂಡರಿ, 2 ಸಿಕ್ಸರ್). ಜಿತೇಶ್ 19 ಎಸೆತ ಎದುರಿಸಿ 35 ರನ್ ಬಾರಿಸಿದರು (1 ಬೌಂಡರಿ, 3 ಸಿಕ್ಸರ್). ಭಾರೀ ಬದಲಾವಣೆ
4ನೇ ಪಂದ್ಯಕ್ಕಾಗಿ ಎರಡೂ ತಂಡಗಳಲ್ಲಿ ಭಾರೀ ಬದಲಾವಣೆ ಮಾಡಿಕೊಳ್ಳಲಾಯಿತು. ಭಾರತ ಇಶಾನ್ ಕಿಶನ್, ಅರ್ಷದೀಪ್ ಸಿಂಗ್, ತಿಲಕ್ ವರ್ಮ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಟ್ಟಿತು. ಶ್ರೇಯಸ್ ಅಯ್ಯರ್, ಜಿತೇಶ್ ಶರ್ಮ, ದೀಪಕ್ ಚಹರ್ ಸರಣಿಯಲ್ಲಿ ಮೊದಲ ಸಲ ಆಡಲಿಳಿದರು. ಮದುವೆ ಮುಗಿಸಿ ಬಂದ ಮುಕೇಶ್ ಕುಮಾರ್ ಕೂಡ ಆಡುವ ಬಳಗವನ್ನು ಸೇರಿಕೊಂಡರು. ಆಸ್ಟ್ರೇಲಿಯ ತಂಡದಲ್ಲಿ 5 ಪರಿವರ್ತನೆ ಸಂಭವಿಸಿತು. ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಜೋಶ್ ಇಂಗ್ಲಿಸ್, ಕೇನ್ ರಿಚರ್ಡ್ ಸನ್ ಮತ್ತು ನಥನ್ ಎಲ್ಲಿಸ್ ಹೊರಗುಳಿದರು. ಇವರ ಬದಲು ಜೋಶ್ ಫಿಲಿಪ್, ಬೆನ್ ಮೆಕ್‌ಡರ್ಮಟ್, ಕ್ರಿಸ್ ಗ್ರೀನ್, ಮ್ಯಾಥ್ಯೂ ಶಾರ್ಟ್ ಮತ್ತು ಬೆನ್ ಡ್ವಾರ್ಶಿಯಶ್ ಅವಕಾಶ ಪಡೆದರು. ಸ್ಟೇಡಿಯಂಗೆ ಕರೆಂಟ್ ಕಟ್! ರಾಯ್‌ಪುರದ “ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂ’ ವಿಚಿತ್ರ ಕಾರಣಕ್ಕಾಗಿ ಸುದ್ದಿಯಾಯಿತು. ಇಲ್ಲಿನ ಸ್ಟೇಡಿಯಂನ ಆಡಳಿತ ಮಂಡಳಿ 2009ರಿಂದ ವಿದ್ಯುತ್ ಬಿಲ್‌ನ್ನೇ ಕಟ್ಟಿಲ್ಲ. ಬಾಕಿ ಮೊತ್ತ ಎಷ್ಟು ಗೊತ್ತೇ? ಬರೋಬ್ಬರಿ 3.16 ಕೋಟಿ ರೂ! ಹೀಗಾಗಿ 2018ರಿಂದ ಈ ಸ್ಟೇಡಿಯಂನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ಶುಕ್ರವಾರ ಟಿ20 ಪಂದ್ಯ ನಡೆಯುವುದೇ ಅನುಮಾನ ಎಂಬ ಸ್ಥಿತಿ ಉದ್ಭವಿಸಿತ್ತು!
ಆದರೆ ಇದು “ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘ’ದ ಮರ್ಯಾದೆ ಪ್ರಶ್ನೆ. ಅದು “ಚತ್ತೀಸ್‌ಗಢ ರಾಜ್ಯ ಪವರ್ ಡಿಸ್ಟ್ರಿಬ್ಯೂಶನ್ ಕಂಪನಿ ಲಿಮಿಟೆಡ್’ನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲು ಕೋರಿಕೆ ಸಲ್ಲಿಸಿತು. ಹೀಗಾಗಿ 200 ಕಿಲೋ ವ್ಯಾಟ್ ವಿದ್ಯುತ್ ನೀಡಲಾಯಿತು. ಆದರೆ ಈ ಸಂಪರ್ಕದಿಂದ ಪಂದ್ಯಕ್ಕೇನೂ ಲಾಭ ಇರಲಿಲ್ಲ. ಪ್ರೇಕ್ಷಕರ ಗ್ಯಾಲರಿ ಮತ್ತು ಪ್ರಸ್ ಬಾಕ್ಸ್‌ಗೆ ಮಾತ್ರವೇ ಇದು ಸಾಕಾಗುತ್ತಿತ್ತು.
ಹೀಗಾಗಿ ಶುಕ್ರವಾರದ ಪಂದ್ಯಕ್ಕೆ “ಛತ್ತೀಸ್‌ಗಢ ಕ್ರಿಕೆಟ್ ಸಂಘ’ 10 ಲಕ್ಷ ರೂ. ಮುಂಗಡ ಪಾವತಿಸಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯವಲ್ಲಿ ಯಶಸ್ವಿಯಾಯಿತು. ಸ್ಕೋರ್ ಪಟ್ಟಿ
ಭಾರತ
ಯಶಸ್ವಿ ಜೈಸ್ವಾಲ್ ಸಿ ಮೆಕ್‌ಡರ್ಮಟ್ ಬಿ ಹಾರ್ಡಿ 37
ಆರ್. ಗಾಯಕ್ವಾಡ್ ಸಿ ಡ್ವಾರ್ಶಿಯಸ್ ಬಿ ಸಂಘಾ 32
ಶ್ರೇಯಸ್ ಅಯ್ಯರ್ ಸಿ ಗ್ರೀನ್ ಬಿ ಸಂಘಾ 8
ಸೂರ್ಯಕುಮಾರ್ ಸಿ ವೇಡ್ ಬಿ ಡ್ವಾರ್ಶಿಯಸ್ 1
ರಿಂಕು ಸಿಂಗ್ ಎಲ್‌ಬಿಡಬ್ಲ್ಯು ಬೆಹ್ರೆಂಡಾರ್ಫ್ 46
ಜಿತೇಶ್ ಶರ್ಮ ಸಿ ಹೆಡ್ ಬಿ ಡ್ವಾರ್ಶಿಯಸ್ 35
ಅಕ್ಷರ್ ಪಟೇಲ್ ಸಿ ಸಂಘಾ ಬಿ ಡ್ವಾರ್ಶಿಯಸ್ 0
ದೀಪಕ್ ಚಹರ್ ಸಿ ಗ್ರೀನ್ ಬಿ ಬೆಹ್ರೆಂಡಾರ್ಫ್ 0
ರವಿ ಬಿಷ್ಣೋಯಿ ರನೌಟ್ 4
ಆವೇಶ್ ಖಾನ್ ಔಟಾಗದೆ 1
ಇತರ 10
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 174
ವಿಕೆಟ್ ಪತನ: 1-50, 2-62, 3-63, 4-114, 5-167, 6-168, 7-168, 8-169, 9-174.
ಬೌಲಿಂಗ್: ಆರನ್ ಹಾರ್ಡಿ 3-1-20-1
ಜೇಸನ್ ಬೆಹ್ರೆಂಡಾರ್ಫ್ ì 4-0-32-2
ಬೆನ್ ಡ್ವಾರ್ಶಿಯಸ್ 4-0-40-3
ಕ್ರಿಸ್ ಗ್ರೀನ್ 4-0-36-0
ತನ್ವೀರ್ ಸಂಘಾ 4-0-30-2
ಮ್ಯಾಥ್ಯೂ ಶಾರ್ಟ್ 1-0-10-0 ಆಸ್ಟ್ರೇಲಿಯ
ಟ್ರ್ಯಾವಿಸ್ ಹೆಡ್ ಸಿ ಮುಕೇಶ್ ಬಿ ಅಕ್ಷರ್ 31
ಜೋಶ್ ಫಿಲಿಪ್ ಬಿ ಬಿಷ್ಣೋಯಿ 8
ಬೆನ್ ಮೆಕ್‌ಡರ್ಮಟ್ ಬಿ ಅಕ್ಷರ್ 19
ಆರನ್ ಹಾರ್ಡಿ ಬಿ ಅಕ್ಷರ್ 8
ಟಿಮ್ ಡೇವಿಡ್ ಸಿ ಜೈಸ್ವಾಲ್ ಬಿ ಚಹರ್ 19
ಮ್ಯಾಥ್ಯೂ ಶಾರ್ಟ್ ಸಿ ಜೈಸ್ವಾಲ್ ಬಿ ಚಹರ್ 22
ಮ್ಯಾಥ್ಯೂ ವೇಡ್ ಔಟಾಗದೆ 36
ಬೆನ್ ಡ್ವಾರ್ಶಿಯಸ್ ಬಿ ಆವೇಶ್ 1
ಕ್ರಿಸ್ ಗ್ರೀನ್ ಔಟಾಗದೆ 2
ಇತರ 8
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 154
ವಿಕೆಟ್ ಪತನ: 1-40, 2-44, 3-52, 4-87, 5-107, 6-126, 7-133.
ಬೌಲಿಂಗ್: ದೀಪಕ್ ಚಹರ್ 4-0-44-2
ಮುಕೇಶ್ ಕುಮಾರ್ 4-0-42-0
ರವಿ ಬಿಷ್ಣೋಯಿ 4-0-17-1
ಅಕ್ಷರ್ ಪಟೇಲ್ 4-0-16-3
ಆವೇಶ್ ಖಾನ್ 4-0-33-1